ರಾಜ್ಯ ಸರ್ಕಾರದಿಂದ ಆರೆಸ್ಸೆಸ್‌ ವಿರೋಧಿ ಕ್ರಮ: ರೂಪಾಲಿ ಎಸ್. ನಾಯ್ಕ

| Published : Oct 25 2025, 01:00 AM IST

ರಾಜ್ಯ ಸರ್ಕಾರದಿಂದ ಆರೆಸ್ಸೆಸ್‌ ವಿರೋಧಿ ಕ್ರಮ: ರೂಪಾಲಿ ಎಸ್. ನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ದೇಶಭಕ್ತಿ, ದೇಶಸೇವೆ ಮಾಡುವ ಆರ್‌ಎಸ್‌ಎಸ್‌ ಮೇಲೆ ಕ್ರಮ ಕೈಗೊಂಡು ದೇಶದ್ರೋಹಿಗಳಿಗೆ ಕಾಂಗ್ರೆಸ್ ಸರ್ಕಾರ ಮಣೆ ಹಾಕುತ್ತಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಕಾರವಾರ: ದೇಶಭಕ್ತಿ, ದೇಶಸೇವೆ ಮಾಡುವ ಆರ್‌ಎಸ್‌ಎಸ್‌ ಮೇಲೆ ಕ್ರಮ ಕೈಗೊಂಡು ದೇಶದ್ರೋಹಿಗಳಿಗೆ ಕಾಂಗ್ರೆಸ್ ಸರ್ಕಾರ ಮಣೆ ಹಾಕುತ್ತಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಸಚಿವ ಪ್ರಿಯಾಂಕ ಖರ್ಗೆ ಕೇವಲ ಪ್ರಚಾರದ ತೆವಲಿಗಾಗಿ ಹಾಗೂ ರಾಜಕೀಯ ಮಹತ್ವಾಕಾಂಕ್ಷೆಯಿಂದ ಆರ್‌ಎಸ್‌ಎಸ್‌ ನಿಷೇಧಿಸುವ ಮಾತುಗಳನ್ನಾಡಿದ್ದಾರೆ. ರಾಜ್ಯ ಸರ್ಕಾರ ಆರ್‌ಎಸ್‌ಎಸ್‌ ಪಥಸಂಚಲನಕ್ಕೆ ಅವಕಾಶ ನಿರಾಕರಿಸುತ್ತಿದೆ. ಗಣವೇಷಧಾರಿ ನೌಕರರ ಮೇಲೆ ಕ್ರಮ ಕೈಗೊಳ್ಳುತ್ತಿದೆ. ಆರ್‌ಎಸ್‌ಎಸ್‌ ನಿಷೇಧಿಸುವ ಸಚಿವರಾದ ಪ್ರಿಯಾಂಕ ಖರ್ಗೆ ಹೇಳಿಕೆ ಖಂಡನೀಯ. ಹಾಗೆ ಪಥ ಸಂಚಲನಕ್ಕೆ ಅನುಮತಿ ನೀಡದಿರುವುದು, ಗಣವೇಷಧಾರಿ ನೌಕರರ ಮೇಲೆ ಕ್ರಮ ಕೈಗೊಳ್ಳುವುದು ಸಹ ಖಂಡನೀಯ ಎಂದು ಅವರು ಹೇಳಿದ್ದಾರೆ.ಆರ್‌ಎಸ್‌ಎಸ್‌ ನೂರು ವರ್ಷಗಳಿಂದ ಈ ದೇಶಕ್ಕಾಗಿ, ದೇಶಸೇವೆಗಾಗಿ ತನ್ನನ್ನು ಮುಡಿಪಾಗಿಟ್ಟಿದೆ. ಈ ನೂರು ವರ್ಷಗಳಲ್ಲಿ ಆರ್‌ಎಸ್‌ಎಸ್‌ ಅನೇಕ ಅಗ್ನಿಪರೀಕ್ಷೆಗಳನ್ನು ಎದುರಿಸಿದೆ. ಆರ್‌ಎಸ್‌ಎಸ್‌ ಮಣಿಸಲು ಹಿಂದೆ ಕಾಂಗ್ರೆಸಿನ ಘಟಾನುಘಟಿಗಳು ಪ್ರಯತ್ನಿಸಿದ್ದರೂ ಅದು ಯಶಸ್ವಿಯಾಗಿಲ್ಲ. ಈಗ ಪ್ರಿಯಾಂಕ ಖರ್ಗೆ ಹೈಕಮಾಂಡ್ ಗಮನ ಸೆಳೆಯಲೋ ಅಥವಾ ಇಂತಹ ಹೇಳಿಕೆಗಳಿಂದ ತಾವೊಬ್ಬ ಮಹಾನ್ ನಾಯಕರಾಗಿ ಬಿಡಬಹುದು ಎಂಬ ಭ್ರಮೆಯಿಂದ ಹೇಳಿಕೆ ಕೊಟ್ಟಿದ್ದಾರೆ. ವಿಪರ್ಯಾಸ ಎಂದರೆ ಹಾಗೆ ಹೇಳಿಕೆಕೊಟ್ಟ ಪ್ರಿಯಾಂಕ ಖರ್ಗೆ ಈಗ ಪಕ್ಷದಲ್ಲೇ ಏಕಾಂಗಿಯಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಸಮಾಜಸೇವೆ ಹಾಗೂ ದೇಶಸೇವೆಗೆ ಆರ್‌ಎಸ್‌ಎಸ್‌ ಮಾದರಿ. ಇಂತಹ ದೇಶಭಕ್ತ ಸಂಘಟನೆಯನ್ನು ನಿಷೇಧಿಸಲು ಕಾಂಗ್ರೆಸಿಗರು ಮುಂದಾಗುತ್ತಾರೆ. ನಮ್ಮ ನೆಲದಲ್ಲಿ ನಿಂತು ಪಾಕಿಸ್ತಾನ್ ಜಿಂದಾಬಾದ್ ಎನ್ನುವವರನ್ನು ಓಲೈಕೆ ಮಾಡುತ್ತಾರೆ. ಕಾಂಗ್ರೆಸ್ ನಿಜವಾದ ಬಣ್ಣ ಈಗ ಬಯಲಾಗಿದೆ ಎಂದು ರೂಪಾಲಿ ಹೇಳಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಸಾಮಾಜಿಕವಾಗಿ ಸಂಕಷ್ಟದ ಸಂದರ್ಭಗಳು ಎದುರಾದಾಗ, ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಮಾನವೀಯ ನೆರವು ನೀಡಿದೆ. ವಸುಧೈವ ಕುಟುಂಬಕಂ ಎಂಬ ಧ್ಯೇಯವನ್ನಿಟ್ಟುಕೊಂಡು ಈ ದೇಶದ ಏಕತೆಗಾಗಿ, ನಮ್ಮ ಸಂಸ್ಕೃತಿ ರಕ್ಷಣೆಗಾಗಿ ಅವಿರತವಾಗಿ ದುಡಿಯುತ್ತಿದೆ. ಪ್ರಿಯಾಂಕ ಖರ್ಗೆ ಅವರೇ, ಇಂತಹ ಉದಾತ್ತ ಮನೋಭಾವ ಇರುವ ಆರ್‌ಎಸ್‌ಎಸ್‌ ನಿಷೇಧಿಸುವ ಮಾತುಗಳನ್ನಾಡುವ ಮೂಲಕ ಏನನ್ನು ಸಾಧಿಸಲು ಹೊರಟಿದ್ದೀರಿ. ದೇಶಸೇವೆ, ಸಮಾಜಸೇವೆ ಮಾಡುವ ಆರ್‌ಎಸ್‌ಎಸ್‌ ಮೇಲೆ ಕ್ರಮ ಕೈಗೊಂಡರೆ, ಅಂತಹ ಮಾತುಗಳನ್ನಾಡಿದರೆ ಕಾಂಗ್ರೆಸ್‌ನಲ್ಲಿ ಉನ್ನತ ಹುದ್ದೆ ಸಿಗಬಹುದು ಎಂಬ ಭಾವನೆ ಕಾಂಗ್ರೆಸ್‌ನ ಈ ಮುಖಂಡರದ್ದಾಗಿದೆ ಎಂದು ರೂಪಾಲಿ ಎಸ್. ನಾಯ್ಕ ತಿರುಗೇಟು ನೀಡಿದ್ದಾರೆ.