ಸಂಭ್ರಮದಿಂದ ನಡೆದ ಅಂತರವಳ್ಳಿ ಬಸವೇಶ್ವರ ದೇವರ ಕೊಂಡೋತ್ಸವ

| Published : Apr 03 2024, 01:31 AM IST

ಸಂಭ್ರಮದಿಂದ ನಡೆದ ಅಂತರವಳ್ಳಿ ಬಸವೇಶ್ವರ ದೇವರ ಕೊಂಡೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಅಂತರವಳ್ಳಿ ಬಸವೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಮೂರು ದಿನಗಳ ಕಾಲ ವಿಜೃಂಭಣೆಯಿಂದ ವಿವಿಧ ಪೂಜೆಗಳು, ಜಾತ್ರಾ ಮಹೋತ್ಸವ ನಡೆಯಿತು. ಸಿದ್ದೇಶ್ವರ ಬೆಟ್ಟದ ಸನ್ನಿಧಿಯಲ್ಲಿ ಪೂಜೆ ಪುನಸ್ಕಾರಗಳು ನಡೆದ ನಂತರ ಅನ್ನಸಂತರ್ಪಣೆ, ಎಳವಾರ ಪಾನಕದ ಬಂಡಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಬಂದು ಕೊಂಡದ ಬಾಯಿಗೆ ಸೌದೆಯನ್ನು ಹಾಕಲಾಯಿತು.

ಕನ್ನಡಪ್ರಭ ವಾರ್ತೆ ಹಲಗೂರು

ಅಂತರವಳ್ಳಿ ಬಸವೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಮಂಗಳವಾರ ಬೆಳಗಿನ ಜಾವ ಕೊಂಡೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ಭಕ್ತಿಭಾವದಿಂದ ನಡೆಯಿತು.

ಮೂರು ದಿನಗಳ ಕಾಲ ವಿಜೃಂಭಣೆಯಿಂದ ವಿವಿಧ ಪೂಜೆಗಳು, ಜಾತ್ರಾ ಮಹೋತ್ಸವ ನಡೆಯಿತು. ಭಾನುವಾರ ಸಿದ್ದೇಶ್ವರ ಬೆಟ್ಟದ ಸನ್ನಿಧಿಯಲ್ಲಿ ಪೂಜೆ ಪುನಸ್ಕಾರಗಳು ನಡೆದ ನಂತರ ಅನ್ನಸಂತರ್ಪಣೆ , ಸೋಮವಾರ ಎಳವಾರ ಪಾನಕದ ಬಂಡಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಬಂದು ಕೊಂಡದ ಬಾಯಿಗೆ ಸೌದೆಯನ್ನು ಹಾಕಲಾಯಿತು.

ಮಂಗಳವಾರ ಬೆಳಗಿನ ಜಾವ ಯತ್ತಂಬಾಡಿ ರಸ್ತೆಯ ಗಂಗಾ ತಡಿಯ ಕೆರೆಯಲ್ಲಿ ದೇವರ ಕರಗಗಳಿಗೆ ಹೂವು ಹೊಂಬಾಳೆ ಮಾಡಿಕೊಂಡು ವಿವಿಧ ಪುಷ್ಪಗಳಿಂದ ಅಲಂಕರಿಸಲಾಯಿತು. ಅರ್ಚಕರಾದ ಸೋಮಶೇಖರ್ ಕರಗವನ್ನು ಹೊತ್ತು ಮಡಿವಾಳ ಹಾಸಿದ ಮಡಿ ಮೇಲೆ ಮೆರವಣಿಗೆ ಮುಖಾಂತರ ಬಾಯಿ ಬೀಗದವರು ಹಾಗೂ ಮುತ್ತೈದೆಯರು ಪೂರ್ಣ ಕುಟುಂಬದೊಡನೆ ಬಸವ ದೇವರ ಜೊತೆಯಲ್ಲಿ ದೇವಸ್ಥಾನದ ಆವರಣಕ್ಕೆ ಬಂದಾಗ ಮೊದಲು ಬಸವ ಕೊಂಡದಲ್ಲಿ ಹೋದ ನಂತರ ಅರ್ಚಕರಾದ ಸೋಮಶೇಖರ್ ದೇವರ ಕರಗನ ಹೊತ್ತು ಕೊಂಡವನ್ನು ಹಾಯ್ದರು.

3 ವರ್ಷಗಳ ಹಿಂದೆ ದೇವರ ಕರಗ ಹೊತ್ತ ಅರ್ಚಕರು ಅಗ್ನಿ ಕೊಂಡ ಹಾಯಲು ವಿಳಂಬವಾದ ಕಾರಣ ಬಸಪ್ಪ ತಾನು ಮೊದಲು ಅಗ್ನಿ ಕೊಂಡ ಹಾಯ್ದು ಎಲ್ಲರಲ್ಲೂ ಆಶ್ಚರ್ಯ ಸೃಷ್ಟಿಸಿತ್ತು. ಈಗ ಮೂರು ವರ್ಷಗಳಿಂದ ಅದೇ ಪರಂಪರೆ ಮುಂದುವರೆದಿದೆ. ಇದು ಒಂದು ವಿಸ್ಮಯವಾಗಿ ಉಳಿದಿದೆ.

ಮಂಗಳವಾರ ಮಧ್ಯಾಹ್ನ ಗ್ರಾಮದಲ್ಲಿ ಸಿದ್ದೇಶ್ವರ ಸ್ವಾಮಿ ಬಸವೇಶ್ವರ ಸ್ವಾಮಿ ರಾಕ್ಕಸಮ್ಮ ದೇವರ ಮೆರವಣಿಗೆ ನಡೆಸಲಾಯಿತು. ಅಪಾರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾದರು.