ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ರಾಜ್ಯ ಸರ್ಕಾರ ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಯನ್ನಾಗಿ ಘೋಷಿಸಿದ್ದು, ಇದೀಗ ಬಸವ ಜಯಂತಿಯಂದು ಬಸವ ತತ್ವವನ್ನು ಎಲ್ಲೆಡೆ ಸಾರಲು ಅನುಭವ ಮಂಟಪ ಬಸವಾದಿ ಶರಣರ ವೈಭವ ಎಂಬ ಹೆಸರಿನಲ್ಲಿ 12ನೇ ಶತಮಾನದ ಅನುಭವ ಮಂಟಪವನ್ನು ಮರುಸೃಷ್ಟಿಸಲಾಗುತ್ತಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಝ ತಂಗಡಗಿ ಹೇಳಿದರು.ಕಾರ್ಯಕ್ರಮದ ಹಿನ್ನೆಲೆ ಭಾನುವಾರ ಕೂಡಲಸಂಗಮದಲ್ಲಿ ಸಮಿತಿ ಸದಸ್ಯರ ಸಭೆ ನಡೆಸಿದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಫುರ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಬಸವಣ್ಣ ಅವರ ಐಕ್ಯ ಸ್ಥಳವಾದ ಕೂಡಲಸಂಗಮದಲ್ಲಿ ಏ.29 ಮತ್ತು 30ರಂದು ಎರಡು ದಿನ ಕಾರ್ಯಕ್ರಮ ನಡೆಯಲಿದ್ದು, ಮುಖ್ಯಮಂತ್ರಿಗಳ ಜತೆ ಚರ್ಚಿಸಿ ದಿನಾಂಕ ಅಂತಿಮಗೊಳಿಸಲಾಗುವುದು. ಎರಡು ದಿನದ ಕಾರ್ಯಕ್ರಮಕ್ಕೆ ಸಮಾಜದ ಪ್ರಜ್ಞಾವಂತರು, ಸಾಹಿತಿ, ಸರ್ವ ಧರ್ಮದ ಸಾಧು- ಸಂತರನ್ನು ಆಹ್ವಾನಿಸಲಾಗುವುದು ಎಂದು ತಿಳಿಸಿದರು.ಕಳೆದ ಬಜೆಟ್ ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ವಧರ್ಮ ಸಂಸತ್ತು ಎಂಬ ಘೋಷ ವಾಕ್ಯದಡಿ ಕಾರ್ಯಕ್ರಮ ಆಯೋಜನೆ ಮಾಡುವುದಾಗಿ ಘೋಷಣೆ ಮಾಡಿದ್ದರು. ಅಲ್ಲದೆ, ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ನಮ್ಮ ಸರ್ಕಾರ ಘೋಷಣೆ ಮಾಡಿದೆ. ಅದರ ಜತೆಗೆ ಬಸವ ತತ್ವ, ವಚನಗಳು ಹಾಗೂ 12ನೇ ಶತಮಾನದಲ್ಲಿ ಕಲ್ಯಾಣ ಕರ್ನಾಟಕದಲ್ಲಿ ಅವರು ತಂದ ಸುಧಾರಣೆಗಳ ಕುರಿತು ಜನರಿಗೆ ತಿಳಿಸುವುದು ಹಾಗೂ ಧರ್ಮಗಳ ನಡುವಿನ ಭೇದ ತೊಡೆದು ಹಾಕುವ ಉದ್ದೇಶ ಹೊಂದಲಾಗಿದೆ ಎಂದು ವಿವರಿಸಿದರು.
ಈ ಕಾರ್ಯಕ್ರಮದ ಮೂಲಕ ಎಲ್ಲ ಧರ್ಮಗಳ ಸಾರವನ್ನು ಜನರಿಗೆ ತಿಳಿಸುವಂತಹ ವಿಚಾರ ಮತ್ತು ಚರ್ಚಾಗೋಷ್ಠಿಗಳು ನಡೆಯಲಿವೆ. ಬಸವಾದಿ ಶರಣದ ತತ್ವಗಳನ್ನು ಜನರಿಗೆ ತಿಳಿಸುವ ವಿಧಾನದ ಬಗ್ಗೆಯೂ ಚರ್ಚೆಸಲಾಗುತ್ತದೆ. ಜತೆಗೆ, ಬಸವಣ್ಣ ಅವರೊಂದಿಗಿದ್ದ 100ಕ್ಕೂ ಹೆಚ್ಚಿನ ಶರಣರ ವಚನಗಳು, ಜೀವನಗಳ ಕುರಿತು ಮಾಹಿತಿ ಪ್ರದರ್ಶಿಸಲಾಗುತ್ತದೆ.ಬಸವಾದಿ ಶರಣರ ಜತೆಗೆ ಸಮಾಜದಲ್ಲಿ ಎಲ್ಲ ಧರ್ಮಗಳ ಸಾರ ಒಂದೇ ಎಂದು ಸಾರಿದ ಬುದ್ಧ ಮತ್ತು ಧರ್ಮ-ಜಾತಿಗಳ ವಿರುದ್ಧವಾಗಿ ಹೋರಾಡಿದ ಡಾ. ಬಿ.ಆರ್.ಅಂಬೇಡ್ಕರ್ ಅವರ ಜೀವನ, ಸಿದ್ಧಾಂತಗಳನ್ನು ಪ್ರತಿಬಿಂಬಿಸುವಂತಹ ಕಾರ್ಯಕ್ರಮಗಳನ್ನೂ ಆಯೋಜಿಸಲಾಗುತ್ತದೆ. ಅಲ್ಲದೆ, ಸಾಣೆಹಳ್ಳಿ ಮಠದ ಕಲಾ ತಂಡದಿಂದ ಕಲ್ಯಾಣ ಕ್ರಾಂತಿ ನಾಟಕ ಪ್ರದರ್ಶನ ಏರ್ಪಡಿಸಲಾಗುವುದು ಎಂದು ಮಾಹಿತಿ ನೀಡಿದರು.
ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪುರವರು ಮಾತನಾಡಿ, 12ನೇ ಶತಮಾನದಲ್ಲಿ ಕ್ರಾಂತಿಕಾರಕ ಬದಲಾವಣೆ ತಂದ ಬಸವಣ್ಣನವರ ಚಿಂತನೆ, ಸಂದೇಶ ವನ್ನು ಇಡೀ ರಾಜ್ಯದ್ಯಂತ ಪ್ರಸರಿಸುವ ಕೆಲಸವನ್ನು ವಿನೂತನವಾದ ಕಾರ್ಯಕ್ರಮದ ಮೂಲಕ ಮಾಡಲಾಗುತ್ತಿದೆ ಎಂದರು.ಬಸವಣ್ಣವರ ಐಕ್ಯ ಸ್ಥಳವಾದ ಕೂಡಲಸಂಗಮದಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುತ್ತಿದ್ದು, ಎಲ್ಲಾ ಧರ್ಮ- ಜನಾಂಗದ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಸಚಿವರು ಮನವಿ ಮಾಡಿದರು.
ಸಭೆಯಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ, ಸಾಹಿತಿ ಡಾ. ರಂಜಾನ್ ದರ್ಗಾ, ನಿಷ್ಕಲ ಮಂಟಪದನಿಜಗುಣಾನಂದ ಸ್ವಾಮೀಜಿ, ಜ್ಞಾನಪ್ರಕಾಶ ಸ್ವಾಮೀಜಿ, ಡಾ.ಪ್ರಶಾಂತ ಮಾತಅರ್, ಜಿಲ್ಲಾಧಿಕಾರಿ ಜಾನಕಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕಿ ಗಾಯಿತ್ರಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.ಬಸವಣ್ಣ ಅವರು 12ನೇ ಶತಮಾನದಲ್ಲಿ ಸಮಾಜದ ಅನಾಚಾರಗಳಿಗೆ ವಿರುದ್ಧವಾಗಿ ವಚನ ಸಾಹಿತ್ಯದ ಮೂಲಕ ಉತ್ತರ ನೀಡಿದರು. ಬಸವಣ್ಣ ಅವರ ಜೀವನ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ವಿಶೇಷವಾದ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದೆ. ಸರ್ವ ಜನಾಂಗದ ಜನರು ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು.
-ಶಿವರಾಜ್ ಎಸ್. ತಂಗಡಗಿ ಕನ್ನಡ ಮತ್ತು ಸಂಸ್ಕೃತಿ ಸಚಿವರು