ಸಾರಾಂಶ
ಮಹಾಪಧಮನಿಯಲ್ಲಿ ರಕ್ತ ಸೋರಿಕೆ ಉಂಟಾಗಿ ಸಾವು- ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ವ್ಯಕ್ತಿಗೆ ಸೂಕ್ತ ಸಮಯದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಕೆಎಂಸಿ ವೈದ್ಯರ ತಂಡ ಜೀವ ರಕ್ಷಣೆ ಮಾಡಿದೆ.
ಕನ್ನಡಪ್ರಭ ವಾರ್ತೆ ಮಂಗಳೂರು
ದೇಹದ ವಿವಿಧ ಭಾಗಗಳಿಗೆ ಹೃದಯದಿಂದ ರಕ್ತ ಪೂರೈಸುವ ಮಹಾಪಧಮನಿಯಲ್ಲಿ ರಕ್ತ ಸೋರಿಕೆ ಉಂಟಾಗಿ ಸಾವು- ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ವ್ಯಕ್ತಿಗೆ ಸೂಕ್ತ ಸಮಯದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಕೆಎಂಸಿ ವೈದ್ಯರ ತಂಡ ಜೀವ ರಕ್ಷಣೆ ಮಾಡಿದೆ.ಮಹಾಪಧಮನಿಯಲ್ಲಿ ರಕ್ತ ಸೋರಿಕೆಯು ಅಪರೂಪದ ಹಾಗೂ ಜೀವಕ್ಕೆ ಕುತ್ತು ತರುವಂತಹ ಸಮಸ್ಯೆ. ಏ.15ರಂದು 65 ವರ್ಷ ವಯಸ್ಸಿನ ವ್ಯಕ್ತಿ ಈ ಸಮಸ್ಯೆಯಿಂದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯ ಹಿರಿಯ ಇಂಟರ್ವೆನ್ಶನಲ್ ಕಾರ್ಡಿಯೋಲಾಜಿಸ್ಟ್ ಡಾ.ಎಂ.ಎನ್. ಭಟ್ ನಿರ್ದೇಶನದಂತೆ ತುರ್ತು ಕಿಬ್ಬೊಟ್ಟೆಯ ಅಲ್ಟ್ರಾಸೌಂಡ್ ಹಾಗೂ ಸಿ.ಟಿ ಸ್ಕ್ಯಾನ್ ನಡೆಸಿದಾಗ ಕಿಬ್ಬೊಟ್ಟೆಗೆ ರಕ್ತ ಪೂರೈಸುವ ಆಯೋರ್ಟಾದಲ್ಲಿ ಸೋರಿಕೆ ಕಂಡುಬಂದಿದ್ದು, ಪೆಲ್ವಿಕ್ ಭಾಗಕ್ಕೆ ರಕ್ತ ಸೋರಿಕೆಯಾಗುತ್ತಿರುವುದು ಪತ್ತೆಯಾಗಿತ್ತು. ಇದರಿಂದ ರೋಗಿಯ ರಕ್ತದೊತ್ತಡ ಏರುಪೇರಾಗಿದ್ದು, ಕಿಡ್ನಿ ವೈಫಲ್ಯ ಹಾಗೂ ಪಾರ್ಶ್ವವಾಯುವಿಗೆ ಕಾರಣವಾಗಿತ್ತು. ಇದು ಮಾರಣಾಂತಿಕವಾಗಿದ್ದು, ಸೂಕ್ತ ಚಿಕಿತ್ಸೆ ಕೈಗೊಳ್ಳದಿದ್ದರೆ ಸಾವು ಸಂಭವಿಸುವ ಸಾಧ್ಯತೆ ಇತ್ತು.
ತಕ್ಷಣ ವಿವಿಧ ತಜ್ಞರ ತಂಡ ತಕ್ಷಣ ತುರ್ತು ಎಂಡೋವಾಸ್ಕ್ಯೂಲರ್ ಸ್ಟೆಂಟ್ ಅಳವಡಿಕೆ ಕಾರ್ಯ ಕೈಗೊಂಡಿದ್ದು, 4 ಗಂಟೆಗಳ ಸತತ ಚಿಕಿತ್ಸೆ ಬಳಿಕ ರಕ್ತ ಸೋರಿಕೆಯನ್ನು ಯಶಸ್ವಿಯಾಗಿ ನಿಲ್ಲಿಸಲಾಯಿತು. ಶಸ್ತ್ರಚಿಕಿತ್ಸೆ ಬಳಿಕ ಸದ್ಯ ರೋಗಿಯ ಸ್ಥಿತಿ ಉತ್ತಮವಾಗಿದ್ದು, ಡಿಸ್ಚಾರ್ಜ್ ಆಗಿದ್ದಾರೆ.