ಸಾರಾಂಶ
ವಿಶ್ವನಾಥ ಮಲೇಬೆನ್ನೂರು
ಬೆಂಗಳೂರು : ರಾಜಧಾನಿ ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರದಲ್ಲಿ ಮನೆಯಿಂದ ಅಂಚೆ ಮತದಾನಕ್ಕೆ ಕೇವಲ 6,372 ಮಂದಿ ಹಿರಿಯ ನಾಗರಿಕರು ಮತ್ತು ಅಂಗವಿಕಲ ಮತದಾರರು ಅರ್ಜಿ ಸಲ್ಲಿಸಿದ್ದಾರೆ.
ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ ಹಾಗೂ ಬೆಂಗಳೂರು ದಕ್ಷಿಣ ಸೇರಿದಂತೆ 3 ಲೋಕಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ 85 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗೆ ಮನೆಯಿಂದ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದರಲ್ಲಿ 95,128 ಹಿರಿಯ ನಾಗರಿಕರು ಹಾಗೂ 22,222 ಅಂಗವಿಕಲರು ಸೇರಿದಂತೆ ಒಟ್ಟು 1,17,350 ಮತದಾರರಿಗೆ ಮನೆಯಿಂದ ಅಂಚೆ ಮತದಾನಕ್ಕೆ ಅರ್ಹತೆ ಪಡೆದಿದ್ದಾರೆ.
ಈ ಪೈಕಿ ಕೇವಲ 6,128 ಹಿರಿಯ ನಾಗರಿಕರು, 191 ಅಂಗವಿಕಲರು ಸೇರಿದಂತೆ ಒಟ್ಟು 6,372 ಮಂದಿ 12.ಡಿ ಅರ್ಜಿ ಸಲ್ಲಿಕೆ ಮಾಡಿ ಮನೆಯಿಂದ ಅಂಚೆ ಮತದಾನ ಮಾಡುವುದಾಗಿ ತಿಳಿಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಮನೆಯಿಂದ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆಗ ಬೆಂಗಳೂರಿನಲ್ಲಿ ಒಟ್ಟು 8,631 ಮಂದಿ ಹಿರಿಯ ನಾಗರಿಕರು ಮತ್ತು ಅಂಗವಿಕಲರು ಮನೆಯಿಂದ ಅಂಚೆ ಮತದಾನಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದರು. ಪ್ರಸಕ್ತ ಲೋಕಸಭಾ ಚುನಾವಣೆಗೆ ಕೇವಲ 6,372 ಮಂದಿ ಅರ್ಜಿ ಸಲ್ಲಿಕೆ ಮಾಡಿದ್ದು, 2,259 ಮಂದಿ ಕಳೆದ ಬಾರಿಗಿಂತ ಕಡಿಮೆ ಅರ್ಜಿ ಸಲ್ಲಿಸಿದ್ದಾರೆ.
ಅಂಚೆ ಮತದಾನದ ಬಗ್ಗೆ ಮಾಹಿತಿ ಇಲ್ಲ
ಲೋಕಸಭಾ ಚುನಾವಣೆ ಘೋಷಣೆಯಾಗುತ್ತಿದಂತೆ ಹಿರಿಯ ನಾಗರಿಕರಿಗೆ ಮತ್ತು ಅಂಗವಿಕಲ ಮತದಾರರಿಗೆ 12.ಡಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಈ ಬಗ್ಗೆ ಬೆಂಗಳೂರು ನಗರ ಜಿಲ್ಲಾ ಚುನಾವಣಾ ವಿಭಾಗ ಈ ಬಗ್ಗೆ ವ್ಯಾಪಕ ಪ್ರಚಾರ, ಜಾಗೃತಿ ಮೂಡಿಸದ ಹಿನ್ನೆಲೆಯಲ್ಲಿ ಅರ್ಹತೆ ಹೊಂದಿರುವ ಮತದಾರರ ಪೈಕಿ ಕೇವಲ ಶೇ.5 ರಷ್ಟು ಮತದಾರರು ಅಂಚೆ ಮತದಾನಕ್ಕೆ ಮುಂದಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿವೆ.
ಅರ್ಜಿ ಸಲ್ಲಿಕೆ ಅವಧಿ ಮುಕ್ತಾಯ
ಲೋಕಸಭಾ ಚುನಾವಣೆ ಬಗ್ಗೆ ಮಾ.16ಕ್ಕೆ ಘೋಷಣೆ ಮಾಡಲಾಯಿತು. ಮಾ.28ಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ಅಧಿಸೂಚನೆ ದಿನದಿಂದ ಐದು ದಿನ ಮಾತ್ರ 12 ಡಿ ಅಡಿಯಲ್ಲಿ ಅಂಚೆ ಮತದಾನಕ್ಕೆ ಅರ್ಜಿ ಸಲ್ಲಿಸುವುದಕ್ಕೆ ಅವಕಾಶವಿದ್ದು. ಏ.2ಕ್ಕೆ ಅರ್ಜಿ ಸಲ್ಲಿಕೆಯ ಗಡುವು ಸಹ ಮುಕ್ತಾಯವಾಗಿದೆ. ಹೀಗಾಗಿ, ಅರ್ಜಿ ಸಲ್ಲಿಕೆ ಮಾಡದವರಿಗೆ ಮನೆಯಿಂದ ಅಂಚೆ ಮತದಾನಕ್ಕೆ ಅವಕಾಶವಿಲ್ಲವಾಗಿದೆ.
ಆರು ದಿನ ಮನೆಯಿಂದ ಅಂಚೆ ಮತದಾನ
ಈಗಾಗಲೇ ಅರ್ಜಿ ಸಲ್ಲಿಕೆ ಮಾಡಿದವರಿಗೆ ಏ.13 ರಿಂದ ಏ.18ರ ವರೆಗೆ ಮನೆಯಿಂದ ಅಂಚೆ ಮತದಾನ ಕೈಗೊಳ್ಳಲಾಗುವುದು. ಅಧಿಕಾರಿಗಳ ತಂಡ ಅರ್ಜಿ ಸಲ್ಲಿಕೆ ಮಾಡಿದ ಪ್ರತಿ ಮತದಾರರ ಮನೆಗೆ ತೆರಳಿ ಮತದಾರರಿಂದ ಅಂಚೆ ಮತದಾನ ಪಡೆಯಲಿದ್ದಾರೆ. ಯಾವ ದಿನ ಅಧಿಕಾರಿಗಳ ತಂಡ ಮನೆಗೆ ಭೇಟಿ ನೀಡಲಿದೆ ಎಂಬುದರ ಕುರಿತು ಮೊದಲೇ ಮತದಾರರಿಗೆ ಮಾಹಿತಿ ಒದಗಿಸಲಾಗುತ್ತದೆ.
12.ಡಿ ಅರ್ಜಿದಾರರಿಗೆ ಮತಗಟ್ಟೆಯಲ್ಲಿ ಮತಕ್ಕೆ ಅವಕಾಶವಿಲ್ಲ
ಮನೆಯಿಂದ ಅಂಚೆ ಮತದಾನ ಮಾಡುವುದಕ್ಕೆ 12 ಡಿ ಅರ್ಜಿ ಸಲ್ಲಿಕೆ ಮಾಡಿದ ಮತದಾರರು ನಿಗದಿತ ದಿನಾಂಕದಲ್ಲಿ ಮನೆಯಿಂದಲೇ ಅಂಚೆ ಮತದಾನ ಮಾಡಬೇಕು. ಒಂದು ವೇಳೆ ಮನೆಯಿಂದ ಅಂಚೆ ಮತದಾನ ಸಾಧ್ಯವಾಗಿಲ್ಲ ಎಂದು ಸಾರ್ವತ್ರಿಕ ಮತದಾನದಂದು ಮತಗಟ್ಟೆಗೆ ತೆರಳಿ ಮತದಾನ ಮಾಡುವುದಕ್ಕೆ ಅವಕಾಶ ಇರುವುದಿಲ್ಲವಾಗಿದೆ.
ಈ ಬಾರಿ ವಯಸ್ಸುಹೆಚ್ಚಳ; ಅರ್ಜಿ ಇಳಿಕೆ
ಕಳೆದ 2023ರ ವಿಧಾನಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಹಿರಿಯ ನಾಗರಿಕರಿಗೆ ಮತ್ತು ಅಂಗವಿಕಲರಿಗೆ ಮನೆಯಿಂದ ಅಂಚೆ ಮತದಾನಕ್ಕೆ ಅವಕಾಶ ನೀಡಲಾಗಿತ್ತು. ಆಗ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಅವಕಾಶ ನೀಡಲಾಗಿತ್ತು. ಆದರೆ, ಈ ಬಾರಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮಾತ್ರ ಮನೆಯಿಂದ ಅಂಚೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ, ಮನೆಯಿಂದ ಮತದಾನಕ್ಕೆ ಅರ್ಜಿ ಸಲ್ಲಿಕೆದಾರರ ಸಂಖ್ಯೆಯಲ್ಲಿ ಇಳಿಕೆಯಾಗಿದೆ ಎಂದು ಅಧಿಕಾರಿಗಳು ಸಬೂಬು ಹೇಳುತ್ತಾರೆ.
* 85 ವರ್ಷ ಮೇಲ್ಪಟ್ಟ ಅಂಚೆ ಮತದಾರರ ವಿವರ
ಲೋಕಸಭಾ ಕ್ಷೇತ್ರ ಅರ್ಹ ಹಿರಿಯ ನಾಗರಿಕರು12.ಡಿ ಅರ್ಜಿ ಸಲ್ಲಿಕೆ
ಬೆಂಗಳೂರು ಉತ್ತರ33,1651,964
ಬೆಂಗಳೂರು ಕೇಂದ್ರ28,4641,758
ಬೆಂಗಳೂರು ದಕ್ಷಿಣ33,4992,459
ಒಟ್ಟು95,1286,181
* ಅಂಗವಿಕಲ ಅಂಚೆ ಮತದಾರರ ವಿವರ
ಲೋಕಸಭಾ ಕ್ಷೇತ್ರ ಅರ್ಹ ಅಂಗವಿಕಲರು12.ಡಿ ಅರ್ಜಿ ಸಲ್ಲಿಕೆಬೆಂಗಳೂರು ಉತ್ತರ9,93678
ಬೆಂಗಳೂರು ಕೇಂದ್ರ8,35960
ಬೆಂಗಳೂರು ದಕ್ಷಿಣ3,92753
ಒಟ್ಟು22,222191