ಸಿದ್ದರಾಮಯ್ಯ ಸರ್ಕಾರದಿಂದ ಹಿಂದೂ ವಿರೋಧಿ ನೀತಿ

| Published : Jan 04 2024, 01:45 AM IST

ಸಾರಾಂಶ

ಅಯೋಧ್ಯೆಯಲ್ಲಿ ಜ.22ರಂದು ಶ್ರೀರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಇದೆ. ಇಡೀ ದೇಶವೇ ಐತಿಹಾಸಿಕ ಕ್ಷಣಗಳ ಕಣ್ತುಂಬಿಕೊಳ್ಳಲು ಕಾತುರವಾಗಿದೆ. ಹೀಗಿರುವಾಗ ರಾಜ್ಯ ಕಾಂಗ್ರೆಸ್ ಸರ್ಕಾರವು 1992ರ ಗಲಭೆಯ ಹಳೆ ಪ್ರಕರಣಗಳಿಗೆ ಸಂಬಂಧಿಸಿ ಹುಬ್ಬಳ್ಳಿಯಲ್ಲಿ ವಿಶ್ವ ಹಿಂದೂ ಪರಿಷತ್ ಮುಖಂಡ ಶ್ರೀಕಾಂತ ಪೂಜಾರಿ ಬಂಧಿಸಿದ್ದು ಖಂಡನೀಯ.

ಸಂಸದ ಡಾ.ಸಿದ್ದೇಶ್ವರ ಆಕ್ರೋಶ । ಹುಬ್ಬಳ್ಳಿಯಲ್ಲಿ ಕರಸೇವಕರ ಬಂಧನ ಖಂಡಿಸಿ ಬಿಜೆಪಿ ಪ್ರತಿಭಟನೆ

ಕನ್ನಡಪ್ರಭ ವಾರ್ತೆ ದಾವಣಗೆರೆ

ಶ್ರೀರಾಮ ಜನ್ಮಭೂಮಿ ಹೋರಾಟದ 1992ರ ಗಲಭೆಯ ಹಳೆ ಪ್ರಕರಣಗಳ ಕೆದಕಿ, ಹೋರಾಟಗಾರರ ಬಂಧಿಸಿದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಜಿಲ್ಲಾ ಘಟಕದಿಂದ ನಗರದಲ್ಲಿ ಬುಧವಾರ ಪ್ರತಿಭಟಿಸಲಾಯಿತು.

ನಗರದ ಜಿಲ್ಲಾಡಳಿತ ಭವನ ಬಳಿ ಸಂಸದ ಡಾ.ಜಿ.ಎಂ.ಸಿದ್ದೇಶ್ವರ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ ಹನಗವಾಡಿ, ಮಾಜಿ ಶಾಸಕ ಎಸ್.ವಿ.ರಾಮಚಂದ್ರ ಇತರರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ ಮುಖಂಡರು, ಕಾರ್ಯಕರ್ತರು ನಂತರ ಜಿಲ್ಲಾಡಳಿತ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಸಂಸದ ಡಾ.ಜಿ.ಎಂ.ಸಿದ್ದೇಶ್ವರ, ಅಯೋಧ್ಯೆಯಲ್ಲಿ ಜ.22ರಂದು ಶ್ರೀರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಇದೆ. ಇಡೀ ದೇಶವೇ ಐತಿಹಾಸಿಕ ಕ್ಷಣಗಳ ಕಣ್ತುಂಬಿಕೊಳ್ಳಲು ಕಾತುರವಾಗಿದೆ. ಹೀಗಿರುವಾಗ ರಾಜ್ಯ ಕಾಂಗ್ರೆಸ್ ಸರ್ಕಾರವು 1992ರ ಗಲಭೆಯ ಹಳೆ ಪ್ರಕರಣಗಳಿಗೆ ಸಂಬಂಧಿಸಿ ಹುಬ್ಬಳ್ಳಿಯಲ್ಲಿ ವಿಶ್ವ ಹಿಂದೂ ಪರಿಷತ್ ಮುಖಂಡ ಶ್ರೀಕಾಂತ ಪೂಜಾರಿ ಬಂಧಿಸಿದ್ದು ಖಂಡನೀಯ ಎಂದರು.

ಹಿಂದೂ ವಿರೋಧಿ ನೀತಿಯ ಕಾಂಗ್ರೆಸ್ ಸರ್ಕಾರವು ಹಿಂದೂ ಪರ ಕಾರ್ಯಕರ್ತರ ಮೇಲೆ ಪೊಲೀಸ್ ಇಲಾಖೆ ದುರುಪಯೋಗಪಡಿಸಿ ಬಂಧಿಸುವ ಕೆಲಸ ಮಾಡುತ್ತಿದೆ. ತಕ್ಷಣವೇ ಬಂಧಿತ ಶ್ರೀಕಾಂತ ಪೂಜಾರಿಗೆ ಬಿಡುಗಡೆ ಮಾಡಬೇಕು. ಕಾಂಗ್ರೆಸ್‌ ಸರ್ಕಾರವು ಹಿಂದೂ ಕಾರ್ಯಕರ್ತರ ವಿಚಾರದಲ್ಲಿ ಇಂತಹ ವರ್ತನೆ ಮತ್ತೆ ಪ್ರದರ್ಶಿಸಿದರೆ, ಪರಿಣಾಮ ನೆಟ್ಟಗಿರದು ಎಂದು ಎಚ್ಚರಿಸಿದರು.

ಪಕ್ಷದ ಜಿಲ್ಲಾಧ್ಯಕ್ಷ ಎಸ್.ಎಂ.ವೀರೇಶ ಹನಗವಾಡಿ ಮಾತನಾಡಿ, 31 ವರ್ಷದ ಹಳೆಯ ಪ್ರಕರಣಗಳ ಕೆದಕಿ, ಕರ ಸೇವಕರ ಬಂಧಿಸುವ ದುಸ್ಸಾಹಸ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಇದ್ದಾಗಲೇ ಕಾಂಗ್ರೆಸ್ ಸರ್ಕಾರವು ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ದೂರಿದರು.

ಸಿದ್ದರಾಮಯ್ಯ ಮೊದಲ ಬಾರಿ ಮುಖ್ಯಮಂತ್ರಿಯಾಗಿದ್ದಾಗ ಹಿಂದೂ ಸಂಘಟನೆಗಳ ಕಾರ್ಯಕರ್ತರ ಕಗ್ಗೊಲೆಯಾಗಿತ್ತು. ಹಳೆ ಪ್ರಕರಣಗಳ ಈಗ ಹೊರ ತೆಗೆದು, ಹಿಂದೂ ಕಾರ್ಯಕರ್ತರನ್ನೇ ಗುರಿಯಾಗಿಸಿದೆ. ಇಂತಹ ದ್ವೇಷ ರಾಜಕಾರಣ ನಾವು ಸಹಿಸುವುದಿಲ್ಲ ಎಂದು ಹೇಳಿದರು.

ಬಂಧಿತರಾದ ಶ್ರೀಕಾಂತ ಪೂಜಾರಿ ಸೇರಿ ಇಬ್ಬರೂ ಹಿಂದೂ ಕಾರ್ಯಕರ್ತರ ತಕ್ಷಣ ಬಿಡುಗಡೆ ಮಾಡಬೇಕು. ಈ ಬಗ್ಗೆ ಉದಾಸೀನ ಮಾಡಿದರೆ ತೀವ್ರ ಸ್ವರೂಪದ ಹೋರಾಟ ನಡೆಸಬೇಕಾಗುತ್ತದೆ. ಹಿಂದೂಗಳಲ್ಲಿ ಭಯ ಹುಟ್ಟು ಹಾಕಲು ಮುಂದಾಗುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ, ಸಿದ್ದರಾಮಯ್ಯ ಆಡಳಿತಕ್ಕೆ ಇನ್ನು ಕೆಲವೇ ತಿಂಗಳಲ್ಲಿ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಜನರೇ ಭಯ ಹುಟ್ಟಿಸುವುದು ನಿಶ್ಚಿತ ಎಂದು ಎಚ್ಚರಿಸಿದರು.

ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಎಸ್.ಜಗದೀಶ, ಉಪಾಧ್ಯಕ್ಷರಾದ ಟಿ.ಶ್ರೀನಿವಾಸ ದಾಸಕರಿಯಪ್ಪ, ಮಂಜಾನಾಯ್ಕ, ಪಾಲಿಕೆ ಸದಸ್ಯರಾದ ಆರ್‌.ಶಿವಾನಂದ, ಆರ್.ಎಲ್.ಶಿವ ಪ್ರಕಾಶ, ಎಚ್.ಎನ್.ಶಿವಕುಮಾರ, ಎಂ.ಪಿ.ಕೃಷ್ಣಮೂರ್ತಿ ಪವಾರ್‌, ಬಾತಿ ವೀರೇಶ ದೊಗ್ಗಳ್ಳಿ, ಎಚ್.ಪಿ.ವಿಶ್ವಾಸ್‌, ಜಿ.ಎಸ್.ಶ್ಯಾಮ್‌ ಮಾಯಕೊಂಡ, ಕೊಟ್ರೇಶ ಗೌಡ, ಕಿಶೋರ, ಯಲ್ಲೇಶ, ಗಂಗಾಧರ, ಅತಿಥ್ ಅಂಬರಕರ್‌, ನೀಲಗುಂದ ರಾಜು, ಶಿವನಗೌಡ ಪಾಟೀಲ್, ಟಿಂಕರ್ ಮಂಜಣ್ಣ, ಶ್ಯಾಬನೂರು ರಾಜು, ಮಂಜಣ್ಣ, ಶಾಬನೂರು ಹರೀಶ, ಕೆ.ರಾಜೇಶ ಇತರರಿದ್ದರು.ಕರ ಸೇವಕರು, ಹಿಂದೂ ಪರ ಹೋರಾಟಗಾರರು, ಕಾರ್ಯಕರ್ತರಲ್ಲಿ ಭಯ ಹುಟ್ಟು ಹಾಕುವ ತಂತ್ರ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಇದು ಅಲ್ಪಸಂಖ್ಯಾತರ ತುಷ್ಟೀಕರಣದ ಪರಮಾವಧಿ. ಕಾಂಗ್ರೆಸ್ ಸರ್ಕಾರ ಮತ್ತು ದ್ವೇಷ ರಾಜಕಾರಣ ಆರಂಭಿಸಿದೆ.

ಎಸ್.ಎಂ.ವೀರೇಶ ಹನಗವಾಡಿ, ಜಿಲ್ಲಾಧ್ಯಕ್ಷ