ಸಾರಾಂಶ
- ಅಂಚೆಚೋಮನಹಳ್ಳಿ ಬಳಿ ರಾ. ಹೆದ್ದಾರಿಯಿಂದ ಬಾಪೂಜಿ ಕಾಲೋನಿ ತನಕ ₹50 ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ
ಕನ್ನಡಪ್ರಭ ವಾರ್ತೆ, ಕಡೂರುತಮ್ಮ ರಾಜಕೀಯ ವಿರೋಧಿಗಳ ಮಾತುಗಳಿಗೆ ಗಮನ ಕೊಡದೆ ಕ್ಷೇತ್ರದ ಅಭಿವೃದ್ಧಿಯತ್ತ ಗಮನ ಹರಿಸಿ ನನ್ನ ಕೆಲಸಗಳ ಮೂಲಕ ಉತ್ತರಿಸುವೆ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಕಡೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಅಂಚೆಚೋಮನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಿಂದ ಬಾಪೂಜಿ ಕಾಲೋನಿ ತನಕ ₹50 ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಗಾಂಧೀಜಿಯವರ ಹೆಸರಿನ ಗ್ರಾಮ ಮೂಲ ಸೌಕರ್ಯದಿಂದ ವಂಚಿತವಾಗಿತ್ತೆಂಬುದು ವಿಪರ್ಯಾಸ.. ಒಂದು ಶಾಲೆ ಸಹ ಇಲ್ಲದ್ದನ್ನು ಮನಗಂಡು ಶಾಸಕನಾದ ಕೂಡಲೇ ₹16 ಲಕ್ಷ ವೆಚ್ಚದಲ್ಲಿ ವಿವೇಕ ಶಾಲೆ ನಿರ್ಮಾಣ ಮಾಡಲು ಕ್ರಮವಹಿಸಿದೆ. ಇದೀಗ ಗ್ರಾಮಕ್ಕೆ ಸುಸಜ್ಜಿತ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಇದಲ್ಲದೆ ಗ್ರಾಮದಲ್ಲಿ ಅಗತ್ಯ ಮೂಲ ಸೌಕರ್ಯವನ್ನು ಹಂತ ಹಂತ ವಾಗಿ ಕಲ್ಪಿಸಲು ಕ್ರಮ ಕೈಗೊಂಡಿದ್ದೇನೆ ಎಂದರು.ಕ್ಷೇತ್ರದ ರಸ್ತೆಗಳ ಸುಧಾರಣೆಗೆ ಆದ್ಯತೆ ನೀಡಲಾಗಿದೆ. ಈಗಾಗಲೇ ಕಡೂರು- ಮರವಂಜಿ ರಾಜ್ಯ ಹೆದ್ದಾರಿಗೆ ₹6 ಕೋಟಿ ವೆಚ್ಚದಲ್ಲಿ ಮರುಡಾಂಬರೀಕರಣ ಕಾಮಗಾರಿ ಪ್ರಗತಿಯಲ್ಲಿದೆ. ಕ್ಷೇತ್ರದಲ್ಲಿ ಸಣ್ಣ ಗ್ರಾಮಗಳಲ್ಲೂ ಒಳ ರಸ್ತೆಗಳು ನಿರ್ಮಾಣ ವಾಗುತ್ತಿದೆ. ಸಂಪರ್ಕ ರಸ್ತೆಯೇ ಇಲ್ಲದಿದ್ದ ಲಿಂಗ್ಲಾಪುರಕ್ಕೆ ₹55 ಲಕ್ಷ ವೆಚ್ಚದಲ್ಲಿ ರಸ್ತೆ ನಿರ್ಮಾಣವಾಗಿದೆ. ಸೇವಾಪುರಕ್ಕೆ ₹50 ಲಕ್ಷ ವೆಚ್ಚದಲ್ಲಿ ರಸ್ತೆಯಾಗುತ್ತಿದೆ. ನಂಜಪ್ಪನ ಹಳ್ಳಿ ಒಂದಕ್ಕೆ ₹50 ಲಕ್ಷ ಅನುದಾನ ನೀಡಲಾಗಿದೆ. ವಿವಿಧ ದೇವಸ್ಥಾನಗಳಿಗೆ ₹20 ಲಕ್ಷಕ್ಕೂ ಹೆಚ್ಚು ಅನುದಾನ ನೀಡಿದ್ದೇನೆ. ಈ ಭಾಗದ ಕೆರೆಗಳಿಗೆ ನೀರು ಹರಿಸುವ ಭಧ್ರಾ ಉಪಕಣಿವೆ ಯೋಜನೆ ಕಾಮಗಾರಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ಸರ್ಕಾರದಲ್ಲಿ ಹಣವಿಲ್ಲ ಎನ್ನುತ್ತಿರುವ ವಿರೋಧ ಪಕ್ಷಗಳು ಹಿಂದೆ ಗ್ರಾಮೀಣ ಭಾಗದಲ್ಲಿ ಇಷ್ಟು ಕಾಮಗಾರಿಗಳು ನಡೆದಿತ್ತೇ ಎಂಬುದನ್ನು ಪ್ರಶ್ನಿಸಿದ ಅವರು ವಿರೋಧಿಗಳ ಮಾತಿಗೆ ಗಮನ ಕೊಡದೆ ಕೇವಲ ಕ್ಷೇತ್ರದ ಅಭಿವೃದ್ಧಿಯತ್ತ ಮಾತ್ರ ಗಮನ ಹರಿಸಿ ನನ್ನ ಕೆಲಸಗಳ ಮೂಲಕ ಉತ್ತರಿಸುವೆ ಎಂದರು. ಕೆರೆಸಂತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ರವಿನಾಯಕ್, ಸದಸ್ಯರಾದ ರೇಣುಕಾ ಮಂಜುನಾಥ್, ಸವಿತಾ ಪ್ರಸನ್ನ, ಕೆ.ಆರ್.ಐ.ಡಿ.ಬಿ. ಎಇಇ ಅಶ್ವಿನಿ ಇದ್ದರು.
ಇದೇ ಸಂದರ್ಭದಲ್ಲಿ ತಾಲೂಕಿನ ವೈ.ಮಲ್ಲಾಪುರದಲ್ಲಿ ಅಂಬೇಡ್ಕರ್ ನಗರ ಕಾಲೋನಿಗೆ ಸಂಪರ್ಕಿಸುವ ₹25 ಲಕ್ಷ ವೆಚ್ಚದ ಸಿ.ಸಿ.ರಸ್ತೆ ನಿರ್ಮಾಣಕ್ಕೂ ಚಾಲನೆ ನೀಡಿದರು. ಗ್ರಾಮದ ಮುಖಂಡರಾದ ಎಂ.ಆರ್.ಟಿ.ಸುರೇಶ್, ತಮ್ಮಯ್ಯ ಹಾಗು ಗ್ರಾಮಸ್ಥರು ಇದ್ದರು.17ಕೆಕೆಡಿಯು1.
ಶಾಸಕ ಕೆ.ಎಸ್.ಆನಂದ್ ಕಡೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಅಂಚೆಚೋಮನಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿಯಿಂದ ಬಾಪೂಜಿ ಕಾಲೋನಿವರೆಗೆ ₹50 ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು.