ಕೊಪ್ಪಳ: ಜಿಲ್ಲೆಯ ಎಲ್ಲ ಶಾಲಾ-ಕಾಲೇಜು ಮತ್ತು ವಿಶ್ವವಿದ್ಯಾಲಯ ಹಾಗೂ ಮೆಡಿಕಲ್ ಮತ್ತು ಇಂಜಿನೀಯರಿಂಗ್ ಕಾಲೇಜುಗಳಲ್ಲಿ ಆ್ಯಂಟಿ ಡ್ರಗ್ ಕಮೀಟಿ ರಚಿಸಿ ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಲಿಯಾಗದಂತೆ ತಿಳಿ ಹೇಳಬೇಕೆಂದು ಜಿಲ್ಲಾಧಿಕಾರಿ ಡಾ. ಸುರೇಶ ಬಿ.ಇಟ್ನಾಳ ಹೇಳಿದರು.
ಅವರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೆದ ನಾರ್ಕೋ ಕೋ-ಆರ್ಡಿನೇಷನ್ ಸೆಂಟರ್ (NCORD) ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಮಕ್ಕಳಿಗೆ ತಿಳಿ ಹೇಳುವುದರ ಜತೆಗೆ ನಶಾ ಮುಕ್ತ ಅಭಿಯಾನದಂತಹ ಕಾರ್ಯಕ್ರಮಗಳ ಸಹಯೋಗದಲ್ಲಿ ಮಕ್ಕಳಿಗೆ ಮ್ಯಾರಥಾನ್ ಹಾಗೂ ಮಾದಕ ವಸ್ತುಗಳಿಂದಾಗುವ ದುಷ್ಪರಿಣಾಮಗಳ ಕುರಿತು ಜನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು, ಇದರಲ್ಲಿ ಹೆಚ್ಚಿನ ಮಕ್ಕಳು ಪಾಲ್ಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಜಿಲ್ಲಾಸ್ಪತ್ರೆ, ತಾಲೂಕಾಸ್ಪತ್ರೆ ಸೇರಿದಂತೆ ಜಿಲ್ಲೆಯ ಎಲ್ಲ ಆಸ್ಪತ್ರೆಯಲ್ಲಿ ಮಾದಕ ದ್ರವ್ಯ ಪತ್ತೆ ಹಚ್ಚುವ 50 ಕಿಟ್‌ಗಳನ್ನಾದರೂ ಎಲ್ಲ ಆಸ್ಪತ್ರೆಗಳಲ್ಲಿ ಇಡಬೇಕು. ಜಿಲ್ಲಾಸ್ಪತ್ರೆಯಲ್ಲಿ ಸ್ವಲ್ಪ ಹೆಚ್ಚಿನ ಸಂಖ್ಯೆಯಲ್ಲಿ ಅವುಗಳು ಇರುವಂತೆ ನೋಡಿಕೊಳ್ಳಿ. ಅಬಕಾರಿ ಇಲಾಖೆಯವರು ಇಲ್ಲಿಯವರೆಗೆ ಎಷ್ಟು ರೆಸಾರ್ಟ್‌ಗಳಿಗೆ ಭೇಟಿ ನೀಡಿದ್ದೀರಾ,ರೆಸಾರ್ಟ್‌ಗಳಲ್ಲಿ ಯಾವುದೇ ಮಾದಕ ವಸ್ತು ಕಂಡು ಬಂದಲ್ಲಿ ತಕ್ಷಣವೇ ಅಂತಹ ರೆಸಾರ್ಟ್‌ಗಳ ವಿರುದ್ಧ ಕ್ರಮ ಕೈಗೊಳ್ಳುವುದರ ಜತೆಗೆ ಹೆಚ್ಚಿನ ಪ್ರಕರಣ ದಾಖಲಿಸಿ ಜಿಲ್ಲೆಯ ಎಲ್ಲ ರೆಸಾರ್ಟ್‌ಗಳಿಗೆ ಆಗಾಗ್ಗೆ ಭೇಟಿ ನೀಡಿ ತಪಾಸಣೆ ಕೈಗೊಳ್ಳಬೇಕು ಎಂದರು.ಮಾದಕ ವಸ್ತುಗಳ ಸಾಗಾಟ, ಮಾರಾಟ ಮತ್ತು ಬಳಕೆಯ ಕುರಿತ ವಿಷಯ ಗಂಭೀರವಾಗಿ ಪರಿಗಣಿಸಿ.ಇಂತಹ ಯಾವುದೇ ಪ್ರಕರಣ ಕಂಡು ಬಂದರೆ ಪೊಲೀಸ್, ಅರಣ್ಯ ಇಲಾಖೆ, ಸಾರಿಗೆ, ಅಬಕಾರಿ ಹಾಗೂ ಇತರೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ತಕ್ಷಣ ಕ್ರಮ ವಹಿಸಬೇಕು. ರೆಸಾರ್ಟ್,ಡಾಬಾ, ಹೊಟೇಲ್, ಸ್ಟೇ ಹೋಂಗಳಿಗೆ ಆಗಾಗ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರಬೇಕು.ಗಾಂಜಾ ಸಾಗುವಳಿ ಭೂಮಿಯ ಮಧ್ಯಭಾಗದಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ ಎನ್ನುವ ದೂರುಗಳಿದ್ದು, ಈ ಕುರಿತು ಅರಣ್ಯ ಇಲಾಖೆ ಗಮನ ಹರಿಸಲು ತಮ್ಮ ಸಿಬ್ಬಂದಿ ಬೀಟ್‌ಗಳಾಗಿ ನಿಯೋಜಿಸಿ ಗಮನ ಹರಿಸುತ್ತಿರಬೇಕೆಂದು ಹೇಳಿದರು.
ಈ ಸಭೆಯಲ್ಲಿ ಎಸ್ಪಿ ಡಾ. ರಾಮ್ ಎಲ್.ಅರಸಿದ್ದಿ, ಜಿಲ್ಲಾ ಆರೋಗ್ಯ ಅಧಿಕಾರಿ ಟಿ.ಲಿಂಗರಾಜು, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಗದೀಶ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಪಿ.ಎಸ್.ಹಿರೇಮಠ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಸೋಮಶೇಖರಗೌಡ ಪಾಟೀಲ ಸೇರಿದಂತೆ ಅರಣ್ಯ, ಸಾರಿಗೆ ಇಲಾಖೆ, ಇತರೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.