ಕನ್ನಡಪ್ರಭ ವಾರ್ತೆ ಬಾಗಲಕೋಟೆ
ರಾಜ್ಯದಲ್ಲಿ ಎಸ್ಸಿ, ಎಸ್ಟಿ, ಒಬಿಸಿ ವಿರೋಧಿ ಸರ್ಕಾರ ಇದೆ. ಯಾರ ಮತ ಪಡೆದಿದ್ದಾರೋ ಅವರಿಗೆ ಅನ್ಯಾಯ ಮಾಡುವ ಸರ್ಕಾರ ಇದೆ. ಗಂಗಾಮತಸ್ಥರೇ, ಸುಶಿಕ್ಷಿತರಾದ ನೀವು ಎಲ್ಲಿರುತ್ತೇವೆ, ಅಲ್ಲಿ ಗೆಲುವಿದೆ ಎಂದು ತೋರಿಸಿ. ಆಗ ಎಲ್ಲ ರಾಜಕೀಯ ಪಕ್ಷಗಳು ನಿಮ್ಮ ಬಾಗಿಲಿಗೆ ಬರುತ್ತವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.ಬಾಗಲಕೋಟೆ ಉಪಚುನಾವಣೆ ಹಿನ್ನೆಲೆಯಲ್ಲಿ ಬಾಗಲಕೋಟೆ ಜಿಲ್ಲೆಯ ಬಮ್ಮಣಗಿ ಗ್ರಾಮದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರ ಪರವಾಗಿ ಮತಯಾಚನೆಯ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಂಬಿಗರ ಚೌಡಯ್ಯನವರ ಕುಲಬಾಂಧವರನ್ನು ನೋಡುವುದು ಬಹಳ ಸಂತೋಷವಾಗುತ್ತದೆ. ಅತ್ಯಂತ ಕಠಿಣ ಪರಿಶ್ರಮ ಪಡುವ ಕುಲ ಅದು. ಬಹಳಷ್ಟು ಸಾಹಸಮಯವಾಗಿ ಬದುಕು ನಡೆಸುವುದು ಅಂಬಿಗರ ಸಮುದಾಯ, ಬದುಕಿನ ಮೇಲೆ ಬಹಳ ವಿಶ್ವಾಸ ಇಟ್ಟವರು. ಹಡಗನ್ನು ನದಿಗೆ ಹಾಕಿದಾಗ ಅದು ದಡಕ್ಕೆ ತೆಗೆದುಕೊಂಡು ಹೋಗುತ್ತದೆ ಎನ್ನುವ ವಿಶ್ವಾಸ ನಾವಿಕ ಇಟ್ಟುಕೊಂಡಿರುತ್ತಾನೆ. ಅಲ್ಲದೆ ಗಾಳ ಹಾಕಿದರೆ ಇಂದು ಮೀನು ಸಿಗದಿದ್ದರೂ ನಾಳೆ ಸಿಗುತ್ತದೆ ಎನ್ನುವ ನಂಬಿಕೆಯಿಂದ ಬದುಕುವ ಸಮುದಾಯ. ಈ ಸಮುದಾಯ ಮುಂದೆ ಬರಬೇಕು ಎಂದು ಹೇಳಿದರು.ಜ್ಞಾನದಿಂದ ಶಕ್ತಿ:ಒಂದು ಕಾಲದಲ್ಲಿ ಭೂಮಿ ಇದ್ದವರು ಜಗತ್ತು ಆಳಿದರು. ಅಲೆಕ್ಸಾಂಡರ್ ಜಗತ್ತನ್ನೇ ಆಳಬಯಸಿದ, ನಂತರ ಬ್ರಿಟಿಷರು ಅವರ ಬಳಿ ದುಡ್ಡಿತ್ತು, ಅವರು 139 ದೇಶ ಆಳಿದರು. 21ನೇ ಶತಮಾನದಲ್ಲಿ ಜ್ಞಾನ ಇದ್ದವರು ಜಗತ್ತು ಆಳುತ್ತಾರೆ. ನಿಮ್ಮ ಕಠಿಣ ಪರಿಶ್ರಮದ ಜೊತೆಗೆ ಜ್ಞಾನ ಕೊಟ್ಟರೆ ಜಗತ್ತನ್ನು ಆಳುತ್ತೀರಿ. ಇಡೀ ಜಗತ್ತಿನಲ್ಲಿ ಈ ಸಮಾಜ ಜ್ಞಾನ ಪಡೆದುಕೊಳ್ಳಬೇಕು. ಶಿಕ್ಷಣವಂತರಾದರೆ ನಿಮ್ಮ ಕೈ ಯಾವಾಗಲೂ ಭೂಮಿ ನೋಡುತ್ತದೆ. ಬೇಡುವ ಕೈ ಆಕಾಶ ಕಡೆಗೆ ನೋಡುತ್ತದೆ. ನೀಡುವ ಕೈ ಭೂಮಿಯ ಕಡೆಗೆ ನೋಡುತ್ತದೆ. ಜ್ಞಾನ ಪಡೆದುಕೊಳ್ಳಿ ನಿಮಗೂ ನೀಡುವ ಶಕ್ತಿ ಬರುತ್ತದೆ ಎಂದು ಹೇಳಿದರು.
ಈ ವೇಳೆ ಲೋಕಸಭಾ ಸದಸ್ಯರಾದ ಗೋವಿಂದ ಕಾರಜೋಳ, ವಿಧಾನ ಪರಿಷತ್ ಸದಸ್ಯರಾದ ಎನ್. ರವಿಕುಮಾರ, ಹನುಂಮತ ನಿರಾಣಿ, ಮಾಜಿ ಶಾಸಕರಾದ ಎ.ಎಸ್. ಪಾಟೀಲ್ ನಡಹಳ್ಳಿ, ರಮೇಶ ಭೂಸನೂರ, ಸೋಮನಗೌಡ ಪಾಟೀಲ, ಮುಖಂಡರಾದ ಅವ್ವಣ್ಣ ಮ್ಯಾಕೇರಿ, ರಾಮಣ್ಣ ಬಮ್ಮಳಗಿ, ನಾಗಪ್ಪ ಅಂಬಿ, ಗುರು ತಳವಾರ, ಯಲ್ಲಪ್ಪ ಯಡಳ್ಳಿ, ವೆಂಕಟೇಶ ಉಪ್ಪಾರ ಸೇರಿದಂತೆ ಅಂಬಿಗೇರ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.