ಕಳೆದ ತಿಂಗಳು ಪುಷ್ಪಗಿರಿ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಪ್ರಾಂತೀಯ ಅಧ್ಯಕ್ಷರಾದ ಎ.ಎಸ್. ಭದ್ರಶೆಟ್ಟಿ, ಕರ್ನಾಟಕ ಪ್ರಾಂತೀಯ ಅಧ್ಯಕ್ಷರಾದ ಕೆ. ಪ್ರಭಾಕರ್, ಕರ್ನಾಟಕ ಪ್ರಾಂತೀಯ ಪ್ರಧಾನ ಕಾರ್ಯದರ್ಶಿ ಕೆ. ದಯಾನಂದ ಸೇರಿದಂತೆ ಹಲವು ಗಣ್ಯರ ಉಪಸ್ಥಿತಿಯಲ್ಲಿ ಜಿಲ್ಲಾ ಸಮಿತಿಯನ್ನು ರಚಿಸಲಾಯಿತು. ಪುಷ್ಪಗಿರಿ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ನಿವೃತ್ತ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರಾದ ಶ್ರೀ ವೆಂಕಟೇಶ್ ಬಿ. ಅವರು ಕಾರ್ಯಕ್ರಮಕ್ಕೆ ಗೌರವ ನೀಡಿದರು.
ಕನ್ನಡಪ್ರಭ ವಾರ್ತೆ ಹಾಸನ
ಭ್ರಷ್ಟಾಚಾರ ರಹಿತ, ಸತ್ಯಾಚಾರಯುತ ಹಾಗೂ ಸಮೃದ್ಧ ಸಮಾಜ ನಿರ್ಮಾಣದ ಉದ್ದೇಶದಿಂದ ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಕಾರ್ಯಾಚರಣೆ ಸಮಿತ ಹಾಸನ ಜಿಲ್ಲೆಯಲ್ಲಿ ಅಧಿಕೃತವಾಗಿ ಆರಂಭವಾಗಿದೆ ಎಂದು ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನಾ ಹಾಗೂ ಕಾರ್ಯಾಚರಣಾ ಸಮಿತಿ ಜಿಲ್ಲಾ ಅಧ್ಯಕ್ಷ ಟಿ. ಮಲ್ಲೇಶ್ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಕಳೆದ ತಿಂಗಳು ಪುಷ್ಪಗಿರಿ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಪ್ರಾಂತೀಯ ಅಧ್ಯಕ್ಷರಾದ ಎ.ಎಸ್. ಭದ್ರಶೆಟ್ಟಿ, ಕರ್ನಾಟಕ ಪ್ರಾಂತೀಯ ಅಧ್ಯಕ್ಷರಾದ ಕೆ. ಪ್ರಭಾಕರ್, ಕರ್ನಾಟಕ ಪ್ರಾಂತೀಯ ಪ್ರಧಾನ ಕಾರ್ಯದರ್ಶಿ ಕೆ. ದಯಾನಂದ ಸೇರಿದಂತೆ ಹಲವು ಗಣ್ಯರ ಉಪಸ್ಥಿತಿಯಲ್ಲಿ ಜಿಲ್ಲಾ ಸಮಿತಿಯನ್ನು ರಚಿಸಲಾಯಿತು. ಪುಷ್ಪಗಿರಿ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ನಿವೃತ್ತ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರಾದ ಶ್ರೀ ವೆಂಕಟೇಶ್ ಬಿ. ಅವರು ಕಾರ್ಯಕ್ರಮಕ್ಕೆ ಗೌರವ ನೀಡಿದರು.ರಾಷ್ಟ್ರೀಯ ಭ್ರಷ್ಟಾಚಾರ ನಿರ್ಮೂಲನೆ ಹಾಗೂ ಕಾರ್ಯಾಚರಣೆ ಸಮಿತಿ ಅಫ್ ಇಂಡಿಯಾ ಸಂಸ್ಥೆಯನ್ನು 2012ರ ನವೆಂಬರ್ 29ರಂದು ಸ್ಥಾಪಿಸಲಾಗಿದ್ದು, ಇದು ಲಾಭರಹಿತ ಹಾಗೂ ಸರ್ಕಾರೇತರ ಸ್ವಯಂಸೇವಾ ಸಂಸ್ಥೆಯಾಗಿದೆ ಎಂದರು. ಮಾನವೀಯ ನೆಲೆಯ ಮೇಲೆ ಸಾಮಾಜಿಕ, ಪರಿಸರ ಹಾಗೂ ಆಡಳಿತಾತ್ಮಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು, ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣ ಮಾಡುವುದು ಹಾಗೂ ಸತ್ಯಾಚಾರವನ್ನು ಉತ್ತೇಜಿಸುವುದೇ ಸಂಸ್ಥೆಯ ಮೂಲ ಉದ್ದೇಶವಾಗಿದೆ. ಸಂಸ್ಥೆಯ ಸ್ಥಾಪಕರಾದ ಡಾ. ರಾಜೇಶ್ ಶುಕ್ಲ ಅವರು ಮಹಾತ್ಮ ಗಾಂಧಿ ಹಾಗೂ ಅಣ್ಣಾ ಹಜಾರೆ ಅವರ ಸಿದ್ಧಾಂತಗಳಿಂದ ಪ್ರೇರಿತರಾಗಿ, ಭಾರತೀಯ ಸಂವಿಧಾನದ ಅಡಿಯಲ್ಲಿ ದೇಶದ ಹಿತಕ್ಕಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂದಿಗೆ ದೇಶದ ವಿವಿಧ ರಾಜ್ಯಗಳಲ್ಲಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಸದಸ್ಯರು ನೋಂದಾಯಿತರಾಗಿದ್ದಾರೆ ಎಂದು ಹೇಳಿದರು.ಸಮಿತಿ ಜಾತಿ–ಧರ್ಮ ಬೇಧಭಾವವಿಲ್ಲದೆ ಸಮಾನತೆಯನ್ನು ಉತ್ತೇಜಿಸುವುದು, ಮಹಿಳೆಯರು ಹಾಗೂ ಮಕ್ಕಳ ಹಕ್ಕುಗಳ ರಕ್ಷಣೆಗೆ ಶೈಕ್ಷಣಿಕ ಮತ್ತು ಕಾನೂನು ನೆರವು ನೀಡುವುದು, ದೇಶದ ಏಕತೆ, ಅಖಂಡತೆ, ಶಾಂತಿ ಹಾಗೂ ಸಮೃದ್ಧಿಗಾಗಿ ಜನಜಾಗೃತಿ ಮೂಡಿಸುವುದು ತನ್ನ ಪ್ರಮುಖ ಕರ್ತವ್ಯಗಳಾಗಿವೆ. ಭ್ರಷ್ಟಾಚಾರ ನಿರ್ಮೂಲನೆಗಾಗಿ ಸಿಬಿಐ, ಲೋಕಾಯುಕ್ತ, ಸಿಐಡಿ, ಮಾನವ ಹಕ್ಕು ಆಯೋಗ ಹಾಗೂ ನ್ಯಾಯಾಲಯಗಳೊಂದಿಗೆ ಕಾನೂನು ಬದ್ಧವಾಗಿ ಸಹಕರಿಸುವುದೂ ಸಮಿತಿಯ ಗುರಿಯಾಗಿದೆ. ರಾಜಕೀಯ ರಹಿತವಾಗಿ ಕಾರ್ಯನಿರ್ವಹಿಸುವ ಈ ಸಂಸ್ಥೆ ಆರ್ಥಿಕ, ಸಾಮಾಜಿಕ ಹಾಗೂ ಆಡಳಿತಾತ್ಮಕ ದುರುಪಯೋಗದ ವಿರುದ್ಧ ಹೋರಾಟ ನಡೆಸಲಿದೆ.ಹಾಸನ ಜಿಲ್ಲಾ ಸಮಿತಿಯು ಸಾರ್ವಜನಿಕರಿಗೆ ಸೇವೆ ಸಲ್ಲಿಸುವ ಉದ್ದೇಶದಿಂದ ಕಾರ್ಯಾರಂಭ ಮಾಡಿದ್ದು, ಸರ್ಕಾರಿ ಕಚೇರಿಗಳಲ್ಲಿ ಎದುರಾಗುವ ವಿಳಂಬ, ಲಂಚ ಹಾಗೂ ಭ್ರಷ್ಟಾಚಾರ ಪ್ರಕರಣಗಳನ್ನು ಸಮಿತಿಯ ಗಮನಕ್ಕೆ ತರಬೇಕೆಂದು ನಾಗರಿಕರಿಗೆ ಮನವಿ ಮಾಡಲಾಗಿದೆ. ದೂರನ್ನು ನೀಡಲು ಜಿಲ್ಲಾ ಅಧ್ಯಕ್ಷರಾದ ಮಲ್ಲೇಶ್ (ಮೋ: 9480022704), ಕಾರ್ಯಾಧ್ಯಕ್ಷರಾದ ಎಂ.ಎಸ್. ಸುಂದರ್ ಹಾಗೂ ಪ್ರಧಾನ ಕಾರ್ಯದರ್ಶಿ ಶ್ರೀ ಸಣ್ಣೆಗೌಡ (ಮೋ: 8217420285 / 9448047275) ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.ಭ್ರಷ್ಟಾಚಾರ ಮುಕ್ತ ಆಡಳಿತ ಮತ್ತು ಜನಹಿತ ರಕ್ಷಣೆಯ ಸಂಕಲ್ಪದೊಂದಿಗೆ ಆರಂಭವಾದ ಈ ಸಮಿತಿ, ಹಾಸನ ಜಿಲ್ಲೆಯಲ್ಲಿ ಸಾಮಾಜಿಕ ಜಾಗೃತಿ ಮತ್ತು ನ್ಯಾಯಪರ ಹೋರಾಟಕ್ಕೆ ಹೊಸ ಬಲ ನೀಡಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಪತ್ರಿಕಾಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷ ಎಂ.ಎಸ್. ಸುಂದರ್, ಪ್ರಧಾನ ಕಾರ್ಯದರ್ಶಿ ಸಣ್ಣೇಗೌಡ, ಖಜಾಂಚಿ ಜಯಕುಮಾರ್, ಕಾರ್ಯದರ್ಶಿ ಎಸ್. ಗಂಗಾಧರ್ ಇತರರು ಉಪಸ್ಥಿತರಿದ್ದರು.