ಸಾರಾಂಶ
ಶಿರಸಿ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರೈತರಿಗೆ ಸಿಗುವ ಯೋಜನೆಗಳನ್ನು ರದ್ದುಪಡಿಸಿ, ರೈತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್. ಪಾಟೀಲ ನಡಹಳ್ಳಿ ಆರೋಪಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಪರಿಶ್ರಮದಿಂದ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಬಲಪಡಿಸಲು ರಾಜ್ಯದ ೨೮ ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.೩ನೇ ಬಾರಿಗೆ ನರೇಂದ್ರ ಮೋದಿ ಪ್ರಧಾನಿ ಮಾಡಲು ಪ್ರತಿಯೊಬ್ಬ ಭಾರತೀಯ ಕಾತುರನಾಗಿದ್ದಾರೆ. ವಿಶ್ವದ ಪ್ರಜಾಪ್ರಭುತ್ವದ ರಾಷ್ಟ್ರಗಳು ನಮ್ಮ ದೇಶದ ಪ್ರಜಾಪ್ರಭುತ್ವದ ಹಬ್ಬದ ಸಂಭ್ರಮವನ್ನು ವೀಕ್ಷಿಸುತ್ತಿದ್ದು, ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಮತ್ತೊಮ್ಮೆ ನೋಡುವುದು ಭಾರತೀಯರ ಮತ್ತು ವಿಶ್ವದ ಬಹುಸಂಖ್ಯಾತ ಜನರ ಆಶಯವಾಗಿದೆ. ವಿಶ್ವ ಮೆಚ್ಚಿದ ಜನನಾಯಕ ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿ. ಬಿಜೆಪಿ ಆಡಳಿತ ಅವಧಿಯಲ್ಲಿ ಆರ್ಥಿಕತೆ, ದೇಶದ ರಕ್ಷಣೆ, ಸುಭದ್ರತೆಯ ವಿಷಯದಲ್ಲಿ ಅತ್ಯಂತ ಕಾಳಜಿ ವಹಿಸಿದ್ದು, ಬಡವರ ಯುವಕರ, ರೈತರ, ಮಹಿಳೆಯರ, ದೀನ- ದಲಿತರ ಶ್ರೇಯೋಭಿವೃದ್ಧಿಗೆ ಅನೇಕ ಯೋಜನೆಗಳನ್ನು ಪರಿಚಯಿಸಿ, ಅನುಷ್ಠಾನಗೊಳಿಸಲಾಗಿದೆ. ಈ ಕಾರಣಕ್ಕೆ ಮೋದಿ ಸರ್ಕಾರ ಕೇಂದ್ರದಲ್ಲಿ ೩ನೇ ಬಾರಿಗೆ ಅಧಿಕಾರಕ್ಕೆ ಬರಬೇಕಾಗಿದೆ ಎಂದರು.
ಕಾಂಗ್ರೆಸ್ ರೈತ ವಿರೋಧಿ ಸರ್ಕಾರ: ರೈತಪರ ಯೋಜನೆ ರದ್ದುಪಡಿಸುವುದೇ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಾಧನೆಯಾಗಿದ್ದು, ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ಯೋಜನೆಗೆ ನರೇಂದ್ರ ಮೋದಿ ಸರ್ಕಾರ ಪ್ರತಿ ರೈತರ ಖಾತೆಗೆ ₹೨ ಸಾವಿರದಂತೆ ಪ್ರತಿವರ್ಷ ಅರ್ಜಿ ಪಡೆಯದೇ, ₹೬ ಸಾವಿರ ಜಮಾ ಮಾಡುತ್ತಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹೆಚ್ಚುವರಿಯಾಗಿ ರಾಜ್ಯದ ಖಾತೆಯಿಂದ ₹೪ ಸಾವಿರ ನೀಡುತ್ತಿದ್ದರು. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಇದನ್ನು ಸ್ಥಗಿತಗೊಳಿಸಿದೆ ಎಂದರು.ಯಡಿಯೂರಪ್ಪ ೨೦೦೮ರಲ್ಲಿ ಮುಖ್ಯಮಂತ್ರಿಯಾಗಿದ್ದ ವೇಳೆ ಹೈನುಗಾರಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರತಿ ಲೀಟರ್‌ಗೆ ₹೨ ನೀಡುತ್ತಿದ್ದರು. ಆನಂತರ ಮತ್ತೊಮ್ಮೆ ಅಧಿಕಾರಕ್ಕೆ ಬಂದ ಮೇಲೆ ಪ್ರೋತ್ಸಾಹಧನವನ್ನು ₹೫ಕ್ಕೆ ಏರಿಕೆ ಮಾಡಿದ್ದರು. ಸಿದ್ದರಾಮಯ್ಯ ಸರ್ಕಾರ ತಡೆಹಿಡಿಯುವ ಕೆಲಸ ಮಾಡಿದ್ದು, ₹೭ ರೂ. ನೀಡುತ್ತೇವೆ ಎಂದು ಹೇಳಿ ಮೋಸ ಮಾಡಲಾಗಿದೆ. ಬಾಕಿ ಇರುವ ₹೭೦೦ ಕೋಟಿ ಮೊದಲು ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದರು.
ಕಾಂಗ್ರೆಸ್ ಸರ್ಕಾರ ಹುಚ್ಚುಮಕ್ಕಳ ಸರ್ಕಾರವಾಗಿದೆ. ಈ ಸರ್ಕಾರವನ್ನು ಕರ್ನಾಟಕದಿಂದ ಕಿತ್ತೊಗೆಯಬೇಕು. ೨೮ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಬೇಕು. ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲಬೇಕು. ನಮ್ಮ ಪಕ್ಷದಲ್ಲಿ ಬಂಡಾಯವಿಲ್ಲ. ಮುನಿಸು ಇದ್ದು, ಕುಟುಂಬದಲ್ಲಿ ಮುನಿಸು ಇರುವುದು ಸಹಜ. ಮುಂದಿನ ದಿನಗಳಲ್ಲಿ ಅದು ನಿವಾರಣೆಯಾಗಲಿದೆ ಎಂದು ಎ.ಎಸ್. ಪಾಟೀಲ ನಡಹಳ್ಳಿ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ನವೀನಕುಮಾರ, ಜಿಲ್ಲಾಧ್ಯಕ್ಷ ರಮೇಶ ನಾಯ್ಕ ಕುಪ್ಪಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಶಾಂತ ನಾಯ್ಕ ಕುಮಟಾ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರೇಮಕುಮಾರ ನಾಯ್ಕ, ಗ್ರಾಮೀಣ ಮಂಡಳಾಧ್ಯಕ್ಷೆ ಉಷಾ ಹೆಗಡೆ, ನಗರ ಮಂಡಳಾಧ್ಯಕ್ಷ ಆನಂದ ಸಾಲೇರ, ಪ್ರಮುಖರಾದ ಗಣೇಶ ಸಣ್ಣಲಿಂಗಣ್ಣನವರ್, ಮಾಂತೇಶ ಹಾದಿಮನಿ ಮತ್ತಿತರರು ಇದ್ದರು.