ಸಾರಾಂಶ
ನಾನು ಹಾನಗಲ್ ಮೊಮ್ಮಗ. ನನ್ನ ಮಗ ಆನಂದಸ್ವಾಮಿ ಗಡ್ಡದೇವರಮಠ ನಿಮ್ಮ ಅಂಗಳದಲ್ಲಿ ಆಡಿ ಬೆಳೆದ ಹುಡುಗ, ಹಾನಗಲ್‌ನ ಮರಿಮೊಮ್ಮಗ. ಕಾಂಗ್ರೆಸ್ ಹಾವೇರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡಿದ್ದು, ಬೆಂಬಲಿಸಿ ಎಂದು ಶಿರಹಟ್ಟಿಯ ಮಾಜಿ ಶಾಸಕ ಜಿ.ಎಸ್.ಗಡ್ಡದೇವರಮಠ ಮನವಿ ಮಾಡಿದರು.
ಹಾನಗಲ್ಲ: ನಾನು ಹಾನಗಲ್ಲ ಮೊಮ್ಮಗ. ನನ್ನ ಮಗ ಆನಂದಸ್ವಾಮಿ ಗಡ್ಡದೇವರಮಠ ನಿಮ್ಮ ಅಂಗಳದಲ್ಲಿ ಆಡಿ ಬೆಳೆದ ಹುಡುಗ, ಹಾನಗಲ್ಲಿನ ಮರಿಮೊಮ್ಮಗ. ಕಾಂಗ್ರೆಸ್ ಗುರುತಿಸಿ ಹಾವೇರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವಕಾಶ ನೀಡಿದ್ದು, ಬೆಂಬಲಿಸಿ ಎಂದು ಶಿರಹಟ್ಟಿಯ ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಮನವಿ ಮಾಡಿದರು.
ತಾಲೂಕಿನ ಡೊಳ್ಳೇಶ್ವರ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ವಿವಿಧ ಸಮಾಜಗಳ ಮುಖಂಡರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಒಂದು ವೇಳೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಬಹುಶಃ ಇದೇ ಕೊನೆಯ ಚುನಾವಣೆಯಾಗಲಿದೆ. ಸಂವಿಧಾನ ತಿರುಚುತ್ತಿರುವ ಬಿಜೆಪಿ ಹಕ್ಕುಗಳನ್ನು ಕಸಿಯಲೆತ್ನಿಸುತ್ತಿದೆ. ಅನ್ಯಾಯದ ವಿರುದ್ಧ ಧ್ವನಿ ಎತ್ತುವಂತಿಲ್ಲ, ನ್ಯಾಯಸಮ್ಮತ ಹಕ್ಕು ಕೇಳುವಂತಿಲ್ಲ, ಏನನ್ನೂ ಪ್ರಶ್ನಿಸುವಂತಿಲ್ಲ. ಹಾಗೇನಾದರೂ ಮಾಡಿದರೆ ಅವರಿಗೆ ಕಿರುಕುಳ ನೀಡಲಾಗುತ್ತಿದೆ. ಇಂಥ ಜನವಿರೋಧಿ, ಕರುನಾಡ ವಿರೋಧಿ ಬಿಜೆಪಿಗೆ ಬುದ್ಧಿ ಕಲಿಸಬೇಕಿದೆ ಎಂದು ಹೇಳಿದರು.ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರಿಗೆ ತಾವು ಹಾನಗಲ್ಲ ಅಳಿಯ ಎನ್ನುವುದು ನೆನಪಾಗಿದೆ. ಅವರಿಗೆ ಮುಖ್ಯಮಂತ್ರಿಯ ಯೋಗ ಕೂಡಿ ಬಂದಿತ್ತು. ಆ ಸಮಯದಲ್ಲಿ ಹಾನಗಲ್ಲಿಗೆ ಏನಾದರೂ ಮಾಡಬೇಕು ಎನ್ನುವುದು ಮಾತ್ರ ನೆನಪಾಗಲೇ ಇಲ್ಲ. ೨೦೨೧ರಲ್ಲಿ ನಡೆದ ಹಾನಗಲ್ ಉಪ ಚುನಾವಣೆಯ ಸಂದರ್ಭದಲ್ಲಿಯೂ ಅವರೂ ಹಾನಗಲ್ ಅಳಿಯ ಎಂದು ಹೇಳಿಕೊಂಡು, ಹತ್ತಾರು ಮಂತ್ರಿಗಳನ್ನು ಗಲ್ಲಿ ಗಲ್ಲಿ ಓಡಾಡಿಸಿದರೂ ಜನ ಮಾತ್ರ ತಮ್ಮ ಕೈ ಬಿಡಲಿಲ್ಲ ಎಂದು ನೆನಪಿಸಿಕೊಂಡ ಶ್ರೀನಿವಾಸ ಮಾನೆ, ಅವಕಾಶ ಇದ್ದಾಗ ಏನೂ ಮಾಡದವರು ಈಗೇನು ಮಾಡುತ್ತಾರೆ ಎಂದು ಪ್ರಶ್ನಿಸಿದರು.
ಕೆಪಿಸಿಸಿ ಸದಸ್ಯ ಟಾಕನಗೌಡ ಪಾಟೀಲ, ಜಿಪಂ ಮಾಜಿ ಸದಸ್ಯರಾದ ಎನ್.ಬಿ. ಪೂಜಾರ, ಮಹದೇವಪ್ಪ ಬಾಗಸರ, ತಾಪಂ ಮಾಜಿ ಅಧ್ಯಕ್ಷರಾದ ಶಿವಬಸಪ್ಪ ಪೂಜಾರ, ಸಿದ್ದನಗೌಡ ಪಾಟೀಲ, ಮುಖಂಡರಾದ ನಾಗಪ್ಪ ಸವದತ್ತಿ, ಘನಶಾಮ್ ದೇಶಪಾಂಡೆ, ರವಿ ದೇಶಪಾಂಡೆ, ಗೀತಾ ಪೂಜಾರ, ಅನಿತಾ ಶಿವೂರ, ಈರಣ್ಣ ಬೈಲವಾಳ, ಉಮೇಶ ಗೌಳಿ, ಮಧು ಪಾಣಿಗಟ್ಟಿ, ಪ್ರಕಾಶ ಬಣಕಾರ, ಶಿವಯೋಗಿ ಒಡೆಯರ, ಜೆ.ಸಿ. ಕುಲಕರ್ಣಿ, ಕಲವೀರಪ್ಪ ಪವಾಡಿ, ಫಕ್ಕಿರೇಶ ಮಾವಿನಮರದ, ಜಯಣ್ಣ ಕೂಡಲ ಭಾಗವಹಿಸಿದ್ದರು.