ಸುವರ್ಣಸೌಧದಲ್ಲಿ ಅನುಭವ ಮಂಟಪ ತೈಲಚಿತ್ರ

| Published : Dec 10 2024, 01:31 AM IST

ಸುವರ್ಣಸೌಧದಲ್ಲಿ ಅನುಭವ ಮಂಟಪ ತೈಲಚಿತ್ರ
Share this Article
  • FB
  • TW
  • Linkdin
  • Email

ಸಾರಾಂಶ

ಸುವರ್ಣ ವಿಧಾನಸೌಧದ ಪಶ್ಚಿಮ ಭಾಗದ ಮೊದಲ ಮಹಡಿಯಲ್ಲಿ ಅಳವಡಿಸಲಾಗಿರುವ ಜಗತ್ತಿನ ಮೊದಲ ಸಂಸತ್ತಾದ, ಬಸವಣ್ಣ ಅವರು ಸ್ಥಾಪಿಸಿದ ಅನುಭವ ಮಂಟಪದ ತೈಲವರ್ಣ ಚಿತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಸುವರ್ಣ ವಿಧಾನಸೌಧ

ಸುವರ್ಣ ವಿಧಾನಸೌಧದ ಪಶ್ಚಿಮ ಭಾಗದ ಮೊದಲ ಮಹಡಿಯಲ್ಲಿ ಅಳವಡಿಸಲಾಗಿರುವ ಜಗತ್ತಿನ ಮೊದಲ ಸಂಸತ್ತಾದ, ಬಸವಣ್ಣ ಅವರು ಸ್ಥಾಪಿಸಿದ ಅನುಭವ ಮಂಟಪದ ತೈಲವರ್ಣ ಚಿತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಉದ್ಘಾಟಿಸಿದರು.

ಅನುಭವ ಮಂಟಪದ ಮೊದಲ ಸಭಾಧ್ಯಕ್ಷ ಅಲ್ಲಮಪ್ರಭು ವಿರಾಜಮಾನರಾಗಿರುವ, ಬಸವಣ್ಣ ಹಾಗೂ ಅಕ್ಕಮಹಾದೇವಿ ಸೇರಿದಂತೆ ಹಲವು ಶಿವಶರಣರು ತಮ್ಮ ವಿಚಾರಗಳು, ಚಿಂತನೆಗಳನ್ನು ಮಂಡಿಸಿರುವ ತೈಲವರ್ಣ ಚಿತ್ರವನ್ನು ಬಿಡಿಸಲಾಗಿದೆ. 10 ಅಡಿ ಅಗಲ ಮತ್ತು 20 ಅಡಿ ಉದ್ದದ ಕ್ಯಾನ್ವಾಸ್‌ ಮೇಲೆ ತೈಲವರ್ಣ ಚಿತ್ರವನ್ನು ಬಿಡಿಸಲಾಗಿದೆ. ಚಿತ್ರಕಲಾ ಪರಿಷತ್‌ನ ಮುಂದಾಳತ್ವದಲ್ಲಿ ಕಲಾವಿದರಾದ ಸತೀಶ್‌ ರಾವ್‌, ಶ್ರೀಕಾಂತ್‌ ಹೆಗಡೆ, ಯು. ಅಶೋಕ್‌, ಎಂ.ಆರ್‌. ರೂಪಾ, ವೀರಣ್ಣ ಮಡಿವಾಳಪ್ಪ, ಮಹೇಶ್‌ ನಿಂಗಪ್ಪ ಅವರು ತೈಲವರ್ಣ ಚಿತ್ರವನ್ನು ಸಿದ್ಧಪಡಿಸಿದ್ದಾರೆ.ತೈಲವರ್ಣ ಚಿತ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ವಿಧಾನಸಭೆ ಅಧ್ಯಕ್ಷ ಯು.ಟಿ. ಖಾದರ್‌, ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌, ಸಚಿವರಾದ ಎಚ್‌.ಕೆ. ಪಾಟೀಲ್‌, ಡಾ. ಜಿ.ಪರಮೇಶ್ವರ್‌, ಡಾ. ಎಚ್‌.ಸಿ.ಮಹದೇವಪ್ಪ, ಸತೀಶ್‌ ಜಾರಕಿಹೊಳಿ ಸೇರಿದಂತೆ ಮತ್ತಿತರರಿದ್ದರು.ಗಾಂಧಿ ಅಧಿವೇಶನ ಶತಮಾನೋತ್ಸವದ ಲೋಗೋ ಬಿಡುಗಡೆ

ಮಹಾತ್ಮ ಗಾಂಧಿ ಅವರು ಕಾಂಗ್ರೆಸ್‌ನ ಅಧ್ಯಕ್ಷತೆ ವಹಿಸಿ ಬೆಳಗಾವಿಯಲ್ಲಿ ಸಮಾವೇಶ ನಡೆಸಿದ್ದಕ್ಕೆ 100 ವರ್ಷ ತುಂಬಿದ ಹಿನ್ನೆಲೆಯಲ್ಲಿ ಸುವರ್ಣ ವಿಧಾನಸೌಧದಲ್ಲಿ ಗಾಂಧಿ ಅಧಿವೇಶನ ಶತಮಾನೋತ್ಸವ ಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿದೆ. ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಾಂಧಿ ಅಧಿವೇಶನ ಶತಮಾನೋತ್ಸವ ಲೋಗೋ ಬಿಡುಗಡೆ ಮಾಡಿದರು.

ಸಿಎಂ ಸಿದ್ದು ಒಂದು ಕಡೆ, ಸ್ಪೀಕರ್‌ ಮತ್ತೊಂದು ಕಡೆ

ಅನುಭವ ಮಂಟಪದ ತೈಲವರ್ಣ ಚಿತ್ರ ಮತ್ತು ಗಾಂಧಿ ಅಧಿವೇಶನ ಶತಮಾನೋತ್ಸವ ಲೋಗೋ ಬಿಡುಗಡೆ ಕಾರ್ಯಕ್ರಮವನ್ನು ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿತ್ತು. ಆದರೆ, ಅನುಭವ ಮಂಟಪದ ತೈಲವರ್ಣ ಚಿತ್ರ ಲೋಕಾರ್ಪಣೆಯನ್ನು ಮೊದಲನೇ ಮಹಡಿ ಹಾಗೂ ಗಾಂಧಿ ಅಧಿವೇಶನ ಶತಮಾನೋತ್ಸವ ಲೋಗೋ ಬಿಡುಗಡೆಯನ್ನು ನೆಲಮಹಡಿಯಲ್ಲಿ ಆಯೋಜಿಸಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೊದಲಿಗೆ ಗಾಂಧಿ ಅಧಿವೇಶನ ಶತಮಾನೋತ್ಸವ ಲೋಗೋ ಬಿಡುಗಡೆಯ ಸ್ಥಳಕ್ಕಾಗಮಿಸಿದರು. ಅದೇ ಸ್ಪೀಕರ್‌ ಯು.ಟಿ. ಖಾದರ್‌ ಅವರು ಅನುಭವ ಮಂಟಪದ ತೈಲವರ್ಣ ಚಿತ್ರ ಬಿಡುಗಡೆ ಸ್ಥಳದಲ್ಲಿದ್ದರು. ಹೀಗಾಗಿ ಸಿದ್ದರಾಮಯ್ಯ ಅವರು ಸುಮಾರು 5 ನಿಮಿಷಕ್ಕೂ ಹೆಚ್ಚಿನ ಕಾಲ ಸ್ಪೀಕರ್‌ ಬರುವುದಕ್ಕಾಗಿ ಕಾದು ನಿಲ್ಲುವಂತಾಯಿತು. ಕೊನೆಗೆ ಯು.ಟಿ. ಖಾದರ್‌ ಅವರಿಗೆ ಸಿಎಂ ನೆಲಮಹಡಿಯಲ್ಲಿ ಕಾಯುತ್ತಿದ್ದಾರೆ ಎಂದು ತಿಳಿದಾಗ, ಮೊದಲ ಮಹಡಿಯಿಂದ ಮುಖ್ಯಮಂತ್ರಿಯವರ ಬಳಿ ಓಡೋಡಿ ಬಂದರು.

ಬಸವಣ್ಣನವರಿಗಿಂತ ಸ್ಪೀಕರ್‌ ಹೊಗಳಿಕೆ ಹೆಚ್ಚಾಯ್ತು!

ಸುವರ್ಣ ವಿಧಾನಸೌಧದಲ್ಲಿ ಅನುಭವ ಮಂಟಪದ ತೈಲ ವರ್ಣ ಚಿತ್ರ ಅಳವಡಿಕೆಗೆ ಸಂಬಂಧಿಸಿದಂತೆ ಕಲಾಪದಲ್ಲಿ ಮುಖ್ಯಮಂತ್ರಿಯಾದಿಯಾಗಿ ಪಕ್ಷಾತೀತವಾಗಿ ಎಲ್ಲ ಶಾಸಕರೂ ಸ್ಪೀಕರ್‌ ಯು.ಟಿ. ಖಾದರ್‌ ಅವರನ್ನು ಹೊಗಳಿದರು. ಈ ವೇಳೆ ಮಾತನಾಡಿದ ಕಾಂಗ್ರೆಸ್‌ನ ಲಕ್ಷ್ಮಣ ಸವದಿ, ಅನುಭವ ಮಂಟಪದ ತೈಲವರ್ಣ ಚಿತ್ರ ಅಳವಡಿಸಿ ಸ್ಪೀಕರ್‌ ಉತ್ತಮ ಕೆಲಸ ಮಾಡಿದ್ದಾರೆ. ಎಷ್ಟೋ ಮಂದಿ ಸ್ಪೀಕರ್‌ ಬಂದು-ಹೋಗಿದ್ದಾರೆ. ಆದರೆ, ನೀವು ಬಂದು ಸ್ಮರಿಸುವಂತಹ ಕೆಲಸ ಮಾಡಿದ್ದೀರಿ. ಆದರೂ, ಬಸವಣ್ಣ ಅವರಿಗಿಂತ ನಿಮಗೇ (ಸ್ಪೀಕರ್‌) ಹೊಗಳಿಕೆ ಹೆಚ್ಚಾಯ್ತು ಎಂದು ಕಿಚಾಯಿಸಿದರು.