ಸಾರಾಂಶ
ಪೆಟ್ರೋಲ್, ಡೀಸೆಲ್ ಬೆಲೆಯನ್ನು ಅನಗತ್ಯವಾಗಿ ಏರಿಕೆ ಮಾಡುವ ಮೂಲಕ ಜನಸಾಮಾನ್ಯರ ಬದುಕಿಗೆ ಬರೆ ಎಳೆಯಲು ಸರ್ಕಾರ ಮುಂದಾಗಿರುವುದು ವಿಪರ್ಯಾಸ ಎಂದು ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಬಿ.ಎಸ್. ಪಂಚಾಕ್ಷ ತಿಳಿಸಿದರು.
ಗುಬ್ಬಿ: ಪೆಟ್ರೋಲ್, ಡೀಸೆಲ್ ಬೆಲೆಯನ್ನು ಅನಗತ್ಯವಾಗಿ ಏರಿಕೆ ಮಾಡುವ ಮೂಲಕ ಜನಸಾಮಾನ್ಯರ ಬದುಕಿಗೆ ಬರೆ ಎಳೆಯಲು ಸರ್ಕಾರ ಮುಂದಾಗಿರುವುದು ವಿಪರ್ಯಾಸ ಎಂದು ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷ ಬಿ.ಎಸ್. ಪಂಚಾಕ್ಷ ತಿಳಿಸಿದರು.
ಪಟ್ಟಣದ ಬಸ್ ನಿಲ್ದಾಣದ ಬಳಿ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ರಸ್ತೆ ತಡೆ ಮಾಡಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಮಾತನಾಡಿದರು. ಸರ್ಕಾರದ ಜನ ವಿರೋಧಿ ನೀತಿಗಳಿಂದಾಗಿ ಎಲ್ಲಾ ವಸ್ತುಗಳ ಬೆಲೆಗಳು ಗಗನಕ್ಕೇರುತ್ತಿವೆ. ಸರ್ಕಾರದ ಧೋರಣೆಯನ್ನು ಖಂಡಿಸಿ ನಿರಂತರವಾಗಿ ಹೋರಾಟ ಮಾಡುತ್ತಾ, ಜನಸಾಮಾನ್ಯರಿಗೆ ನ್ಯಾಯ ಒದಗಿಸಲು ಸಿದ್ಧರಿದ್ದೇವೆ ಎಂದು ಹೇಳಿದರು.ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಎಚ್ ಟಿ ಭೈರಪ್ಪ ಮಾತನಾಡಿ, ಇಂದಿನ ಹೋರಾಟ ಕೇವಲ ಸಾಂಕೇತಿಕವಾಗಿದ್ದು, ಈ ಮೂಲಕ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡುತ್ತಿದ್ದೇವೆ. ಸರ್ಕಾರ ಬೆಲೆ ಏರಿಕೆಯನ್ನು ಹಿಂಪಡೆಯದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸುತ್ತೇವೆ. ಈಗಾಗಲೇ ಬಸ್ ದರ, ವಿದ್ಯುತ್ ದರ, ಮುದ್ರಾಂಕ ಶುಲ್ಕ, ಅಬಕಾರಿ ತೆರಿಗೆ ಹೆಚ್ಚಿಸುವ ಮೂಲಕ ಜನಸಾಮಾನ್ಯರಿಗೆ ಸಂಕಷ್ಟವನ್ನು ತಂದು ಒಡ್ಡಿದೆ ಎಂದು ಹೇಳಿದರು.
ಮುಖಂಡ ಚಂದ್ರಶೇಖರ ಬಾಬು ಮಾತನಾಡಿ, ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರುವ ಕಾಂಗ್ರೆಸ್ ಪಕ್ಷ ರಾಜ್ಯದ ಜನತೆಯ ಮೇಲೆ ಸೇಡು ತೀರಿಸಿಕೊಳ್ಳಲು ಬೆಲೆಗಳನ್ನು ಏರಿಸುತ್ತಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲದ ಬೆಲೆ ಏರಿಕೆ ಆಗದಿದ್ದರೂ ಅನಗತ್ಯವಾಗಿ ತೈಲದರ ಏರಿಸಿರುವುದು ದುರದೃಷ್ಟಕರ ಎಂದರು.ಮುಖಂಡರಾದ ವಿಜಯಕುಮಾರ್, ನಂಜೇಗೌಡ,ಲಿಂಗಪ್ಪ, ಹಿತೇಶ್, ಲೋಕೇಶ್, ರಾಮಚಂದ್ರು, ಅಣ್ಣಪ್ಪಸ್ವಾಮಿ, ಶಂಕರ್ ಕುಮಾರ್, ಯತೀಶ್, ಬಸವರಾಜು, ಸಿದ್ದರಾಮಯ್ಯ ಪಾಲ್ಗೊಂಡಿದ್ದರು.