ಸ್ವಚ್ಛ ಬಳ್ಳಾರಿ-ಸದೃಢ ಬಳ್ಳಾರಿ ನಿರ್ಮಾಣಕ್ಕೆ ಕೈಜೋಡಿಸಿ-ಭರತ ರೆಡ್ಡಿ

| Published : Jan 04 2024, 01:45 AM IST

ಸ್ವಚ್ಛ ಬಳ್ಳಾರಿ-ಸದೃಢ ಬಳ್ಳಾರಿ ನಿರ್ಮಾಣಕ್ಕೆ ಕೈಜೋಡಿಸಿ-ಭರತ ರೆಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ಮಾದಕ ದ್ರವ್ಯ ಸೇವನೆಯಿಂದ ಉಂಟಾಗುವ ದುಷ್ಪರಿಣಾಮ ಮತ್ತು ಸಾಗಾಣಿಕೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಬಳ್ಳಾರಿಯಲ್ಲಿ ಮಾರಥಾನ್ ಹಮ್ಮಿಕೊಳ್ಳಲಾಗಿತ್ತು. 1300ರಿಂದ 1400 ಮಂದಿ ಯುವಕ ಯುವತಿಯರು, ಸಂಘ ಸಂಸ್ಥೆಯ ಪದಾಧಿಕಾರಿಗಳು, ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

ಬಳ್ಳಾರಿ: ಸ್ವಚ್ಛ ಬಳ್ಳಾರಿ ಹಾಗೂ ಸದೃಢ ಬಳ್ಳಾರಿ ರೂಪಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದ್ದು, ಡ್ರಗ್ಸ್ ಮುಕ್ತ ಕಾರ್ಯಕ್ಕೆ ಯುವಕರು ಹಾಗೂ ಸಾರ್ವಜನಿಕರು ಕೈ ಜೋಡಿಸಬೇಕು ಎಂದು ನಗರ ಶಾಸಕ ಭರತ್ ರೆಡ್ಡಿ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಎಂಎಸ್‍ಪಿಎಲ್ ಬಲ್ಡೋಟಾ ಇವರ ಸಂಯುಕ್ತಾಶ್ರಯದಲ್ಲಿ ನಗರದಲ್ಲಿ ಮಾದಕ ದ್ರವ್ಯ ಸೇವನೆಯಿಂದ ಉಂಟಾಗುವ ದುಷ್ಪರಿಣಾಮ ಮತ್ತು ಸಾಗಾಣಿಕೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡಿದ್ದ ಮ್ಯಾರಥಾನ್ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಇಂದಿನ ಯುವಪೀಳಿಗೆಯು ಮಾದಕ ವಸ್ತುಗಳಿಂದ ದೂರವಿರಬೇಕು. ತಂದೆ-ತಾಯಿಯಂದಿರ ಆಶಾಮನೋಭಾವನೆಗಳನ್ನು ಈಡೇರಿಸಬೇಕು. ಯಾವುದೇ ದುಶ್ಚಟಗಳಿಗೆ ಒಳಗಾಗದಂತೆ ಎಚ್ಚರವಹಿಸಬೇಕು ಎಂದು ಶಾಸಕ ಭರತ್ ರೆಡ್ಡಿ ಯುವ ಸಮುದಾಯಕ್ಕೆ ಕರೆ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಮಾತನಾಡಿ, ಯುವಕ ಮತ್ತು ಯುವತಿಯರು ಮಾದಕ ದ್ರವ್ಯ ಸೇವನೆಯಿಂದ ಉಂಟಾಗುವ ದುಷ್ಪರಿಣಾಮ ಮತ್ತು ಸಾಗಾಣಿಕೆ ಕುರಿತು ಅರಿವು ಮೂಡಿಸಲು ಈ ಮ್ಯಾರಾಥಾನ್ ಹಮ್ಮಿಕೊಳ್ಳಲಾಗಿದ್ದು, ನಿಮ್ಮ ಸ್ನೇಹಿತರು ಮತ್ತು ಸಂಬಂಧಿಕರಿಗೆ ಕೂಡ ಅರಿವು ಮತ್ತು ಜಾಗೃತಿ ಮೂಡಿಸುವ ಕಾರ್ಯವಾಗಬೇಕು ಎಂದು ಹೇಳಿದರು.ಮ್ಯಾರಥಾನ್ ಹಾಗೂ ವಾಕ್‌ಥಾನ್‍ ಜಿಲ್ಲಾ ಪೊಲೀಸ್ ಕಚೇರಿ ಆವರಣದಿಂದ ಆರಂಭವಾಗಿ ಕನಕದುರ್ಗಮ್ಮ ದೇವಸ್ಥಾನದ ಆವರಣದಿಂದ ಎಸ್.ಪಿ. ವೃತ್ತ, ಅಂಬೇಡ್ಕರ್ ವೃತ್ತ, ಎಚ್.ಆರ್. ಗವಿಯಪ್ಪ ವೃತ್ತ, ವಾರ್ಡ್ಲಾ ಕಾಲೇಜ್ ರಸ್ತೆ, ಕಾಳಮ್ಮ ವೃತ್ತ, ಗಡಿಗಿ ಚೆನ್ನಪ್ಪ ವೃತ್ತ ಮೂಲಕ ಡಾ. ರಾಜ್‍ಕುಮಾರ್ ರಸ್ತೆಯ ಮುನಿಸಿಪಲ್ ಕಾಲೇಜು ಮೈದಾನಕ್ಕೆ ತಲುಪಿತು.ಮ್ಯಾರಥಾನ್ ಸ್ಪರ್ಧೆಯಲ್ಲಿ ಸುಮಾರು 1300ರಿಂದ 1400 ಮಂದಿ ಯುವಕ ಯುವತಿಯರು, ಸಂಘ ಸಂಸ್ಥೆಯ ಪದಾಧಿಕಾರಿಗಳು, ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.

ಪುರುಷ ಮ್ಯಾರಥಾನ್ ಸ್ಪರ್ಧೆಯಲ್ಲಿ ಜಿಆರ್‌ಎಸ್ ಕಾಲೇಜಿನ ವಿದ್ಯಾರ್ಥಿ ಚೆನ್ನಬಸವ (ಪ್ರಥಮ ಸ್ಥಾನ), ವಾಡ್ಲಾ ಕಾಲೇಜಿನ ವಿದ್ಯಾರ್ಥಿ ತಿಪ್ಪೇಶ್ ಯಾದವ್ (ದ್ವಿತೀಯ ಸ್ಥಾನ), ಎಸ್.ಎಸ್.ಎ. ಕಾಲೇಜಿನ ವಿದ್ಯಾರ್ಥಿ ಚಂದನ್ (ತೃತೀಯ ಸ್ಥಾನ) ಪಡೆದರು. ಮಹಿಳೆಯರ ವಿಭಾಗದಲ್ಲಿ ವಾರ್ಡ್ಲಾ ಕಾಲೇಜಿನ ವಿದ್ಯಾರ್ಥಿನಿ ಪವಿತ್ರ ಬೀಳಗಿ (ಪ್ರಥಮ ಸ್ಥಾನ), ಸಂಧ್ಯಾ ಜಿ.ಎಲ್. (ದ್ವಿತೀಯ ಸ್ಥಾನ), ಜೀನಿಯಸ್ ಶಾಲೆಯ ವಿದ್ಯಾರ್ಥಿನಿ ಹಾರಿಕ ಸಾಯಿ (ತೃತೀಯ ಸ್ಥಾನ) ಪಡೆದರು. ವಿಜೇತರಿಗೆ ನಗದು ಬಹುಮಾನ, ಕಪ್ ಹಾಗೂ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ನೀಡಿ ಅಭಿನಂದಿಸಲಾಯಿತು.

ಡಿಸಿ ಪ್ರಶಾಂತ್ ಕುಮಾರ್ ಮಿಶ್ರಾ, ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ, ಸಹಾಯಕ ಆಯುಕ್ತ ಹೇಮಂತ್ ಕುಮಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂದೀಪ್ ಸೂರ್ಯವಂಶಿ, ಬಳ್ಳಾರಿ ವಿವಿ ಕುಲಸಚಿವ ಎಸ್.ಎನ್. ರುದ್ರೇಶ್, ಎಎಸ್ಪಿ ಕೆ.ಪಿ. ರವಿಕುಮಾರ್, ನವೀನ್‍ಕುಮಾರ್ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.