ಸರ್ಕಾರದ ಕುಮ್ಮಕ್ಕಿನಿಂದ ರಾಜ್ಯದಲ್ಲಿ ಹಿಂದೂ ವಿರೋಧಿ ಕೃತ್ಯ ತೀವ್ರ

| Published : Mar 20 2024, 01:22 AM IST

ಸರ್ಕಾರದ ಕುಮ್ಮಕ್ಕಿನಿಂದ ರಾಜ್ಯದಲ್ಲಿ ಹಿಂದೂ ವಿರೋಧಿ ಕೃತ್ಯ ತೀವ್ರ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲೀಗ ಹಿಂದೂ ವಿರೋಧಿ, ದೇಶ ವಿರೋಧಿ ನಡೆ ತೀವ್ರವಾಗಿದ್ದು, ಇದಕ್ಕೆಲ್ಲ ಕಾಂಗ್ರೆಸ್ ಸರ್ಕಾರವೇ ನೇರ ಕಾರಣ.

ಹುಬ್ಬಳ್ಳಿ:

ರಾಜ್ಯದಲ್ಲೀಗ ಹಿಂದೂ ವಿರೋಧಿ, ದೇಶ ವಿರೋಧಿ ನಡೆ ತೀವ್ರವಾಗಿದ್ದು, ಇದಕ್ಕೆಲ್ಲ ಕಾಂಗ್ರೆಸ್ ಸರ್ಕಾರವೇ ನೇರ ಕಾರಣ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು.

ಅವರು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಏಕೆ ಇಂತಹ ಹಿಂದೂ ವಿರೋಧಿ ಕೃತ್ಯಗಳು ನಡೆಯುತ್ತಿವೆ. ಇದಕ್ಕೆಲ್ಲ ಕಾಂಗ್ರೆಸ್ ಸರ್ಕಾರದ ಮೃದು ಧೋರಣೆಯೇ ಕಾರಣವಾಗಿದೆ ಎಂದರು.

ಹಿಂದೂಗಳಿಗೆ ರಕ್ಷಣೆಯಿಲ್ಲ:ಈಚೆಗೆ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದರು. ಈ ಕುರಿತು ಎಫ್.ಎಸ್.ಎಲ್ ವರದಿ ಬಂದರೂ ಸಹ ಈ ವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಬೆಂಗಳೂರಿನ ರಾಮೇಶ್ವರ ಕೆಫೆನಲ್ಲಿ ಬಾಂಬ್ ಬ್ಲಾಸ್ಟ್ ಆದರೂ ಸಹ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಈಗ ಹನುಮಾನ್ ಚಾಲೀಸಾ ಹಾಕಿದ್ದಕ್ಕೆ ಹಲ್ಲೆ ನಡೆದಿದೆ ಎಂದರೆ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ ಎಂದು ಆರೋಪಿಸಿದರು.

ಎಷ್ಟು ಜನರನ್ನು ಬಂಧಿಸಿದೆ:ಪಾಕಿಸ್ತಾನ ಜಿಂದಾಬಾದ್ ಮತ್ತು ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಈ ವರೆಗೆ ಎಷ್ಟು ಜನರನ್ನು ಬಂದಿಸಲಾಗಿದೆ? ಇಂತಹ ಅಹಿತಕರ ಘಟನೆಗಳ ವಿರುದ್ಧ ಏನು ಕಠಿಣ ಕ್ರಮಕೈಗೊಳ್ಳಲಾಗಿದೆ ಎಂಬುದನ್ನು ಸರ್ಕಾರ ಈಗಲೂ ಬಾಯಿ ಬಿಡುತ್ತಿಲ್ಲ. ಇದರಿಂದ ದುಷ್ಕರ್ಮಿಗಳಿಗೆ ಬೆಂಬಲ ಸಿಕ್ಕಂತಾಗಿದೆ ಎಂದು ಸರ್ಕಾರದ ಈ ನಡೆಯನ್ನು ಖಂಡಿಸಿದರು.

ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದವರನ್ನು ರಕ್ಷಿಸುವ ಕೆಲಸ ಈ ಸರ್ಕಾರದಿಂದ ನಡೆದಿದೆ. ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ಮಾಧ್ಯಮದವರಿಗೂ ಬಾಯಿಗೆ ಬಂದ ಹಾಗೆ ಬೈದರು. ಮುಖ್ಯಮಂತ್ರಿ ಸಹ ಇದನ್ನು ಸಮರ್ಥಿಸಿಕೊಳ್ಳತೊಡಗಿದರು. ಇದೆಲ್ಲ ಈಗ ಹಿಂದೂ ವಿರೋಧಿಗಳಿಗೆ ಧೈರ್ಯ ತಂದುಕೊಟ್ಟಿದೆ ಎಂದರು.

ಸರ್ಕಾರವೇ ಕಾರಣ:ನಾವೇನೇ ಮಾಡಿದರೂ ರಕ್ಷಣೆಗೆ ಸರ್ಕಾರವೇ ಇದೆ ಎಂಬ ಭಾವನೆ ಆರೋಪಿಗಳಲ್ಲಿದೆ. ಹೀಗಾಗಿ ಈಗ ಹನುಮಾನ್ ಚಾಲೀಸಾ ಹಾಕಿದವರ ಮೇಲೆ ಹಲ್ಲೆ ಮಾಡುವ ಮಟ್ಟಕ್ಕೆ ಹಿಂದೂ ವಿರೋಧಿಗಳು ಬಲಿಷ್ಠ ಮನಸ್ಥಿತಿ ತಲುಪಿದ್ದಾರೆ. ಇದಕ್ಕೆಲ್ಲ ರಾಜ್ಯ ಸರ್ಕಾರವೇ ಪ್ರಮುಖ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.