ವೈಜ್ಞಾನಿಕ ಮತ್ತು ಸಮಗ್ರ ಅಭಿವೃದ್ಧಿಗೆ ಹಾಗೂ ಭವಿಷ್ಯದ ಮಾನವನ ಸ್ಥಿರತೆಗೆ ಮಾನವಶಾಸ್ತ್ರದ ಪಾತ್ರ ಬಹಳ ಇದೆ. ಭಾರತ ಕೇವಲ ಆರ್ಥಿಕ ಕ್ಷೇತ್ರದಲ್ಲಿ ಮಾತ್ರವಲ್ಲದೆ ಮಾನವನ ಅಭಿವೃದ್ಧಿ ಸೂಚ್ಯಂಕದ ಹೆಚ್ಚಿಸುವಲ್ಲಿ ಮಹತ್ವ ಪಡೆದುಕೊಂಡಿದೆ ಎಂದು ಪ್ರೊ. ಅಜಿತ ಜೈಸ್ವಾಲ್ ಹೇಳಿದರು.

ಧಾರವಾಡ:

ದೇಶದ ಸಮಗ್ರ ಅಭಿವೃದ್ಧಿಯಲ್ಲಿ ಮಾನವಶಾಸ್ತ್ರದ ಪಾತ್ರ ಹಿರಿದು ಎಂದು ಪ್ರೊ. ಅಜಿತ ಜೈಸ್ವಾಲ್ ಹೇಳಿದರು.

ನಗರದ ಸಿಎಂಡಿಆರ್‌ ಸಂಸ್ಥೆಯು ಕರ್ನಾಟಕ ಕಲಾ ಮತ್ತು ವಿಜ್ಞಾನ ಕಾಲೇಜಿನ ಮಾನವಶಾಸ್ತ್ರ ವಿಭಾಗದ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಭವಿಷ್ಯತ್ತಿನ ಮಾನವಶಾಸ್ತ್ರ ಮತ್ತು ವಿಕಸಿತ ಭಾರತ @2047 ಕುರಿತ ಉಪನ್ಯಾಸದಲ್ಲಿ ಮಾತನಾಡಿದ ಅವರು, ವೈಜ್ಞಾನಿಕ ಮತ್ತು ಸಮಗ್ರ ಅಭಿವೃದ್ಧಿಗೆ ಹಾಗೂ ಭವಿಷ್ಯದ ಮಾನವನ ಸ್ಥಿರತೆಗೆ ಮಾನವಶಾಸ್ತ್ರದ ಪಾತ್ರ ಬಹಳ ಇದೆ. ಭಾರತ ಕೇವಲ ಆರ್ಥಿಕ ಕ್ಷೇತ್ರದಲ್ಲಿ ಮಾತ್ರವಲ್ಲದೆ ಮಾನವನ ಅಭಿವೃದ್ಧಿ ಸೂಚ್ಯಂಕದ ಹೆಚ್ಚಿಸುವಲ್ಲಿ ಮಹತ್ವ ಪಡೆದುಕೊಂಡಿದೆ. ಆರೋಗ್ಯ, ಶಿಕ್ಷಣ, ತಂತ್ರಜ್ಞಾನ, ಡಿಜಿಟಲ್ ಇಂಡಿಯಾ, ಸ್ಕಿಲ್ ಇಂಡಿಯಾ ಸೇರಿದಂತೆ ಸಮಗ್ರ ಬೆಳವಣಿಗೆಗೆ ಮಾನವ ಶಾಸ್ತ್ರ ಅಧ್ಯಯನಗಳು ಹೆಚ್ಚು ಪೂರಕವಾಗಿವೆ ಎಂದರು.

ಭವಿಷ್ಯದ ಭಾರತದ ಬಡತನ, ಆರೋಗ್ಯ, ಆರ್ಥಿಕ, ತಂತ್ರಜ್ಞಾನ, ಮೂಲಭೂತ ಸೌಕರ್ಯ, ನಿರುದ್ಯೋಗ, ಹಸಿವು ಮತ್ತು ರಾಜಕೀಯ ಸೇರಿದಂತೆ ಅನೇಕ ಸಮಸ್ಯೆಗಳು ಇಂದಿಗೂ ಕೂಡ ಮುಂಚೂಣಿಯಲ್ಲಿವೆ. ಆದ್ದರಿಂದ ಈ ಎಲ್ಲ ಪ್ರಮುಖ ಸಮಸ್ಯೆಗಳಿಗೆ ಪರಿಹಾರ ಸೂಚಿಸುವಲ್ಲಿ ಮಾನವಶಾಸ್ತ್ರ ಅಧ್ಯಯನಗಳು ಹೆಚ್ಚು ಮಹತ್ವ ಪಡೆದಿವೆ ಎಂದ ಅವರು, ವಿಕಸಿತ ಭಾರತದ ಪರಿಕಲ್ಪನೆಯನ್ನು ಯಶಸ್ವಿಯಾಗಲು ಸಮರ್ಪಕವಾದ ಯೋಜನೆಗಳ ಅನುಷ್ಠಾನದ ಅಗತ್ಯವಿದೆ ಎಂದರು. ಸಿಎಎಂಡಿಆರ್‌ ಸಂಶೋಧನಾ ಸಂಸ್ಥೆಯ ಪ್ರಾಧ್ಯಾಪಕ ಪ್ರೊ. ಜೈ. ಪ್ರಭಾಕರ ಮಾತನಾಡಿ, ಸಿಎಂಡಿಆರ್‌ ಸಮಾಜದಲ್ಲಿನ ಸಾಮಾಜಿಕ-ಆರ್ಥಿಕ ವಿದ್ಯಮಾನಗಳು ಕುರಿತು ಸಂಶೋಧನೆ ನಡೆಸುತ್ತಿದೆ. ಸರ್ಕಾರದ ನೀತಿ ಆಯೋಜನೆಗಳಿಗೆ ಸಲಹೆ ಮಾರ್ಗದರ್ಶನ ನೀಡುತ್ತಿದೆ ಎಂದರು. ಕರ್ನಾಟಕ ಕಲಾ ಕಾಲೇಜಿನ ಪ್ರಾಚಾರ್ಯ ಡಾ. ಐ.ಸಿ. ಮುಳಗುಂದ ಮಾತನಾಡಿ, ಮಾನವಶಾಸ್ತ್ರ ವಿಷಯವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಮುಖ ವಿಷಯವಾಗಿದೆ ಎಂದು ಹೇಳಿದರು. ಕರ್ನಾಟಕ ಕಾಲೇಜಿನ ಮಾನವಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಜಗದೀಶ್. ವಿ., ಪ್ರಾಧ್ಯಾಪಕ ಡಾ. ಸದಾನಂದ ಸುಗಂಧಿ, ಡಾ. ಸಂತೋಷ ಧರನಾಯಕ, ಡಾ. ಗುರುರಾಜ ಕುಲಕರ್ಣಿ, ಡಾ. ಕಲಾವತಿ ಅಪರಾಜ, ಡಾ. ಸ್ವಾತಿ ಬಂಡಿವಾಡ, ಡಾ. ಬಸವರಾಜ ಪುಂಡಪ್ಪನವರ, ಡಾ. ಸೈಯದ ಮಕಾನದಾರ ಇದ್ದರು.