ಸಾರಾಂಶ
ಬೆಂಗಳೂರು : ಅಚ್ಚ ಕನ್ನಡದ ನಿರೂಪಕಿ, ನಟಿ ಅಪರ್ಣಾ ಅವರ ಅಂತ್ಯಕ್ರಿಯೆ ಬನಶಂಕರಿಯ ವಿದ್ಯುತ್ ಚಿತಾಗಾರದಲ್ಲಿ ಶುಕ್ರವಾರ ಸರ್ಕಾರಿ ಗೌರವದೊಂದಿಗೆ ನೆರವೇರಿತು. ಈ ಮೂಲಕ ಅಪರ್ಣಾ ಅವರ ಪಾರ್ಥಿವ ಶರೀರ ಪಂಚಭೂತಗಳಲ್ಲಿ ಲೀನಗೊಂಡಿತು.
ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅಪರ್ಣಾ ಅವರು ಗುರುವಾರ ರಾತ್ರಿ ಅವರ ಸ್ವಗೃಹದಲ್ಲಿ ನಿಧನರಾಗಿದ್ದರು. ಶುಕ್ರವಾರ ನಡೆದ ಅಂತ್ಯ ಸಂಸ್ಕಾರದ ಧಾರ್ಮಿಕ ವಿಧಿ-ವಿಧಾನಗಳಲ್ಲಿ ಕುಟುಂಬಸ್ಥರು, ಆಪ್ತರು, ಚಿತ್ರರಂಗದ ಗಣ್ಯರು ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.
ಅಪರ್ಣಾ ಅವರ ಪತಿ ನಾಗರಾಜ್ ವಸ್ತಾರೆ ಅವರು, ಸ್ಮಾರ್ತ ಬ್ರಾಹ್ಮಣ ಸಂಪ್ರದಾಯದಂತೆ ಅಂತಿಮ ವಿಧಿ-ವಿಧಾನಗಳನ್ನು ನೆರವೇರಿಸಿದರು. ನಂತರ ಪೊಲೀಸ್ ಗೌರವದೊಂದಿಗೆ ಅಂತ್ಯಸಂಸ್ಕಾರ ನಡೆಯಿತು. ಶುಕ್ರವಾರ ಅಂತ್ಯಸಂಸ್ಕಾರಕ್ಕೂ ಮುನ್ನ ಬನಶಂಕರಿಯ ಅಪರ್ಣಾ ಅವರ ಸ್ವಗೃಹದಲ್ಲೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ‘ಸಪ್ತ ಸಾಗರದಾಚೆ ಎಲ್ಲೋ’ ಹಾಡಿನ ಮೂಲಕ ಚಿತ್ರರಂಗದ ಆಪ್ತರು ಕಣ್ಣೀರ ವಿದಾಯ ಹೇಳಿದರು.
ಕನ್ನಡಿಗರಲ್ಲದವರೂ ತಲೆದೂಗುವಂತೆ ಕನ್ನಡ ಮಾತನಾಡುತ್ತಿದ್ದ, ಸ್ಪಷ್ಟ ಉಚ್ಛಾರ, ಅದಕ್ಕೆ ತಕ್ಕ ಹಾವ-ಭಾವ, ನಿರೂಪಣೆ ವೇಳೆ ಕನ್ನಡದ ಪದಗಳನ್ನು ವರ್ಣಿಸುತ್ತಿದ್ದ ಸರಳ ಶೈಲಿಯ ನಿರೂಪಕಿ ಅಪರ್ಣಾ ಅವರ ನಿಧನಕ್ಕೆ ನಾಡಿನ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.
ಅಂತಿಮ ದರ್ಶನ:
ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಶಾಸಕ ಮುನಿರತ್ನ, ತೇಜಸ್ವಿನಿ ಅನಂತಕುಮಾರ್, ಹಿರಿಯ ನಟರಾದ ಶ್ರೀನಾಥ್, ರಾಘವೇಂದ್ರ ರಾಜಕುಮಾರ್, ಸುಂದರರಾಜ್, ರಮೇಶ್ ಅರವಿಂದ್, ಅಚ್ಯುತ್‌ರಾವ್, ದೊಡ್ಡಣ್ಣ, ಉಮಾಶ್ರೀ, ಮಂಡ್ಯ ರಮೇಶ್, ತಾರಾ, ಸುಧಾರಾಣಿ, ಮಾಸ್ಟರ್ ಆನಂದ್, ಹೇಮಾ, ಸಂಗೀತಾ ಕಟ್ಟಿ, ವಿನಯ್ ರಾಜಕುಮಾರ್, ನಿರೂಪಕಿ- ನಟಿ ಶ್ವೇತಾ ಚೆಂಗಪ್ಪ, ನಿರ್ದೇಶಕರಾದ ಟಿ.ಎನ್. ಸೀತಾರಾಮ್, ಎಸ್.ನಾರಾಯಣ, ಇಂದ್ರಜಿತ್ ಲಂಕೇಶ್, ಗಡಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿ.ಸೋಮಶೇಖರ್, ಹಿರಿಯ ಕವಿ ಎಚ್.ಎಸ್. ವೆಂಕಟೇಶಮೂರ್ತಿ, ಬ್ರಹ್ಮಾಂಡ ಗುರೂಜಿ, ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಸೇರಿದಂತೆ ಇತರರ ಅಂತಿಮ ದರ್ಶನ ಪಡೆದರು.
ಸರ್ಕಾರಿ ಗೌರವ:
ಬಳಿಕ ಪಾರ್ಥಿವ ಶರೀರವನ್ನು ಮೆರವಣಿಗೆ ಮೂಲಕ ಬನಶಂಕರಿಯ ವಿದ್ಯುತ್ ಚಿತಾಗಾರಕ್ಕೆ ತೆಗೆದುಕೊಂಡು ಹೋಗಲಾಯಿತು. ನಂತರ ಮೂರು ಸುತ್ತು ಕುಶಾಲತೋಪು ಸಿಡಿಸಿ ಪೊಲೀಸರು ಗೌರವ ಸಲ್ಲಿಸಿದರು. ನಟ ಸೃಜನ್ ಲೋಕೇಶ್ ಹಾಗೂ ಕುಟುಂಬಸ್ಥರು ಅಂತ್ಯಸಂಸ್ಕಾರದ ವೇಳೆ ಭಾಗಿಯಾಗಿದ್ದರು.ಬಿಎಂಆರ್‌ಸಿಎಲ್ ಸಂತಾಪ
ನಿರೂಪಕಿ ಅಪರ್ಣಾ ಸಾವಿಗೆ ನಮ್ಮ ಮೆಟ್ರೋ ಸಂತಾಪ ಸೂಚಿಸಿದೆ. ನಮ್ಮ ಮೆಟ್ರೋ ರೈಲಿನಲ್ಲಿ ಪ್ರಯಾಣಿಕರಿಗೆ ನಿಲ್ದಾಣ ಸೇರಿ ಇನ್ನಿತರ ಮಾಹಿತಿ ನೀಡುವ ಧ್ವನಿಯನ್ನು ಅಪರ್ಣಾ ನೀಡಿದ್ದರು. ಮೆಟ್ರೋದ ಹಲವು ಕಾರ್ಯಕ್ರಮದಲ್ಲಿ ನಿರೂಪಣೆ ಮಾಡಿದ್ದರು. ಕನ್ನಡ ಭಾಷೆಯಲ್ಲಿ ಅವರಿಗಿದ್ದ ಹಿಡಿತ, ಉಚ್ಛಾರಣಾ ಶೈಲಿ ಅನನ್ಯವಾದುದು. ಅವರ ಧ್ವನಿ ಮೆಟ್ರೋದಲ್ಲಿ ಎಂದಿಗೂ ಅಮರವಾಗಿರಲಿದೆ. ಅಲ್ಲದೆ ಭವಿಷ್ಯದ ಮೆಟ್ರೋ ಯೋಜನೆಗಳಲ್ಲಿ ಅವರನ್ನು ಮಿಸ್ ಮಾಡಿಕೊಳ್ಳಲಿದೆ ಎಂದು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮವು ಶ್ರದ್ಧಾಂಜಲಿ ಅರ್ಪಿಸಿದೆ.