ಸಾರಾಂಶ
ಆಧುನಿಕ ವೈದ್ಯಕೀಯ ಕ್ಷೇತ್ರದ ಅನೇಕ ಸವಾಲುಗಳಿಗೆ ಪ್ರಾಚೀನ ಆಯುರ್ವೇದದಲ್ಲಿ ಉತ್ತರವಿದೆ. ಅದನ್ನು ಜಗತ್ತಿಗೆ ಸಾರಿ ಹೇಳುವ ಕೆಲಸವನ್ನು ಭಾರತೀಯರಾದ ನಾವು ಮಾಡಬೇಕಿದೆ ಎಂದು ಹೆಬ್ಬಾಳ್ ವಿರಕ್ತ ಮಠದ ಶ್ರೀ ಮಹಾಂತ ರುದ್ರೇಶ್ವರ ಶಿವಾಚಾರ್ಯ ಸ್ವಾಮೀಜಿ ನುಡಿದಿದ್ದಾರೆ.
- ಧನ್ವಂತರಿ ಜಯಂತ್ಯುತ್ಸವ- ಉಪನ್ಯಾಸ ಕಾರ್ಯಕ್ರಮದಲ್ಲಿ ಹೆಬ್ಬಾಳ್ ಶ್ರೀ ಅಭಿಮತ - - - ಕನ್ನಡಪ್ರಭ ವಾರ್ತೆ ದಾವಣಗೆರೆ
ಆಧುನಿಕ ವೈದ್ಯಕೀಯ ಕ್ಷೇತ್ರದ ಅನೇಕ ಸವಾಲುಗಳಿಗೆ ಪ್ರಾಚೀನ ಆಯುರ್ವೇದದಲ್ಲಿ ಉತ್ತರವಿದೆ. ಅದನ್ನು ಜಗತ್ತಿಗೆ ಸಾರಿ ಹೇಳುವ ಕೆಲಸವನ್ನು ಭಾರತೀಯರಾದ ನಾವು ಮಾಡಬೇಕಿದೆ ಎಂದು ಹೆಬ್ಬಾಳ್ ವಿರಕ್ತ ಮಠದ ಶ್ರೀ ಮಹಾಂತ ರುದ್ರೇಶ್ವರ ಶಿವಾಚಾರ್ಯ ಸ್ವಾಮೀಜಿ ನುಡಿದರು.ನಗರದ ಕುವೆಂಪು ಕನ್ನಡ ಭವನದಲ್ಲಿ ಮಂಗಳವಾರ ಪಾರಂಪರಿಕ ವೈದ್ಯ ಪರಿಷತ್ತು- ಕರ್ನಾಟಕದಿಂದ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಧನ್ವಂತರಿ ಜಯಂತ್ಯುತ್ಸವ ಹಾಗೂ ಉಚಿತ ಚಿಕಿತ್ಸಾ ಶಿಬಿರ ಮತ್ತು ಹಿತ್ತಲ ಗಿಡವೇ ಮದ್ದು ಉಪನ್ಯಾಸ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ಪ್ರಾಚೀನ ಋಷಿಮುನಿಗಳ ಬಳುವಳಿಯಾದ ಆಯುರ್ವೇದ ಪದ್ಧತಿ ಬಗ್ಗೆ ಪ್ರತಿಯೊಬ್ಬರೂ ಅರಿಯಬೇಕು ಎಂದರು.
ಅನಾದಿಯಿಂದಲೂ ಋಷಿ, ಮುನಿಗಳು ಜೀವಸಂಕುಲವನ್ನು ಕಾಡುವ ಎಲ್ಲ ಕಾಯಿಲೆಗಳಿಗೂ ಗಿಡಮೂಲಿಕೆಗಳಿಂದಲೇ ಔಷಧಿ ತಯಾರಿಸಿ, ನೀಡುವ ಮೂಲಕ ಗುಣಪಡಿಸುತ್ತಿದ್ದರು. ಮನೆ ಆವರಣದಲ್ಲೇ ಗಿಡಮೂಲಿಕೆಗಳನ್ನು ಬೆಳೆದು, ಸಣ್ಣಪುಟ್ಟ ಕೆಮ್ಮು, ಶೀತ, ಜ್ವರಕ್ಕೆ ಔಷಧಿ ಸಿಗುವಂತೆ ನೋಡಿಕೊಳ್ಳುತ್ತಿದ್ದರು. ಭೂ ಲೋಕವನ್ನು ಸೃಷ್ಟಿಸುವ ಸೃಷ್ಟಿಕರ್ತ ಬ್ರಹ್ಮನು ಜನರ ಜೀವನಕ್ಕೆ ಸುಗಮವಾಗಲೆಂದು ಅಗ್ನಿ, ಜಲ, ವಾಯು, ಆಕಾಶವನ್ನು ಸೃಷ್ಟಿಸಿದ. ಅನಂತರ ಜೀವರಾಶಿಗಳಿಗೆ ರೋಗರುಜಿನ ಬಂದರೆ ಗುಣಪಡಿಸುವುದು ಹೇಗೆಂದು ಯೋಚಿಸಿ, ಧನ್ವಂತರಿಯನ್ನು ಸೃಷ್ಟಿಸಿದ. ಇದರಿಂದ ಆಯುರ್ವೇದ ಪದ್ಧತಿ ಬೆಳೆದುಬಂದಿತು. ಈಗಿನ ಆಧುನಿಕ ಯುಗದಲ್ಲಿ ಮನೆಯಲ್ಲೇ ಔಷಧ ಗುಣವಿರುವ ವಸ್ತುಗಳಿಂದಲೇ ಔಷಧ ತಯಾರಿಸಿಕೊಂಡು, ಸಣ್ಣಪುಟ್ಟ ರೋಗಗಳ ಗುಣಪಡಿಸಬಹುದು. ಆದರೆ, ಜನರು ಮಾತ್ರ ಆಸ್ಪತ್ರೆಗಳಿಗೆ ಎಡತಾಕುತ್ತಿದ್ದಾರೆ ಎಂದು ತಿಳಿಸಿದರು.ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಮಾತನಾಡಿ, ಗ್ರಾಮೀಣರು ಕೆಮ್ಮು, ಶೀತ, ಜ್ವರ ಬಂದರೆ ನಾಟಿ ಪಂಡಿತರು ಔಷಧೋಪಚಾರ ಮಾಡುತ್ತಿದ್ದರು. ವಾಸಿ ಆಗದಿದ್ದರೆ ಹೆಬ್ಬಾಳ್ ಮಠದಲ್ಲಿ ಔಷಧಿ ಕೊಡುತ್ತಿದ್ದರು. ಹೆಬ್ಬಾಳ್ ವಿರಕ್ತ ಮಠದ ಶ್ರೀಗಳು ವೈದ್ಯಕೀಯ ಕ್ಷೇತ್ರಕ್ಕಷ್ಟೇ ಅಲ್ಲ, ಕೃಷಿ, ಕಲೆ, ಸಾಹಿತ್ಯ ಕ್ಷೇತ್ರಕ್ಕೂ ಕೊಡುಗೆ ನೀಡುತ್ತಿದ್ದಾರೆ ಎಂದರು.
ಪಾರಂಪರಿಕ ವೈದ್ಯ ಪರಿಷತ್ತಿನ ತಾಲೂಕು ಅಧ್ಯಕ್ಷೆ, ಪಾರಂಪರಿಕ ವೈದ್ಯೆ ಶಿವಲಿಂಗಮ್ಮ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ತು ನಿಕಟಪೂರ್ವ ರಾಜ್ಯಾಧ್ಯಕ್ಷ, ಪಾರಂಪರಿಕ ವೈದ್ಯ ನೇರ್‍ಲಿಗೆ ಗುರುಸಿದ್ದಪ್ಪ, ಜಿಲ್ಲಾ ಸಂಚಾಲಕಿ, ವೈದ್ಯೆ ಕೆ.ಎಂ.ಪುಷ್ಪಾ, ಪರಿಷತ್ತು ಉಪಾಧ್ಯಕ್ಷೆ ಕೆ.ಪಿ.ಲತಾ, ಜಿಲ್ಲಾ ಸಂಚಾಲಕಿ, ವೈದ್ಯೆ ಪುಷ್ಪಲತಾ ಇತರರು ಇದ್ದರು. ಪರಿಷತ್ತು ಕಾರ್ಯದರ್ಶಿ ಮಮತಾ ನಾಗರಾಜ ನಿರೂಪಣೆ ಮಾಡಿದರು.- - - -29ಕೆಡಿವಿಜಿ2:
ಉಪನ್ಯಾಸ ಕಾರ್ಯಕ್ರಮವನ್ನು ಶ್ರೀ ಮಹಾಂತರ ರುದ್ರೇಶ್ವರ ಸ್ವಾಮೀಜಿ ಉದ್ಘಾಟಿಸಿದರು.