ಸಾರಾಂಶ
- ಕಾಂಗ್ರೆಸ್ ಸರ್ಕಾರ ವಿರುದ್ಧ ಮುಖಂಡ ಸತೀಶ ಕೊಳೇನಹಳ್ಳಿ ಟೀಕೆ
- - -ದಾವಣಗೆರೆ: ಭದ್ರಾ ಡ್ಯಾಂ ಬಲದಂಡೆ ನಾಲೆಯಲ್ಲಿ ಕೈಗೊಂಡ ಕಾಮಗಾರಿ ಪರಿಸ್ಥಿತಿ ನೋಡಿದರೆ ಮಳೆಗಾಲದ ಹಂಗಾಮಿನಲ್ಲಿ ಭದ್ರಾ ಕಾಲುವೆಗೆ ನೀರು ಹರಿಸುವುದು ಮತ್ತಷ್ಟು ವಿಳಂಬವಾಗೋದು ಸ್ಪಷ್ಟವಾಗಿದೆ. ಇದು ಕಾಂಗ್ರೆಸ್ ಸರ್ಕಾರದ ರೈತವಿರೋಧಿ ನಡೆ ಎಂದು ಜಿಲ್ಲಾ ರೈತರ ಒಕ್ಕೂಟ ಮುಖಂಡ ಬಿ.ಎಂ. ಸತೀಶ ಕೊಳೇನಹಳ್ಳಿ ದೂರಿದ್ದಾರೆ.
ಬೆಂಗಳೂರಿನಲ್ಲಿ ಜಲ ಸಂಪನ್ಮೂಲ ಸಚಿವ, ಡಿಸಿಎಂ ಡಿ.ಕೆ. ಶಿವಕುಮಾರ ಭದ್ರಾ ಜಲಾಶಯದ ಬಲದಂಡೆ ನಾಲೆ ಸೀಳಿರುವುದನ್ನು ಖುದ್ದಾಗಿ ಭೇಟಿ ನೀಡಿ, ಪರಿಶೀಲಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನರ ನೇತೃತ್ವದ ನಿಯೋಗಕ್ಕೆ ಭರವಸೆ ನೀಡಿದ್ದಾರೆ. ಇದನ್ನೆಲ್ಲಾ ನೋಡಿದರೆ ಜಿಲ್ಲೆಯ ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ಮಳೆಗಾಲದ ಹಂಗಾಮಿನಲ್ಲಿ ನೀರು ಸಿಗುವುದು ವಿಳಂಬ ಎಂಬುದಕ್ಕೆ ಸರ್ಕಾರದ ನಡೆಯೇ ಸಾಕ್ಷಿಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.ಅಚ್ಚುಕಟ್ಟು ರೈತರು ವಾಡಿಕೆಯಂತೆ ಮಳೆಗಾಲದ ಹಂಗಾಮಿನಲ್ಲಿ ಬತ್ತ ಬೆಳೆಯಲು ಬೀಜ ಚೆಲ್ಲಿ, ಸಸಿ ಮಡಿ ತಯಾರಿ ಮಾಡಿಕೊಂಡಿದ್ದಾರೆ. ವಾಡಿಕೆಯಂತೆ ಜುಲೈ ಮೊದಲ ವಾರದಲ್ಲಿ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆ ನಡೆಸಿ, ಕಾಲುವೆಗೆ ನೀರು ಹರಿಸುವ ವೇಳಾಪಟ್ಟಿ ಪ್ರಕಟಿಸಬೇಕು. ಭದ್ರಾ ಜಲಾನಯನ ಪ್ರದೇಶದಲ್ಲಿ ಕಳೆದ ವರ್ಷಕ್ಕಿಂತ ಈ ವರ್ಷ ಮಳೆ ಸಮೃದ್ಧಿಯಾಗಿ ಸುರಿದಿದೆ. ಡ್ಯಾಂಗೆ ಒಳಹರಿವಿನ ಪ್ರಮಾಣವೂ ಹೆಚ್ಚಾಗಿದೆ. ಈಗಾಗಲೇ 165 ಅಡಿಯಷ್ಟು ನೀರು ಸಂಗ್ರಹ ಮಟ್ಟವೂ ಇದೆ. ಹೀಗಿದ್ದರೂ ಎಡದಂಡೆ ನಾಲೆಗಳಿಗೆ ನೀರು ಹರಿಸುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಲದಂಡೆ ನಾಲೆ ಸೀಳಿರುವುದನ್ನು ಸಿಮೆಂಟ್ ಕಾಂಕ್ರಿಟ್ ಹಾಕಿ ತಡೆಗೋಡೆ ನಿರ್ಮಿಸುವವರೆಗೂ ನೀರು ಹರಿಸುವುದಕ್ಕೆ ಸಾಧ್ಯವಿಲ್ಲ. ಹಾಗಾಗಿಯೇ ಅಧಿಕಾರಿಗಳು ಡ್ಯಾಂ ಭರ್ತಿಯಾದರೆ ನೀರು ಬಿಡುವಂತೆ ರೈತರು ದಂಗೆ ಏಳುತ್ತಾರೆಂಬ ಕಾರಣಕ್ಕೆ ಪ್ರಸ್ತುತ ನಿತ್ಯ 3 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸುತ್ತಿದ್ದಾರೆ ಎಂದು ದೂರಿದ್ದಾರೆ.ಇತಿಹಾಸದಲ್ಲೇ ಪ್ರಥಮ ಬಾರಿಗೆ ವಾಡಿಕೆಯಂತೆ ಅವಧಿಗಿಂತ ಮುನ್ನವೇ ಡ್ಯಾಂ ಭರ್ತಿಯಾಗುವ ಸಾಧ್ಯತೆಗಳಿವೆ. ಆದರೂ, ರಾಜ್ಯ ಸರ್ಕಾರದ ಇಚ್ಛಾಶಕ್ತಿ ಕೊರತೆಯಿಂದ ಮತ್ತು ರೈತಪರ ಕಾಳಜಿ ಇಲ್ಲದ ಕಾರಣದಿಂದ ಎಡದಂಡೆ ಮತ್ತು ಬಲದಂಡೆ ನಾಲೆಗಳಿಗೆ ನೀರು ಹರಿಸಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬಿ.ಎಂ.ಸತೀಶ ಆತಂಕ ವ್ಯಕ್ತಪಡಿಸಿದ್ದಾರೆ.
- - --3ಕೆಡಿವಿಜಿ8: ಬಿ.ಎಂ.ಸತೀಶ ಕೊಳೇನಹಳ್ಳಿ