ಸೋಲನ್ನು ಗೆಲುವಾಗಿ ಮಾರ್ಪಡಿಸಿಕೊಂಡ ಆತ್ಮಕಥನ ಅಂತರಾಳ-ಸದಾಶಿವ ಸ್ವಾಮೀಜಿ

| Published : Jan 20 2025, 01:30 AM IST

ಸೋಲನ್ನು ಗೆಲುವಾಗಿ ಮಾರ್ಪಡಿಸಿಕೊಂಡ ಆತ್ಮಕಥನ ಅಂತರಾಳ-ಸದಾಶಿವ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡದಲ್ಲಿ ಮಹಿಳಾ ಆತ್ಮಕಥೆಗಳು ಬಂದಿರುವುದು ವಿರಳ, ಬದುಕಿನ ಸೋಲಿನಲ್ಲಿ ನಲುಗಿದ ಹಾಗೂ ಸೋಲನ್ನು ಗೆಲುವಾಗಿ ಮಾರ್ಪಡಿಸಿಕೊಂಡ ಆತ್ಮಕಥನ ಲೇಖಕಿ ಲತಾ ಹಳಕೊಪ್ಪ ಅವರ ಅಂತರಾಳ ಕೃತಿಯಲ್ಲಿ ಕಂಡು ಬರುತ್ತದೆ ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು. ಇಲ್ಲಿನ ಶಿವಶಕ್ತಿ ಪ್ಯಾಲೇಸ್‌ನಲ್ಲಿ ಶ್ರಮಿಕ ಪ್ರಕಾಶನ ಹೊರತಂದಿರುವ ನಿವೃತ್ತ ಶಿಕ್ಷಕಿ ಹಾಗೂ ಹಿರಿಯ ಲೇಖಕಿ ಲತ ಹಳಕೊಪ್ಪ ಅವರ ಅಂತರಾಳ ಆತ್ಮಕಥನ ಕೃತಿಯನ್ನು ಭಾನುವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಹಾವೇರಿ:ಕನ್ನಡದಲ್ಲಿ ಮಹಿಳಾ ಆತ್ಮಕಥೆಗಳು ಬಂದಿರುವುದು ವಿರಳ, ಬದುಕಿನ ಸೋಲಿನಲ್ಲಿ ನಲುಗಿದ ಹಾಗೂ ಸೋಲನ್ನು ಗೆಲುವಾಗಿ ಮಾರ್ಪಡಿಸಿಕೊಂಡ ಆತ್ಮಕಥನ ಲೇಖಕಿ ಲತಾ ಹಳಕೊಪ್ಪ ಅವರ ಅಂತರಾಳ ಕೃತಿಯಲ್ಲಿ ಕಂಡು ಬರುತ್ತದೆ ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.

ಇಲ್ಲಿನ ಶಿವಶಕ್ತಿ ಪ್ಯಾಲೇಸ್‌ನಲ್ಲಿ ಶ್ರಮಿಕ ಪ್ರಕಾಶನ ಹೊರತಂದಿರುವ ನಿವೃತ್ತ ಶಿಕ್ಷಕಿ ಹಾಗೂ ಹಿರಿಯ ಲೇಖಕಿ ಲತ ಹಳಕೊಪ್ಪ ಅವರ ಅಂತರಾಳ ಆತ್ಮಕಥನ ಕೃತಿಯನ್ನು ಭಾನುವಾರ ಬಿಡುಗಡೆಗೊಳಿಸಿ ಅವರು ಮಾತನಾಡಿದರು.ಲತಾ ಹಳಕೊಪ್ಪ ಅವರು ತಮ್ಮ ಆತ್ಮಕಥೆಯಲ್ಲಿ ನಮ್ಮ ಸಮಾಜದೊಳಗಿನ ವಿಚಿತ್ರ, ವಿಸ್ಮಯ, ಬೆರಗು, ಗೊಂದಲಗಳೆಲ್ಲವನ್ನೂ ದಾಟಿ ದಾಖಲಿಲ್ಲದ ಬದುಕಿನ ಬೇರುಗಳನ್ನು ಹುಡುಕಿ ದಾಖಲುಗೊಳಿಸುವ ಕಾರ್ಯ ನಿಜಕ್ಕೂ ಪ್ರಶಂಸಾರ್ಹ. ಪುರುಷರ ಆತ್ಮಕಥೆಗಳು ಸ್ವ-ಕೇಂದ್ರಿತ ಆಗಿದ್ದರೆ ಮಹಿಳಾ ಆತ್ಮಕಥೆಗಳು ಕುಟುಂಬ ಕೇಂದ್ರಿತವಾಗಿರುತ್ತವೆ. ಈ ಕೃತಿಯ ಮೂಲಕ ಅದನ್ನು ಸಾಬೀತು ಮಾಡುವ ಮೂಲಕ ಲೇಖಕಿ ಹೊಸ ಪ್ರಯತ್ನ ಮಾಡಿದ್ದಾರೆ. ಅನುಭವ ಕಥನ ಮಹಿಳೆಯರ ವಿಶೇಷ ಗುಣ ಅದು ಅವರ ವಿಶೇಷ ಶಕ್ತಿಯೂ ಹೌದು ಎಂದು ಅವರು ಹೇಳಿದರು.ಸಾನ್ನಿಧ್ಯ ವಹಿಸಿದ್ದ ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಮಾತನಾಡಿ, ಅನುಭವ ಕಥನ ಶಕ್ತಿಶಾಲಿ ಮಾಧ್ಯಮ, ಅನುಭವ ಕಥನ ನೇರವಾಗಿ ಓದುಗರನ್ನು ಮುಟ್ಟುತ್ತದೆ ಎಂದರು.ಸಮ್ಮುಖ ವಹಿಸಿದ್ದ ಹರಸೂರು ಬಣ್ಣದಮಠ ಅಭಿನವ ರುದ್ರಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಜಿಲ್ಲೆಯಲ್ಲಿ ಮಹಿಳೆಯರ ಆತ್ಮಕತೆಗಳು ಬಂದಿರಲಿಲ್ಲ. ಈನಿಟ್ಟಿನಲ್ಲಿ ಲತಾ ಹಳಕೊಪ್ಪ ಅವರು ಯಾವದೇ ಶಬ್ದಾಡಂಬರಗಳಿಲ್ಲದೇ ತಮ್ಮ ಅನುಭವಗಳನ್ನು ಕೃತಿಯಲ್ಲಿ ದಾಖಲಿಸುವ ಮೂಕ ಓದುಗನಿಗೆ ಮುಖಾ-ಮುಖಿಯಾಗಿದ್ದಾರೆ ಎಂದರು.ಹಿರಿಯ ಲೇಖಕಿ ಡಾ.ಪುಷ್ಪಾವತಿ ಶೆಲವಡಿಮಠ ಕೃತಿ ಪರಿಚಯಿಸಿ, ಕನ್ನಡ ಸಾಹಿತ್ಯದಲ್ಲಿ ಕೆಲವೇ ಕೆಲವು ಆತ್ಮಕಥೆಗಳು ಪ್ರಕಟವಾಗಿದ್ದು, ಅವುಗಳ ಸಾಲಿಗೆ ಲೇಖಕಿ ಲತಾ ಹಳಕೊಪ್ಪ ಅವರು ಅಂತರಾಳ ಆತ್ಮಕಥನ ಸೇರುತ್ತದೆ. ಮಹಿಳೆಗೆ ಮನೆಯಿಂದ ಪ್ರೋತ್ಸಾಹ ದೊರೆತರೆ ಈ ರೀತಿಯ ಸಾಧನೆ ಸಾಧ್ಯ ಎನ್ನುವುದಕ್ಕೆ ಕೆ.ಮಂಜಪ್ಪ ಅವರ ಕುಟುಂಬ ವರ್ಗ ನೀಡಿದ ಪ್ರೋತ್ಸಾಹದಿಂದ ಲತಾ ಹಳಕೊಪ್ಪ ಅವರಿಂದ ಕನ್ನಡ ಪ್ರಮುಖ ಆತ್ಮಕಥೆ ಎನ್ನಬಹುದಾದ ಅಂತರಾಳ ಕೃತಿ ಹೊರಬಂದಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಮಾತನಾಡಿ, ಲತಾ ಹಳಕೊಪ್ಪ ಅವರು ಚಿತ್ರಕಲೆ, ಸಾಹಿತ್ಯ, ಮಹಿಳಾ ಸಂಘಟನೆ, ಹೀಗೆ ಹಲವು ರಂಗಗಳಲ್ಲಿ ವಿಸ್ತರಿಸಿಕೊಂಡಿದ್ದು, ತಮ್ಮ ಬದುಕಿನ ಅನಾರೋಗ್ಯದ ದಿನಗಳ ಸಂಕಟಗಳನ್ನು ಬರವಣಿಗೆಯ ಮೂಲಕ ದಾಖಲಿಸುತ್ತಾ ವಿಭಿನ್ನವಾಗಿ ನಿಲ್ಲುತ್ತಾರೆ. ವ್ಯಕ್ತಿತ್ವವೊಂದು ಇಲ್ಲಿ ಮಾತಾಡಿದಂತಿದೆ. ಮಧ್ಯಮವರ್ಗದ ಮಹಿಳೆಯ ಆತ್ಮ ನಿವೇದನೆಯಾಗಿ ಸಂಭ್ರಮಗಳ ಭಿನ್ನದೇ ಈ ಆತ್ಮಕಥೆಯಲ್ಲಿದೆ ಎಂದರು.ಲೇಖಕಿ ಲತಾ ಹಳಕೊಪ್ಪ ಅವರು ತಮ್ಮ ಅನಿಸಿಕೆ ಹಂಚಿಕೊಂಡರು. ಸಮಾರಂಭದಲ್ಲಿ ಲೇಖಕಿ ಲತಾ ಹಳಕೊಪ್ಪ ಅವರ ಗುರುವೃಂದದವರನ್ನು ಸನ್ಮಾನಿಸಲಾಯಿತು.ಮುಖ್ಯ ಅತಿಥಿಗಳಾಗಿ ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಸದಸ್ಯ ಜಿ.ಟಿ. ಚಂದ್ರಶೇಖರಪ್ಪ, ಮಲ್ಲಣ್ಣ ಕೊಳ್ಳಿ, ಎಸ್.ವಿ. ತುಪ್ಪದ, ಹಿರಿಯ ಲೇಖಕಿಯರಾದ ಸಿದ್ದುಮತಿ ನೆಲವಿಗಿ, ಲೀಲಾವತಿ ಭೋಜರಾಜ ಪಾಟೀಲ, ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ನಗರಸಭೆ ಉಪಾಧ್ಯಕ್ಷ ಮಲ್ಲಣ್ಣ ಸಾತೇನಹಳ್ಳಿ, ಕೆ. ಮಂಜಪ್ಪ ಮತ್ತಿತರರು ಭಾಗವಹಿಸಿದ್ದರು.ತೇಜಸ್ವಿನಿ ಮಂಜಪ್ಪ ಸ್ವಾಗತಿಸಿದರು. ಡಾ.ರಮೇಶ ತೆವರಿ ನಿರೂಪಿಸಿದರು. ಮಾಲತೇಶ ಅಂಗೂರ ಪ್ರಾಸ್ತಾವಿಕ ಮಾತನಾಡಿದರು. ಪ್ರೊ.ಜಿ.ಬಿ. ಪೂಜಾರ ವಂದಿಸಿದರು.