ರಾಜ್ಯಪಾಲರಿಂದಲೇ ಪ್ರಜಾಪ್ರಭುತ್ವದ ವಿರೋಧಿ ನೀತಿ: ಆನಂದ್‌

| Published : Aug 14 2024, 12:49 AM IST

ಸಾರಾಂಶ

ಕಡೂರು, ರಾಜ್ಯ ಸರ್ಕಾರಕ್ಕೆ ಕಾರಣ ಕೇಳದೆ ನೋಟೀಸ್ ನೀಡಿ ಪ್ರಜಾಪ್ರಭುತ್ವದ ವಿರೋಧಿ ನೀತಿಯನ್ನು ರಾಜ್ಯಪಾಲರೇ ಅನುಸರಿಸಿದ್ದಾರೆ ಎಂದು ಶಾಸಕ ಕೆ.ಎಸ್ ಆನಂದ್ ಆರೋಪಿಸಿದರು.

ಕಡೂರು- ಬೀರೂರು ಬ್ಲಾಕ್ ಕಾಂಗ್ರೆಸ್ ಘಟಕಗಳಿಂದ ತಾಲೂಕು ಕಚೇರಿ ಮುಂದೆ ಪ್ರತಿಭಟನೆ

ಕನ್ನಡಪ್ರಭ ವಾರ್ತೆ, ಕಡೂರು

ರಾಜ್ಯ ಸರ್ಕಾರಕ್ಕೆ ಕಾರಣ ಕೇಳದೆ ನೋಟೀಸ್ ನೀಡಿ ಪ್ರಜಾಪ್ರಭುತ್ವದ ವಿರೋಧಿ ನೀತಿಯನ್ನು ರಾಜ್ಯಪಾಲರೇ ಅನುಸರಿಸಿದ್ದಾರೆ ಎಂದು ಶಾಸಕ ಕೆ.ಎಸ್ ಆನಂದ್ ಆರೋಪಿಸಿದರು. ಕಡೂರು ಪಟ್ಟಣದಲ್ಲಿ ಕಡೂರು- ಬೀರೂರು ಬ್ಲಾಕ್ ಕಾಂಗ್ರೆಸ್ ಘಟಕಗಳಿಂದ ಮರವಂಜಿ ವೃತ್ತದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಕೆಎಲ್‌ವಿ ವೃತ್ತದ ಮೂಲಕ ಮೆರವಣಿಗೆ ನಡೆಸಿ ಬಿಜೆಪಿ-ಜೆಡಿಎಸ್ ವಿರುದ್ಧ ಘೋಷಣೆ ಕೂಗುತ್ತಾ ತಾಲೂಕು ಕಚೇರಿ ಮುಂದೆ ನಡೆಸಿದ ಪ್ರತಿಭಟನೆಯಲ್ಲಿ ಮಾತನಾಡಿದರು. ನಮ್ಮ ನಾಯಕ ಸಿದ್ದರಾಮಯ್ಯ ಅವರ ಕುಟುಂಬಕ್ಕೆ ಬಿಜೆಪಿ ಅವಧಿಯಲ್ಲಿ ನೀಡಿರುವ ನಿವೇಶನ ಬಿಟ್ಟರೆ ಮುಡಾದಲ್ಲಿ ಮತ್ತು ಅವರ ರಾಜಕೀಯ ಜೀವನದಲ್ಲಿ ಯಾವುದೇ ನಿವೇಶನ ಪಡೆದಿಲ್ಲ. ದೇವೇಗೌಡರ ಕುಟುಂಬದ ಎಚ್.ಡಿ. ಕುಮಾರ ಸ್ವಾಮಿಯವರು ಅತಿಹೆಚ್ಚಿನ ನಿವೇಶನ ಪಡೆದಿದ್ದಾರೆ ಎಂದು ದೂರಿದರು.ಆದಾಗ್ಯೂ ಬಿಜೆಪಿ ನಾಯಕರಿಗೆ ಸಿದ್ದರಾಮಯ್ಯನವರ ಅಕ್ರಮ ಸಿಗದ ಕಾರಣ ಹೇಗಾದರೂ ಮಾಡಿ ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಗಳನ್ನು ಬಿಜೆಪಿ-ಜೆಡಿಎಸ್ ಪಕ್ಷಗಳು ಮಾಡುತ್ತಿವೆ ಎಂದು ಟೀಕಿಸಿದರು.ಸಿದ್ದರಾಮಯ್ಯ ಮುಖ್ಯಮಂತ್ರಿಯಾದರೂ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಇದ್ದ ಎರಡು ಮನೆಗಳ ಸಾಲ ಕಟ್ಟಲಾಗದೆ ಮನೆಗಳನ್ನೇ ಮಾರಿದ ಸರಳ ರಾಜಕಾರಣಿ ಸಿದ್ದರಾಮಯ್ಯ ಎಂದರು.ಬಿಜೆಪಿ- ಜೆಡಿಎಸ್ ಒಟ್ಟಾಗಿ ನಡೆಸಿದ 20 ತಿಂಗಳ ಅಧಿಕಾರದ ಅವಧಿಯಲ್ಲಿ ಯಡಿಯೂರಪ್ಪರವರಿಗೆ ಅಧಿಕಾರ ನೀಡದೆ ಕುಮಾರಸ್ವಾಮಿ ನೇರವಾಗಿ ಯಡಿಯೂರಪ್ಪನವರಿಗೆ ಚೂರಿ ಹಾಕಿದರೂ ಕೂಡ ಬಿಜೆಪಿಯವರು ಜೆಡಿಎಸ್ ಜೊತೆ ಹೋಗುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.ಕುಮಾರಸ್ವಾಮಿ ಅವರಿಗೆ ರಾತ್ರಿ ಏನು ಮಾತನಾಡುತ್ತಾರೆ ಗೊತ್ತಾಗುವುದಿಲ್ಲ. ಬೆಳಗ್ಗೆ ಏನು ಮಾತಾಡ್ತಾರೆ ಗೊತ್ತಾಗುವುದಿಲ್ಲ. ಯಡಿಯೂರಪ್ಪನವರು ಪೋಕ್ಸೊ ಪ್ರಕರಣ ಎದುರಿಸುತ್ತಿದ್ದಾರೆ. ಯಾವುದೇ ಕಾರಣವಿಲ್ಲದೆ ಸರ್ಕಾರ ಅಸ್ಥಿರಗೊಳಿಸುವ ಕಾರ್ಯ ಮಾಡಲು ಮುಂದಾದರೆ ಕರ್ನಾಟಕದಲ್ಲಿ ರಕ್ತ ಕ್ರಾಂತಿ ಆಗುವುದು ಖಚಿತ ಎಂದು ಎಚ್ಚರಿಸಿದರು.ಜೆಡಿಎಸ್ ನಾಯಕರು ಪ್ರತೀ ಭಾರಿಯೂ ಹೆಚ್ಚಿನ ಸ್ಥಾನ ಗೆಲ್ಲದೆ ಮೈತ್ರಿ ಮೂಲಕ ಆಡಳಿತ ನಡೆಸಿ ಇರುವ ಸರ್ಕಾರಗಳನ್ನು ಅಸ್ಥಿರಗೊಳಿಸುವ ಕೆಲಸ ಮಾಡುತ್ತಾ ಬರುತ್ತಿದ್ದಾರೆ. ರಾಜ್ಯಪಾಲರು ಕೇಂದ್ರ ಸರ್ಕಾರದ ಕೈ ಗೊಂಬೆ ಆಗದೆ ಸಂವಿಧಾನದ ಅಡಿಯಲ್ಲಿ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

ಯಡಿಯೂರಪ್ಪ ತಮ್ಮ ಮಗ ವಿಜೇಂದ್ರರವರನ್ನು ರಾಜಕೀಯದಲ್ಲಿ ಮಂಚೂಣಿಗೆ ತರಲು ಈ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಆರೋಪಿಸಿದ ಅವರು, ರಾಜ್ಯಪಾಲರ ಮೂಲಕ ಮುಖ್ಯಮಂತ್ರಿಗೆ ನೋಟಿಸ್ ಕೊಡಿಸಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ರಾಜ್ಯದಲ್ಲಿ ಅತ್ಯುತ್ತಮ ಆಡಳಿತ ನೀಡುತ್ತಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ದಲಿತರು, ಹಿಂದುಳಿದ ವರ್ಗದವರ ಅಭಿವೃದ್ಧಿಗೆ ದುಡಿಯುತ್ತಿದೆ. ರಾಜ್ಯ ಸರ್ಕಾರದ ಗ್ಯಾರಂಟಿಗಳ ಜನಪ್ರಿಯತೆ ಸಹಿಸದ ಬಿಜೆಪಿ ಮತ್ತು ಜೆಡಿಎಸ್ ಕೆಟ್ಟ ಹೆಸರು ತರಲು ರೂಪಿಸುವ ತಂತ್ರ ಫಲಿಸುವುದಿಲ್ಲ. ಹಾಗಾಗಿ ಕಾರ್ಯಕರ್ತರು, ಮುಖಂಡರು ರಾಜ್ಯದಲ್ಲಿ, ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಕಟ್ಟುವ ಮೂಲಕ ಕಳಂಕ ವಿಲ್ಲದ ಮುಖ್ಯಮಂತ್ರಿಗಳನ್ನು ಉಳಿಸಲು ಹೋರಾಟ ಮಾಡಿ ಪ್ರತಿಪಕ್ಷಗಳಿಗೆ ಸಂದೇಶ ರವಾನಿಸಬೇಕು ಎಂದು ಮನವಿ ಮಾಡಿದರು.

ಕಾಂಗ್ರೆಸ್ ಪಕ್ಷದ ಜಿಲ್ಲಾ ಮುಖಂಡ ಎಂ.ಎಚ್. ಚಂದ್ರಪ್ಪ ಮಾತನಾಡಿ, ದಲಿತರು, ಶೋಷಿತರ, ಜನಸಾಮಾನ್ಯರ ಹಿತ ಬಯಸಿರುವ ಸಿದ್ದರಾಮಯ್ಯ ಗ್ಯಾರಂಟಿಗಳ ಮೂಲಕ ರಾಜ್ಯದ ಬಡವರಿಗೆ ಆಸರೆಯಾಗಿದ್ದಾರೆ. ಸಿದ್ದರಾಮಯ್ಯನವರ ಶ್ರಮದಿಂದ 136 ಸೀಟುಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಅವರ ಬೆಳವಣಿಗೆ ಸಹಿಸದ ಬಿಜೆಪಿ ಮತ ಜೆಡಿಎಸ್ ತಂತ್ರ ನಡೆಯಲ್ಲ ಎಂದರು. ಜಿಪಂ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ ಮಾತನಾಡಿ, ಯಾವುದೇ ಕಳಂಕವಿಲ್ಲದೆ 41 ವರ್ಷಗಳ ರಾಜಕಾರಣ ನಡೆಸಿರುವ ಸಿದ್ದರಾಮಯ್ಯ ವಿರುದ್ಧ ಯಾವುದೇ ಆರೋಪ ಮಾಡಲು ಬಿಜೆಪಿ ಬಳಿ ಸಾಕ್ಷ್ಯವಿಲ್ಲ. ಸಮಾಜದ ಕಟ್ಟಡ ಕಡೆ ವ್ಯಕ್ತಿಯನ್ನು ಗುರುತಿಸುವ ಉತ್ತಮ ವ್ಯಕ್ತಿ ಸಿದ್ದರಾಮಯ್ಯನವರ ಕೈ ಬಲಪಡಿಸಲು ಈ ಜನಸ್ತೋಮ ಸಾಕ್ಷಿಯಾಗಿದೆ ಎಂದರು.

ತಹಸೀಲ್ದಾರ್ ರವರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಅರ್ಪಿಸಲಾಯಿತು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡ ಪಂಚನಹಳ್ಳಿ ಪ್ರಸನ್ನ, ತೋಟದ ಮನೆ ಮೋಹನ್, ತಾಲೂಕು ಕುರುಬ ಸಮಾಜ ಅಧ್ಯಕ್ಷ ಬೋಗಪ್ಪ, ಕೆ ಜಿ ಶ್ರೀನಿವಾಸ ಮೂರ್ತಿ,ಕೆ.ಎಸ್ ತಿಪ್ಪೇಶ್, ಸತೀಶ್ ನಾಯ್ಕ,ಕಂಸಾಗರ ಸೋಮಶೇಖರ್, ರೇವಣ್ಣ, ಪ್ರಕಾಶ್ ನಾಯ್ಕ, ಇಮ್ರಾನ್ ಖಾನ್, ಸೈಯದ್ ಯಾಸಿನ್, ವಸಂತ ಮಲ್ಲೇಶ್ವರ ಸೇರಿದಂತೆ ಕಾರ್ಯಕರ್ತರು, ಮುಖಂಡರು ಇದ್ದರು.

-- ಬಾಕ್ಸ್ --

ಗ್ಯಾರೆಂಟಿಯಿಂದ ಮಾದರಿ ಆಡಳಿತ ಗ್ಯಾರೆಂಟಿ ಗಳ ಮೂಲಕ ಇಡೀ ಪ್ರಪಂಚಕ್ಕೆ ಸಿದ್ದರಾಮಯ್ಯ ಮಾದರಿ ಆಡಳಿತ ನೀಡುತ್ತಿದ್ದಾರೆ. ವರಮಹಾಲಕ್ಷ್ಮಿಪೂಜೆ, ಹಬ್ಬ, ಶ್ರಾವಣ ಮತ್ತಿತರ ಹಬ್ಬಗಳಲ್ಲಿ ನಮ್ಮ ಹೆಣ್ಣು ಮಕ್ಕಳಿಗೆ ಒಳ್ಳೆಯದಾಗಲಿ ಎಂದು ಗೃಹಲಕ್ಷ್ಮೀ ಯೋಜನೆ ಎರಡು ತಿಂಗಳ ಹಣವನ್ನು ಒಟ್ಟಿಗೆ ಹಾಕಲಾಗುತ್ತಿದೆ. ಈ ಸವಲತ್ತು ಪಡೆದ ಬಿಜೆಪಿಯ ಕೆಲವರು ನಮಗೆ ಸಿದ್ದರಾಮಯ್ಯನವರ ಆಡಳಿತ ಬೇಕು ಎನ್ನುತ್ತಿದ್ದಾರೆ. ಇದನ್ನು ಸಹಿಸದ ಬಿಜೆಪಿ- ಜೆಡಿಎಸ್ ಗೆ ರಾಜ್ಯದ ಮುಂದಿನ ದಿನಗಳಲ್ಲಿ ಜನರೇ ತಕ್ಕ ಉತ್ತರ ನೀಡುತ್ತಾರೆ.--- ಕೆ.ಎಸ್.ಆನಂದ್. 12ಕೆಕೆಡಿಯು1.

ಕಡೂರು ಪಟ್ಟಣದಲ್ಲಿ ಕಡೂರು- ಬೀರೂರು ಬ್ಲಾಕ್ ಕಾಂಗ್ರೆಸ್ ಘಟಕಗಳಿಂದ ಬಿಜೆಪಿ-ಜೆಡಿಎಸ್ ವಿರುದ್ಧ ತಾಲೂಕು ಕಚೇರಿ ಮುಂದೆ ನಡೆಸಿದ ಪ್ರತಿಭಟನೆಯಲ್ಲಿ ರಾಷ್ಟ್ರಪತಿಗಳಿಗೆ ಮನವಿ ಅರ್ಪಿಸಲಾಯಿತು.