ಸಾರಾಂಶ
ಕನ್ನಡಪ್ರಭ ವಾರ್ತೆ ಸೊರಬ
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆದರೂ ಯಾವುದೇ ಅಭಿವೃದ್ಧಿ ಕಾರ್ಯಗಳು ಅನುಷ್ಠಾನಕ್ಕೆ ಬಂದಿಲ್ಲ. ಜನವಿರೋಧಿ ಆಡಳಿತ ನಡೆಸುತ್ತಿದೆ ಎಂದು ಜೆಡಿಎಸ್ ಹಿರಿಯ ಮುಖಂಡ ಕೆ.ಅಜ್ಜಪ್ಪ ಆರೋಪಿಸಿದರು.ಪಟ್ಟಣದ ದಂಡಾವತಿ ಬ್ಲಾಕ್‌ನ ಆಲೇಕಲ್ ಸಭಾಂಗಣದಲ್ಲಿ ತಾಲೂಕು ಜೆಡಿಎಸ್ ಮುಖಂಡರ ಸಭೆ ನಡೆಸಿ ಅವರು ಮಾತನಾಡಿದರು. ಅಧಿಕಾರದ ದಾಹದಿಂದಾಗಿ 5 ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿ, ಈಗ ಅನುಷ್ಠಾನಕ್ಕೆ ತಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಆರ್ಥಿಕ ಸಮಸ್ಯೆಗಳಿಂದ ತೊಳಲಾಡುತ್ತಿದೆ. ಈ ಕಾರಣದಿಂದ ಮುಂದಿನ ದಿನಗಳಲ್ಲಿ ಗ್ಯಾರಂಟಿ ಯೋಜನೆಗಳು ಸಂಪೂರ್ಣ ಹಳ್ಳ ಹಿಡಿಯಲಿವೆ ಎಂದರು.
ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ತಾಲೂಕಿನ ಮೂಡಿ, ಮೂಗೂರು ಏತ ನೀರಾವರಿ ಯೋಜನೆಗೆ ₹400 ಕೋಟಿ ಅನುದಾನ ನೀಡಿದ ಪರಿಣಾಮ ಯೋಜನೆ ಯಶಸ್ವಿಗೊಂಡಿದೆ. ಅನಂತರ ತಾಲೂಕಿನಲ್ಲಿ ಯಾವುದೇ ನೀರಾವರಿ ಯೋಜನೆಗಳು ಅನುಷ್ಠಾನಗೊಳ್ಳದಿರುವುದು ಸಚಿವ ಮಧು ಬಂಗಾರಪ್ಪ ಅವರಿಗೆ ರೈತರ ಮೇಲಿರುವ ಕಾಳಜಿ ಏನು ಎನ್ನುವುದನ್ನು ಎತ್ತಿ ತೋರಿಸುತ್ತದೆ ಎಂದು ಟೀಕಿಸಿದರು.ಗ್ಯಾರಂಟಿ ಯೋಜನೆಗಳ ಜಾರಿಯಲ್ಲಿ ಗುಂಡಿ ಬಿದ್ದಿರುವ ರಸ್ತೆಗೆ ದುರಸ್ತಿ ಮಾಡಲು ಸಹ ಸಾಧ್ಯವಾಗಿಲ್ಲ. ಅಭಿವೃದ್ಧಿ ಎನ್ನುವುದು ಮರೀಚಿಕೆಯಾಗಿದ್ದು, ಚುನಾವಣಾ ಸಮಯದಲ್ಲಿ ರೈತರ ಬಗೆಗಿನ ಕಾಳಜಿ ಮತ್ತು ಅಭಿವೃದ್ಧಿ ಮಂತ್ರ ಜಪಿಸಿ ಗೆಲುವು ಸಾಧಿಸಿದ ಮಧು ಬಂಗಾರಪ್ಪ ತಾಲೂಕನ್ನು ಅಭಿವೃದ್ಧಿ ಪಥದೆಡೆಗೆ ಸಾಗಿಸಲು ವಿಫಲರಾಗಿದ್ದಾರೆ ಎಂದು ಆರೋಪಿಸಿದ ಅವರು,
ಗುಂಡಿ ಬಿದ್ದ ರಸ್ತೆ, ಕುಡಿಯುವ ನೀರು ಮೊದಲಾದ ಮೂಲಸೌಕರ್ಯ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕು. ಇಲ್ಲದಿದ್ದರೆ ಸರ್ಕಾರ ಮತ್ತು ಶಾಸಕರ ವೈಫಲ್ಯ ಖಂಡಿಸಿ ಜೆಡಿಎಸ್‌ನಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿವುದು ಎಂದು ಎಚ್ಚರಿಸಿದರು.ಆಮ್ ಆದ್ಮಿ ಪಕ್ಷದ ಮುಖಂಡ ಓಂ ಪಿಕಲ್ಸ್ ಗಣೇಶ ತಮ್ಮ ಬೆಂಬಲಿಗರೊಂದಿಗೆ ಕೆ.ಅಜ್ಜಪ್ಪ ಅವರ ಮುಖಂಡತ್ವದಲ್ಲಿ ಜೆಡಿಎಸ್‌ಗೆ ಸೇರ್ಪಡೆಗೊಂಡರು.
ಜೆಡಿಎಸ್ ತಾಲೂಕು ಅಧ್ಯಕ್ಷ ಚಿಮಣೂರು ಹುಚ್ಚಪ್ಪ ಸಭೆ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ಮಹಿಳಾ ಘಟಕದ ಅಧ್ಯಕ್ಷೆ ಸುಮಾ ಗಜಾನನ, ನಗರ ಅಧ್ಯಕ್ಷ ಶ್ರೀಧರ್ ಶೇಟ್, ಅಲ್ಪಸಂಖ್ಯಾತ ಘಟಕ ಅಧ್ಯಕ್ಷ ಅಜೀಜ್, ವಿಷ್ಣು ಬಿಳವಾಣಿ, ಪುಂಡಲೀಕಪ್ಪ, ದಯಾನಂದ ಯಕ್ಷಿ, ಬಸವರಾಜ, ಲೋಕೇಶ್ ಬಾಡದಬೈಲು, ಮಾರುತಿ ಇತರರಿದ್ದರು.- - - -31ಕೆಪಿಸೊರಬ01:
ಸೊರಬ ಪಟ್ಟಣದ ಆಲೇಕಲ್ ಸಭಾಂಗಣದಲ್ಲಿ ತಾಲೂಕು ಜೆಡಿಎಸ್ ಮುಖಂಡರ ಸಭೆಯಲ್ಲಿ ಪಕ್ಷದ ಹಿರಿಯ ಮುಖಂಡ ಕೆ. ಅಜ್ಜಪ್ಪ ಮಾತನಾಡಿದರು.