ಬಸವಣ್ಣ ಸ್ಥಾಪಿಸಿದ ಅನುಭವ ಮಂಟಪ ವಿಶ್ವ ಮೊದಲ ಸಂಸತ್‌: ಡಾ.ಜಿ.ವಿ.ಮಂಜುನಾಥ್

| Published : May 27 2024, 01:12 AM IST

ಬಸವಣ್ಣ ಸ್ಥಾಪಿಸಿದ ಅನುಭವ ಮಂಟಪ ವಿಶ್ವ ಮೊದಲ ಸಂಸತ್‌: ಡಾ.ಜಿ.ವಿ.ಮಂಜುನಾಥ್
Share this Article
  • FB
  • TW
  • Linkdin
  • Email

ಸಾರಾಂಶ

ನರಸಿಂಹರಾಜಪುರ, ವಿಶ್ವಗುರು ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪ ವಿಶ್ವದ ಮೊದಲ ಸಂಸತ್ತಾಗಿದೆ ಎಂದು ಕಡೂರಿನ ಉಪನ್ಯಾಸಕ ಡಾ.ಜಿ.ವಿ.ಮಂಜುನಾಥ್ ಹೇಳಿದರು.

ಮೆಣಸೂರು ಗ್ರಾಮದ ಬಸವ ಕೇಂದ್ರದಲ್ಲಿ ಬಸವಣ್ಣನವರ 891 ನೇ ಹಾಗೂ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ವಿಶ್ವಗುರು ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪ ವಿಶ್ವದ ಮೊದಲ ಸಂಸತ್ತಾಗಿದೆ ಎಂದು ಕಡೂರಿನ ಉಪನ್ಯಾಸಕ ಡಾ.ಜಿ.ವಿ.ಮಂಜುನಾಥ್ ಹೇಳಿದರು,

ಭಾನುವಾರ ಮೆಣಸೂರು ಗ್ರಾಮದ ಬಸವ ಕೇಂದ್ರದಲ್ಲಿ ನಡೆದ ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ 891ನೇ ಜಯಂತಿ ಹಾಗೂ ಶಿವಶರಣೆ ಶ್ರೀ ಹೇಮರೆಡ್ಡಿ ಮಲ್ಲಮ್ಮನವರ ಜಯಂತಿಯಲ್ಲಿ ಸಾಂಸ್ಕೃತಿಕ ನಾಯಕ ಬಸವಣ್ಣ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.ದಲಿತರು, ಶೋಷಣೆಗೊಳಗಾದವರನ್ನ ಸಮಾಜದ ಮುಖ್ಯವಾಹಿನಿಗೆ ತರಲು ಬಸವಣ್ಣನವರು ಪ್ರಯತ್ನಿಸಿದರು. ಅನುಭವ ಮಂಟಪಕ್ಕೆ ಶೋಷಿತ ಸಮಾಜದ ಅಲ್ಲಮಪ್ರಭು ಅವರನ್ನು ಅಧ್ಯಕ್ಷರನ್ನಾಗಿ ಮಾಡಿದರು. ಹಿಂದೂ ಧರ್ಮದಲ್ಲಿ ದೇವರ ಹೆಸರಿನಲ್ಲಿ ಪ್ರಾಣಿ ಬಲಿ ಕೊಟ್ಟು ಸಂಭ್ರಮಿಸುತ್ತಿದ್ದ ಆಚರಣೆಯನ್ನು ಹೋಗಲಾಡಿಸಲು ಪ್ರಯತ್ನಿಸಿ ದಯೆಯೇ ಧರ್ಮದ ಮೂಲವಯ್ಯ ಎಂದು ಸಾರಿದ್ದರು.

ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ವಿಶ್ವಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ ಶ್ರೇಯಸ್ಸು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ. 12 ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿ ಮೂಲಕ ಸಾಮಾಜಿಕ ಪರಿವರ್ತನೆ ತಂದು ಶೋಷಿತರು, ಧ್ವನಿ ಇಲ್ಲದವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಬಸವಣ್ಣನವರ ಕಾರ್ಯ ಪ್ರಮುಖವಾಗಿದೆ. ಎಲ್ಲಾ ಕಸುಬುಗಳು ಸಮಾನವಾಗಿದೆ. ಯಾವುದೇ ಕಸುಬು ಮೇಲಲ್ಲ, ಕೀಳಲ್ಲ. ಎಲ್ಲರೂ ಕೆಲಸ ಮಾಡಿ ಬದುಕ ಬೇಕು ಎಂದು ಸಲಹೆ ನೀಡಿದರು.

ಮಹಿಳೆಯರಿಗೆ ಸಮಾನ ಅವಕಾಶ ನೀಡಿ ಮಹಿಳಾ ಶಿಕ್ಷಣಕ್ಕೆ ಆದ್ಯತೆ ನೀಡಿದರು. ಎಲ್ಲರೂ ಸಮಾನರು ಎಂದು ಸಾರಿದ ಮಹಾನ್ ಮಾನವತಾವಾದಿ ವಿಶ್ವಗುರು ಬಸವಣ್ಣರಾಗಿದ್ದಾರೆ. ಸುಮಾರು 1,500 ಕ್ಕೂ ಹೆಚ್ಚು ವಚನಗಳನ್ನು ರಚಿಸಿ ವಚನ ಸಾಹಿತ್ಯಕ್ಕೆ ಕೊಡುಗೆ ನೀಡಿದ್ದಾರೆ ಎಂದರು.ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಶಾಂತ್ ಎಲ್. ಶೆಟ್ಟಿ ಮಾತನಾಡಿ, ಬಸ್ತಿಮಠದಲ್ಲಿರುವ ಬಸ್ ನಿಲ್ದಾಣಕ್ಕೆ ಪಟ್ಟಣ ಪಂಚಾಯಿತಿಯಿಂದ ವಿಶ್ವಗುರು ಬಸವಣ್ಣನವರ ಹೆಸರು ಇಡಲಾಗಿದೆ ಎಂದರು.

ದಿವ್ಯ ಸಾನಿಧ್ಯವಹಿಸಿದ್ದ ಮೆಣಸೂರು ಬಸವ ಕೇಂದ್ರದ ಬಸವಯೋಗಿ ಪ್ರಭು ಸ್ವಾಮೀಜಿ ಮಾತನಾಡಿ, ಹರ್ಡೇಕರ್ ಮಂಜಪ್ಪ ಅವರು ಮೊದಲ ಬಾರಿಗೆ ಬಸವ ಜಯಂತಿ ಆಚರಿಸಿದರು. ಇವರು ಮಹಾತ್ಮ ಗಾಂಧೀಜಿಯವರಿಗೆ ಬಸವಣ್ಣ ನವರ ಬಗ್ಗೆ ತಿಳಿಸಿಕೊಟ್ಟರು. ಬಸವಣ್ಣನವರ ಚಿಂತನೆಗಳನ್ನು ಅಳವಡಿಸಿಕೊಂಡರೆ ವಿಶ್ವವನ್ನೇ ಬದಲಾವಣೆ ಮಾಡಲು ಸಾಧ್ಯ ಎಂದು ಗಾಂಧೀಜಿ ಹೇಳಿದ್ದರು.

ಮೆಣಸೂರು ಬಸವಕೇಂದ್ರದ ಅಧ್ಯಕ್ಷ ಶಾಂತರಾಜ್ ಮಾತನಾಡಿ, ಮುಂದಿನ ದಿನಗಳಲ್ಲಿ ಬಸವ ಕೇಂದ್ರದ ಸಮುದಾಯ ಭವನ ಪೂರ್ಣಗೊಳಿಸಲು ಶಾಸಕರು 1 ಕೋಟಿ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಆರ್.ಸದಾಶಿವ, ಪಟ್ಟಣ ಪಂಚಾಯಿತಿ ಸದಸ್ಯ ಜುಬೇದಾ ಮಾತನಾಡಿದರು.

ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ಬಿ.ವಿ.ಉಪೇಂದ್ರ, ಅಂಜುಮ್, ಮುರುಘಾ ಮಠದ ಸಂಚಾಲಕ ಪುಟ್ಟಸ್ವಾಮಿ, ಮುಖಂಡರಾದ ಮೋಹನ್ ಲಿಂಗಾಯತ, ಎಚ್.ಎನ್.ರವಿಶಂಕರ್, ವೈ.ಎಸ್.ರವಿ,ಹೇಮರೆಡ್ಡಿ ಮಲ್ಲಮ್ಮ ಸಂಘದ ಅಧ್ಯಕ್ಷೆ ಜಯಲಕ್ಷ್ಮೀ ಮತ್ತಿತರರು ಭಾಗವಹಿಸಿದ್ದರು.