ಸಾರಾಂಶ
ಕನ್ನಡಪ್ರಭ ವಾರ್ತೆ ಕಾರವಾರ:
ಇಲಾಖಾವಾರು ಕಾಮಗಾರಿ ಬದಲಾವಣೆಯಾಗಬೇಕಾದಲ್ಲಿ, ಕಾಮಗಾರಿಗಳನ್ನು ನಡೆಸುವ ಮೊದಲೇ ಭೂ ವಿವಾದ ಇತ್ಯಾದಿ ಸಮಸ್ಯೆಯಿಂದ ಬದಲಾವಣೆಯಿದ್ದರೆ ಕೂಡಲೇ ತಿಳಿಸಬೇಕು ಎಂದು ಇಲ್ಲಿನ ತಾಪಂ ಆಡಳಿತಾಧಿಕಾರಿ ಸೋಮಶೇಖರ ಮೇಸ್ತ ಅಧಿಕಾರಿಗಳಿಗೆ ಹೇಳಿದರು.ನಗರದ ತಾಪಂ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ವರ್ಷಾಂತ್ಯ ಸಮೀಪಿಸುತ್ತಿರುವುದರಿಂದ ಹೆಚ್ಚು ಸಮಯವಿಲ್ಲ. ಜತೆಗೆ ತುರ್ತು ಅಗತ್ಯವಿರುವ, ಬಹಳ ಮುಖ್ಯವಾಗಿರುವ ಕೆಲಸಗಳನ್ನು ಶೀಘ್ರದಲ್ಲಿ ತೆಗೆದುಕೊಂಡು ಪೂರ್ಣಗೊಳಿಸಬೇಕು ಎಂದರು.
ತಾಲೂಕಿನ ಅಸ್ನೋಟಿಯಲ್ಲಿ ಘನತ್ಯಾಜ ವಿಲೇವಾರಿ ಘಟಕ, ಕಿನ್ನರ-ಅಂಬೇಜುಗ ಸರ್ಕಾರಿ ಶಾಲೆಗೆ ಟೈಲ್ಸ್, ಇಂಟರ್‌ಲಾಕ್ ಅಳವಡಿಕೆ, ಅಂಬೇಡ್ಕರ್ ಸಮುದಾಯ ಭವನ ಪುರ್ಣಗೊಳಿಸುವುದು, ಕೆರವಡಿ ರಸ್ತೆ ನಿರ್ಮಾಣ, ಶಿರವಾಡ ಕೆಪಿಎಸ್ ಪ್ರೌಢಶಾಲೆ ಆವಾರಗೋಡೆ ನಿರ್ಮಾಣ, ದೇವತಿವಾಡ ಅಂಗನವಾಡಿಗೆ ಶೀಟ್ ಅಳವಡಿಸುವುದು ಒಳಗೊಂಡು ವಿವಿಧ ಕಾಮಗಾರಿಗಳಿಗೆ ಆಡಳಿತಾತ್ಮಕ ಒಪ್ಪಿಗೆ ನೀಡಲಾಯಿತು.ಹೊಟೆಗಾಳಿ ಹಿಂದುಳಿದ ಬಾಲಕರ ವಸತಿ ನಿಲಯಕ್ಕೆ ಗ್ರ್ಯಾಂಡರ್, ತೂಕದ ಯಂತ್ರ, ಸೋಲಾರ್ ಕಿಟ್ ಬೇಕೆಂದು ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದನ್ನು ಪರಿಶೀಲನೆ ಮಾಡಿದ ಮೇಸ್ತ, ವಸತಿನಿಲಯದ ಶೌಚಾಲಯ ಸಂಪೂರ್ಣವಾಗಿ ಹಾಳಾಗಿದೆ. ಅದನ್ನು ದುರಸ್ತಿ ಮಾಡಿಸಬೇಕು. ಕೆಲವು ಬಾಗಿಲು ಒಡೆದುಹೋಗಿದೆ. ಅವುಗಳನ್ನು ದುರಸ್ತಿ ಮಾಡಿಸಬೇಕು. ಗ್ರ್ಯಾಂಡರ್ ಇಲಾಖೆಯಿಂದ ಪಡೆದುಕೊಳ್ಳಿ ಎಂದ ಅವರು, ಬಾಡದ ಮೆಟ್ರಿಕ ಪೂರ್ವ ಬಾಲಕರ ವಸತಿ ನಿಲಯಕ್ಕೆ ಸುಣ್ಣಬಣ್ಣ ಬಳಿಯಬೇಕು. ಸ್ವಚ್ಛತೆಯಿಲ್ಲ. ಆ ಬಗ್ಗೆಯೂ ಕಡಿಮೆ ನೀಡಿ ಎಂದು ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ತಾಪಂ ಕಾರ್ಯನಿರ್ವಹಣಾಧಿಕಾರಿ ವೀರನಗೌಡ ಏಗನಗೌಡರ ಹಾಗೂ ಅಧಿಕಾರಿಗಳು ಇದ್ದರು.