ಬಿಡದಿ, ಹಾರೋಹಳ್ಳಿಯ ನಾಗರಿಕರಲ್ಲಿ ಆತಂಕ

| Published : Apr 17 2025, 12:01 AM IST

ಸಾರಾಂಶ

ಹುಬ್ಬಳ್ಳಿಯಲ್ಲಿ ಬಿಹಾರ ಮೂಲದ ವ್ಯಕ್ತಿಯ ಪೈಶಾಚಿಕ ಕೃತ್ಯಕ್ಕೆ 5 ವರ್ಷದ ಬಾಲಕಿ ಬಲಿಯಾದ ಘಟನೆ ಸಂಭವಿಸುತ್ತಿದ್ದಂತೆ ಜಿಲ್ಲೆಯ ಬಿಡದಿ ಹಾಗೂ ಹಾರೋಹಳ್ಳಿ ಭಾಗದ ನಾಗರಿಕರಲ್ಲೂ ಆತಂಕ ಸೃಷ್ಟಿಸಿದೆ.

-ಎಂ.ಅಫ್ರೋಜ್ ಖಾನ್

ಕನ್ನಡಪ್ರಭ ವಾರ್ತೆ ರಾಮನಗರ

ಹುಬ್ಬಳ್ಳಿಯಲ್ಲಿ ಬಿಹಾರ ಮೂಲದ ವ್ಯಕ್ತಿಯ ಪೈಶಾಚಿಕ ಕೃತ್ಯಕ್ಕೆ 5 ವರ್ಷದ ಬಾಲಕಿ ಬಲಿಯಾದ ಘಟನೆ ಸಂಭವಿಸುತ್ತಿದ್ದಂತೆ ಜಿಲ್ಲೆಯ ಬಿಡದಿ ಹಾಗೂ ಹಾರೋಹಳ್ಳಿ ಭಾಗದ ನಾಗರಿಕರಲ್ಲೂ ಆತಂಕ ಸೃಷ್ಟಿಸಿದೆ.

ಹೌದು, ಇದಕ್ಕೆ ಕಾರಣ ಬಿಡದಿ ಹಾಗೂ ಹಾರೋಹಳ್ಳಿ ಕೈಗಾರಿಕಾ ಪ್ರದೇಶಗಳು. ಈ ಪ್ರದೇಶಗಳಲ್ಲಿ ಸ್ಥಳೀಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕೈಗಾರಿಕೆಗಳಿವೆ. ಇಲ್ಲಿ ಸ್ಥಳೀಯರಿಗಿಂತ ಹೊರ ರಾಜ್ಯಗಳ ಕಾರ್ಮಿಕರ ಸಂಖ್ಯೆಯೇ ಹೆಚ್ಚಾಗಿದೆ. ಆ ಕಾರ್ಮಿಕರೆಲ್ಲರು ಮನೆಗಳನ್ನು ಬಾಡಿಗೆ ಪಡೆದಿರುವುದು ಸ್ಥಳೀಯ ನಾಗರಿಕರು ಮಾತ್ರವಲ್ಲದೆ ಮನೆ ಮಾಲೀಕರನ್ನೂ ಚಿಂತೆಗೀಡು ಮಾಡಿದೆ.

ಹುಬ್ಬಳ್ಳಿಯಲ್ಲಿ ಮನೆ ಮುಂದೆ ಆಟವಾಡುತ್ತಿದ್ದ 5 ವರ್ಷದ ಬಾಲಕಿಯನ್ನು ಬಿಹಾರದ ರಿತೇಶ್ ಎಂಬಾತ ಕರೆದೊಯ್ದು ಕೊಲೆ ಮಾಡಿದ್ದನು. ತರುವಾಯ ಆತ ಪೊಲೀಸರ ಎನ್ ಕೌಂಟರ್‌ಗೆ ಬಲಿಯಾಗಿದ್ದನು. ಅಷ್ಟಕ್ಕೂ ಈ ಆರೋಪಿ ಬಿಹಾರದಿಂದ ಹುಬ್ಬಳ್ಳಿಗೆ ಬಂದು ಕೂಲಿ ಕೆಲಸ ಮಾಡುತ್ತಿದ್ದನು ಎನ್ನಲಾಗಿದೆ.

ಹುಬ್ಬಳ್ಳಿಯಲ್ಲಿ ನಡೆದಿರುವ ಈ ಘಟನೆ ಬಿಡದಿ ಹಾಗೂ ಹಾರೋಹಳ್ಳಿ ಭಾಗದ ನಾಗರಿಕರು ಮತ್ತು ಪೋಷಕರು ಭಯ ಪಡುವಂತಾಗಿದೆ. ಇಲ್ಲಿನ ಕೈಗಾರಿಕಾ ಪ್ರದೇಶಗಳು ಮಾತ್ರವಲ್ಲದೆ ಸುತ್ತಮುತ್ತಲಿನ ಭಾಗಗಳಿಗೆ ಪ್ರತಿನಿತ್ಯ ಸಹಸ್ರಾರು ಜನರು ತಿರುಗಾಡುತ್ತಲೇ ಇರುತ್ತಾರೆ. ಕಾರ್ಖಾನೆಗಳಲ್ಲಿ ಕಾಯಂಗಿಂತ ಹೊರಗುತ್ತಿಗೆ ಕಾರ್ಮಿಕರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಅವರೆಲ್ಲರು ಸ್ಥಳೀಯವಾಗಿಯೇ ಮನೆ ಬಾಡಿಗೆ ಪಡೆದು ನೆಲೆಸಿದ್ದಾರೆ.

ಹೊರ ಕಾರ್ಮಿಕರ ಆಶ್ರಯ ತಾಣ:

ಬಿಡದಿ ಹೋಬಳಿ ವ್ಯಾಪ್ತಿಯಲ್ಲಿ 100ಕ್ಕೂ ಹೆಚ್ಚು ಕಾರ್ಖಾನೆಗಳು ಹಾಗೂ ಇತರೆ ಸಣ್ಣ ಕೈಗಾರಿಕೆಯಲ್ಲಿ 10,000ಕ್ಕೂ ಹೆಚ್ಚು ಗುತ್ತಿಗೆ ಆಧಾರದ ಮೇಲೆ ಬಿಹಾರ್, ಅಸ್ಸಾಂ, ಉತ್ತರಪ್ರದೇಶ, ಮಣಿಪುರ ಮುಂತಾದ ರಾಜ್ಯಗಳಿಂದ ಕಾರ್ಮಿಕರು ಬಂದು ಕೆಲಸ ನಿರ್ವಹಿಸಿತ್ತಿದ್ದಾರೆ. ಇವರುಗಳಿಗೆ ಬಿಡದಿ ಪಟ್ಟಣ. ಮೇಡನಹಳ್ಳಿ, ಅಬ್ಬನಕುಪ್ಪೆ, ಗೊಲ್ಲರಪಾಳ್ಯ ಶ್ಯಾನುಮಂಗಲ, ಬಿಲ್ಲಿಕೆಂಪನಹಳ್ಳಿ, ರಂಗೇಗೌಡನದೊಡ್ಡಿ, ಛತ್ರ -ಭಾರದೊಡ್ಡಿ. ಬಾನಂದೂರು, ಗೊಲ್ಲಹಳ್ಳಿ, ಲಕ್ಷ್ಮೀಸಾಗರ, ಹನುಮಂತನಗರ, ಮಂಚನಾಯಕನಹಳ್ಳಿ, ಶೇಷಗಿರಿಹಳ್ಳಿ, ಎಸ್.ವಿ.ಟಿ ಕಾಲೋನಿ, ಹಜ್ಞಾಲ, ಜಡೇನಹಳ್ಳಿ, ವಾಜರಹಳ್ಳಿ, ಬಿಡದಿ ಪುರಸಭೆ ವ್ಯಾಪ್ತಿಯ ಗ್ರಾಮಗಳಲ್ಲಿ ಬಾಡಿಗೆ ಪಡೆದು ಪ್ರತಿ ಮನೆಗಳಲ್ಲಿ 10ರಿಂದ 30 ಜನ ಪಾಳಿ ವ್ಯಾಪ್ತಿಯಲ್ಲಿ ವಸತಿ ಪಡೆದು ಕೆಲಸಕ್ಕೆ ಹೋಗಿ ಬರುತ್ತಿದ್ದಾರೆ.

ಕೆಲವು ಕಾರ್ಖಾನೆಗಳು ಒಟ್ಟಿಗೆ ಜನರನ್ನು ತಂದು ಬಾಡಿಗೆ ಮನೆಗಳಲ್ಲಿ ನೆಲೆಸಿರುತ್ತಾರೆ. ಹೆಚ್ಚಿನವರು ಯುವಕರಾಗಿದ್ದು, ಬಿಡದಿ ಸುತ್ತಮುತ್ತ 24 ಗಂಟೆಗಳು ಸುತ್ತುತ್ತಿರುತ್ತಾರೆ. 3 ಪಾಳಿಗಳಲ್ಲಿ ಕೆಲಸ ನಿರ್ವಹಿಸುತ್ತಿರುವುದರಿಂದ, ಒಂದು ತಂಡ ಮನೆಯಲ್ಲಿ, ಇನ್ನೊಂದು ತಂಡ ಕೆಲಸದಲ್ಲಿ ಮತ್ತೊಂದು ತಂಡ ನಗರ ಪ್ರದಕ್ಷಣೆಯಲ್ಲಿ ಇರುತ್ತದೆ. ಬಿಡದಿ ಸುತ್ತ-ಮುತ್ತಲಿನ ಗ್ರಾಮಗಳಲ್ಲಿ ಎಲ್ಲಾ ವೇಳೆಯಲ್ಲೂ (24 ಗಂಟೆ) ಬೀದಿಯಲ್ಲಿ ಜನ ಸಂಚಾರವಿರುತ್ತದೆ. ಇವರು ಯಾರು, ಎಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ಸಣ್ಣ ಮಾಹಿತಿಯೂ ಇಲ್ಲ. ಪ್ರತೀ ವ್ಯಕ್ತಿಗೆ ತಲೆಗೆ ಇಷ್ಟರಂತೆ (1000 ರು. ಮನೆಗೆ ಬಾಡಿಗೆ) ಒಂದೇ ಮನೆಯಲ್ಲಿ ಕನಿಷ್ಠ 10 ರಿಂದ 30 ಕಾರ್ಮಿಕರು ನೆಲೆಸಿ, ಕೆಲಸಕ್ಕೆ ಹೋಗಿ ಬರುತ್ತಿದ್ದಾರೆ. ಇನ್ನು ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ 450ಕ್ಕೂ ಹೆಚ್ಚು ಕಾರ್ಖಾನೆಗಳಿದ್ದು, ಸುಮಾರು 15ಸಾವಿರಕ್ಕೂ ಹೆಚ್ಚಿನ ಕಾರ್ಮಿಕರು ಇದ್ದಾರೆ.

ಈ ಹೊರ ರಾಜ್ಯಗಳ ಕಾರ್ಮಿಕರೆಲ್ಲರು ಹಾರೋಹಳ್ಳಿ, ಜಕ್ಕಸಂದ್ರ, ಬನ್ನಿಕುಪ್ಪೆ, ಯರೇಹಳ್ಳಿ, ಕಡಸಿಕೊಪ್ಪ, ಸಿಂಧ್ಯಾ ನಗರ, ಗಾಣಾಳುದೊಡ್ಡಿ, ಹುಲಿಸಿದ್ದೇಗೌಡನದೊಡ್ಡಿ, ರಾಂಸಾಗರ, ಕಂಚುಗಾರನಹಳ್ಳಿಗಳಲ್ಲಿ ಬಾಡಿಗೆ ಮನೆಗಳಲ್ಲಿ ನೆಲೆಸಿದ್ದಾರೆ. ಬಹುತೇಕ ಮನೆಗಳ ಮಾಲೀಕರಿಗೆ ಕಾರ್ಮಿಕರ ಪರಿಚಯವೂ ಇಲ್ಲವಾಗಿದೆ.

ಬಿಡದಿ ಮತ್ತು ಹಾರೋಹಳ್ಳಿ ಭಾಗದ ಜನರು ಹೊರ ರಾಜ್ಯಗಳ ಕಾರ್ಮಿಕರ ಜೊತೆಯಲ್ಲಿ ಒಂದೇ ಗ್ರಾಮದಲ್ಲಿ ಒಟ್ಟಿಗೆ ನೆಲೆಸಿರುವುದರಿಂದ ಕಳೆದ 3 ದಿನಗಳ ಹಿಂದೆ ಹುಬ್ಬಳ್ಳಿಯಲ್ಲಿ ನಡೆದ ಘೋರ ಕೃತ್ಯ ಇಲ್ಲಿನ ನಾಗರೀಕರಲ್ಲಿ - ಪೋಷಕರಲ್ಲಿ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ಆತಂಕ- ಭಯ ಶುರುವಾಗಿದೆ. ಬೇಸಿಗೆ ರಜೆ ಇರುವುದರಿಂದ ಮಕ್ಕಳು ಶಾಲೆಗೆ ಹೋಗದೇ ಮನೆಯಲ್ಲಿ ಇರುವುದರಿಂದ ಮಕ್ಕಳನ್ನು ಹೇಗೇ ನೋಡಿಕೊಳ್ಳಬೇಕು ಎಂಬುವುದರ ಬಗ್ಗೆ ಚಿಂತೆ ಕಾಡುತ್ತಿದೆ.

--------

ಬಿಡದಿ ಹಾಗೂ ಹಾರೋಹಳ್ಳಿ ಕೈಗಾರಿಕಾ ಪ್ರದೇಶಗಳಲ್ಲಿನ ಕಾರ್ಖಾನೆಯ ಮಾಲೀಕರು ಹೊರಗುತ್ತಿಗೆ ನೌಕರರು ಹಾಗೂ ಬಾಡಿಗೆ ನೀಡಿರುವ ಮಾಲೀಕರನ್ನು ಕರೆದು ಸೂಕ್ತ ಕಾನೂನಿನ ತಿಳಿವಳಿಕೆ ಹಾಗೂ ಕಾನೂನು ಕ್ರಮದ ಬಗ್ಗೆ ಎಚ್ಚರಿಕೆ ನೀಡಬೇಕಾಗಿದೆ. ಪ್ರತಿಯೊಬ್ಬ ಕಾರ್ಮಿಕನ ಐಡಿ ಕಾರ್ಡ್ ಮತ್ತು ಆತನ ಮನೆ ವಿಳಾಸದ ವಿವರ ಪಡೆದುಕೊಳ್ಳಬೇಕು. ಪೊಲೀಸ್ ಇಲಾಖೆ ಬೀಟ್ ವ್ಯವಸ್ಥೆಯನ್ನು ಹೆಚ್ಚಿಸಿ ವಾರಕ್ಕೆ ಎರಡು ದಿನ ಬಾಡಿಗೆ ಮನೆಗಳ ಹತ್ತಿರ ಹೋಗಿ ಬರುವಂತೆ ಕ್ರಮ ವಹಿಸಬೇಕಿದೆ. ಆ ಮೂಲಕ ಬಿಡದಿ - ಹಾರೋಹಳ್ಳಿ ವ್ಯಾಪ್ತಿಯ ಪೋಷಕರ ಆತಂಕ ದೂರ ಮಾಡಬೇಕಾಗಿದೆ.

- ಜಿ.ಎನ್.ನಟರಾಜು, ಅಧ್ಯಕ್ಷರು,

ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ