ಬಿಎಂಟಿಸಿ ಬಸ್ ಸೇವೆಯನ್ನು ಮತ್ತಷ್ಟು ಉತ್ತಮಗೊಳಿಸಲು ತಂತ್ರಜ್ಞಾನದ ಮೊರೆ ಹೋಗಲಾಗುತ್ತಿದ್ದು, ಪ್ರಾಯೋಗಿಕವಾಗಿ 30 ಬಸ್ಗಳಿಗೆ ಸ್ವಯಂಚಾಲಿತ ಪ್ರಯಾಣಿಕರ ಎಣಿಕೆ (ಎಪಿಸಿ) ವ್ಯವಸ್ಥೆ ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಬಿಎಂಟಿಸಿ ಬಸ್ ಸೇವೆಯನ್ನು ಮತ್ತಷ್ಟು ಉತ್ತಮಗೊಳಿಸಲು ತಂತ್ರಜ್ಞಾನದ ಮೊರೆ ಹೋಗಲಾಗುತ್ತಿದ್ದು, ಪ್ರಾಯೋಗಿಕವಾಗಿ 30 ಬಸ್ಗಳಿಗೆ ಸ್ವಯಂಚಾಲಿತ ಪ್ರಯಾಣಿಕರ ಎಣಿಕೆ (ಎಪಿಸಿ) ವ್ಯವಸ್ಥೆ ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.ಯಾವ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿರುತ್ತದೆ, ಬಸ್ ಒಳಗೆ ಎಷ್ಟು ಪ್ರಯಾಣಿಕರಿದ್ದಾರೆ, ಅವರು ಟಿಕೆಟ್ ಪಡೆದಿದ್ದಾರೆಯೇ ಎಂಬುದು ಸೇರಿದಂತೆ ಇನ್ನಿತರ ಅಂಶಗಳ ಮೇಲೆ ನಿಗಾವಹಿಸಲು ಎಪಿಸಿ ವ್ಯವಸ್ಥೆ ಅಳವಡಿಸಲು ನಿರ್ಧರಿಸಲಾಗಿದೆ. ಪ್ರಾಯೋಗಿಕವಾಗಿ 30 ಬಸ್ಗಳಲ್ಲಿ ಪ್ರಯಾಣಿಕರು ಪ್ರವೇಶಿಸುವ ಬಾಗಿಲು, ಬಸ್ನ ಸೀಲಿಂಗ್ಗಳಲ್ಲಿ ಕ್ಯಾಮೆರಾ ಅಳವಡಿಸಲಾಗುತ್ತದೆ. ಆ ಕ್ಯಾಮೆರಾ ಬಸ್ ಒಳಗಿನ ಪ್ರಯಾಣಿಕರನ್ನು ಸ್ವಯಂಚಾಲಿತವಾಗಿ ಎಣಿಸುತ್ತದೆ. ಅದರಿಂದ ಎಲೆಕ್ಟ್ರಾನಿಕ್ ಟಿಕೆಟಿಂಗ್ ಯಂತ್ರ (ಇಟಿಎಂ) ಮೂಲಕ ನೀಡಲಾದ ಟಿಕೆಟ್ ಮತ್ತು ಪ್ರಯಾಣಿಕರ ಸಂಖ್ಯೆಯನ್ನು ತಾಳೆ ಹಾಕಲು ಸುಲಭವಾಗಲಿದೆ.
ಅದರ ಜತೆಗೆ ಯಾವ ಬಸ್ ನಿಲುಗಡೆಯಲ್ಲಿ ಎಷ್ಟು ಪ್ರಯಾಣಿಕರು ಬಸ್ ಅನ್ನು ಹತ್ತುತ್ತಾರೆ, ಯಾವ ಸಮಯದಲ್ಲಿ ಮತ್ತು ಯಾವ ಮಾರ್ಗದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿರುತ್ತದೆ ಎಂಬ ಕುರಿತಂತೆ ಮಾಹಿತಿ ಪಡೆಯಲು ನೂತನ ಎಪಿಸಿ ವ್ಯವಸ್ಥೆ ಸಹಕಾರಿಯಾಗಲಿದೆ. ಅದನ್ನಾಧರಿಸಿ ಹೆಚ್ಚುವರಿ ಬಸ್ ಸೇವೆ ನೀಡುವುದು ಸೇರಿದಂತೆ ಇನ್ನಿತರ ಪ್ರಯಾಣಿಕ ಸ್ನೇಹಿ ಅಂಶಗಳನ್ನು ಅನುಷ್ಠಾನಗೊಳಿಸಲು ಸಹಕಾರಿಯಾಗಲಿದೆ ಎಂಬುದು ನಿಗಮದ ಅಧಿಕಾರಿಗಳ ಯೋಜನೆಯಾಗಿದೆ. ಸದ್ಯ 30 ಬಸ್ಗಳಲ್ಲಿ ಎಪಿಸಿ ವ್ಯವಸ್ಥೆ ಅಳವಡಿಸಿ, ಅದರಿಂದ ಬರುವ ಫಲಿತಾಂಶವನ್ನಾಧರಿಸಿ ಉಳಿದ ಬಸ್ಗಳಲ್ಲೂ ಆ ವ್ಯವಸ್ಥೆ ಅಳವಡಿಸಲು ನಿಗಮ ನಿರ್ಧರಿಸಿದೆ.
