ಧಾರವಾಡ: ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಅನಗತ್ಯ. ರಾಜ್ಯ ಸರ್ಕಾರ ತಮಗೆ ಕಳುಹಿಸಿದ ಮಸೂದೆ ವಾಪಸ್ ಕಳುಹಿಸಿ ಎಂದು ರಾಜ್ಯಪಾಲರಿಗೆ ಪತ್ರ ಬರೆದಿರುವ ಶಾಸಕ ಅರವಿಂದ ಬೆಲ್ಲದ ಅವರು, ತಮಗೆ ಮತ ಹಾಕಿದ ಧಾರವಾಡ ಜನತೆಗೆ ಮೋಸ ಮಾಡಿದ್ದಾರೆ. ಈಗಲೂ ಕಾಲ ಮಿಂಚಿಲ್ಲ. ರಾಜ್ಯಪಾಲರ ಬಳಿ ಹೋಗಿ ಪ್ರತ್ಯೇಕ ಪಾಲಿಕೆಯ ಮಸೂದೆಗೆ ಸಹಿ ಹಾಕಿಸುವ ಮೂಲಕ ಧಾರವಾಡ ಜನತೆಯ ಕ್ಷಮೆ ಕೇಳಲು ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ಆಗ್ರಹಿಸಿದ್ದಾರೆ.
ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ಬೇಡ ಎಂದು ಬೆಲ್ಲದ ಅವರು ರಾಜ್ಯಪಾಲರಿಗೆ ಪತ್ರ ಬರೆದಿರುವುದನ್ನು ಭಾನುವಾರ ಸುದ್ದಿಗೋಷ್ಠಿಯಲ್ಲಿ ಓದಿದ ಚಿಂಚೋರೆ, ಒಂದೆಡೆ ಸದನದಲ್ಲಿ ಪ್ರತ್ಯೇಕ ಪಾಲಿಕೆ ಬಗ್ಗೆ ಚರ್ಚೆ ಮಾಡಿ ಅಧಿಸೂಚನೆ ಹೊರಡಿಸಲು ನಾನೇ ಕಾರಣ ಎಂದು ಶಾಸಕ ಬೆಲ್ಲದ ಹೇಳಿದ್ದಾರೆ. ಜತೆಗೆ ದೊಡ್ಡದಾಗಿ ಬ್ಯಾನರ್ ಸಹ ಹಾಕಿದ್ದರು. ತದ ನಂತರ ಪ್ರತ್ಯೇಕ ಪಾಲಿಕೆ ಬೇಡ ಎಂದು ಕಳೆದ ಮಾರ್ಚ್ 27ರಂದು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ. ಬೆಲ್ಲದ ಅವರದ್ದು ದ್ವಂದ ನೀತಿ ಅಲ್ಲವೇ ಎಂದು ಚಿಂಚೋರೆ ಪ್ರಶ್ನಿಸಿದರು.ಈ ಮಧ್ಯೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ರಾಜ್ಯಪಾಲರ ಭೇಟಿಗೆ ಸಮಯ ಕೇಳಿರುವ ಬಗ್ಗೆ ಮಾಜಿ ಮೇಯರ್ ಶಿವು ಹಿರೇಮಠ ಹಾಗೂ ವಕೀಲ ಅರುಣ ಜೋಶಿ ಅವರನ್ನು ಮಧ್ಯಸ್ಥಿಕೆದಾರರನಾಗಿ ಕಳುಹಿಸಿದ್ದಾರೆ. ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿ ಮಸೂದೆ ಕಳುಹಿಸಿರಬೇಕಾದರೆ, ಮತ್ತೇಕೆ ಚರ್ಚೆ? ಮಸೂದೆಗೆ ಸಹಿ ಹಾಕಿಸಿಕೊಂಡು ಬರುವುದನ್ನು ಬಿಟ್ಟು ಮತ್ತೇಕೆ ಚರ್ಚೆ ಮಾಡುವುದು ಎಂದು ಪ್ರಶ್ನಿಸಿದ ಚಿಂಚೋರೆ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಶಾಸಕ ಅರವಿಂದ ಬೆಲ್ಲದ ಮಸೂದೆಗೆ ಸಹಿ ಹಾಕಿಸಿಕೊಂಡು ಬರಬೇಕು. ಇಲ್ಲದೇ ಹೋದಲ್ಲಿ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ ಎಂದರು.
ಮೇ 22ರಂದು ನನ್ನ ಜನ್ಮದಿನವಿದ್ದು ಈ ಬಾರಿ ಜನ್ಮದಿನ ಆಚರಿಸುತ್ತಿಲ್ಲ. ಬದಲಾಗಿ ಪ್ರತ್ಯೇಕ ಪಾಲಿಕೆ ರಚನೆ ಆಗಲೆಂದು ಹೋರಾಟ ಹಮ್ಮಿಕೊಂಡಿದ್ದೇವೆ. ಪಶ್ಚಿಮ ಕ್ಷೇತ್ರದ ಪ್ರತಿ ವಾರ್ಡ್‌ನಲ್ಲಿ ಅಭಿಯಾನ ಮೂಲಕ ಬೆಲ್ಲದ ಅವರ ದ್ವಂದ್ವ ನೀತಿಯನ್ನು ಜನರಿಗೆ ತಿಳಿಸುತ್ತೇವೆ. ಪ್ರತ್ಯೇಕ ಪಾಲಿಕೆ ಬಗ್ಗೆ ಅರವಿಂದ ಬೆಲ್ಲದ ಮಾಡಿದ ಕಪಟ ನೀತಿಗಳು ನಮಗೆ ಗೊತ್ತಾಗಿದ್ದು, ಬರುವ ದಿನಗಳಲ್ಲಿ ಇನ್ನೂ ಎರಡು ದಾಖಲೆಗಳನ್ನು ಬಿಡುಗಡೆ ಮಾಡುವೆ ಎಂದು ಚಿಂಚೋರೆ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಆನಂದ ಮುಶಣ್ಣವರ, ಮಂಜುನಾಥ ಭೋವಿ, ಶಂಭು ಸಾಲಿಮನಿ, ಮೆಹಬೂಬಖಾನ್ ಪಠಾಣ, ಪಿ.ಕೆ. ನೀರಲಕಟ್ಟಿ, ಈರಣ್ಣ ಶೆಟ್ಟರ್ ಇದ್ದರು. ಪ್ರತ್ಯೇಕ ಪಾಲಿಕೆಗಾಗಿ ಚರ್ಚೆಗೆ ರಾಜ್ಯಪಾಲರು ಒಪ್ಪಿಗೆ
ಧಾರವಾಡ: ಪ್ರತ್ಯೇಕ ಮಹಾನಗರ ಪಾಲಿಕೆ ವಿಚಾರವಾಗಿ ಚರ್ಚಿಸಲು ಸಮಯ ಕೇಳಿ ಪತ್ರ ಬರೆದಿದ್ದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ರಾಜ್ಯಪಾಲರ ಕಚೇರಿಯಿಂದ ನಾಲ್ಕೇ ದಿನಗಳಲ್ಲಿ ಸ್ಪಂದನೆ ದೊರಕಿದೆ.
ಪ್ರತ್ಯೇಕ ಪಾಲಿಕೆ ವಿಚಾರವಾಗಿ ತಾವು ಹಾಗೂ ತಮ್ಮೊಂದಿಗೆ ಹೋರಾಟಗಾರರು ಸೇರಿ ಚರ್ಚಿಸಲು ಅವಕಾಶ ಕೋರಿ ಕಳೆದ ಮೇ 13ರಂದು ಕೇಂದ್ರ ಸಚಿವರು ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಇದಕ್ಕೆ ಪ್ರತಿಯಾಗಿ ಮೇ 16ರಂದು ರಾಜ್ಯಪಾಲರ ಎಡಿಸಿ ಸಬೂ ಥಾಮಸ್ ಅವರು ಪತ್ರ ಬರೆದಿದ್ದಾರೆ.
ಮೇ 19 ಅಥವಾ 20ರಂದು ಪ್ರತ್ಯೇಕ ಪಾಲಿಕೆ ವಿಚಾರವಾಗಿ ರಾಜ್ಯಪಾಲರೊಂದಿಗೆ ಚರ್ಚಿಸಬಹುದು. ನಿರ್ದಿಷ್ಟ ದಿನ ಹಾಗೂ ಸಮಯವನ್ನು ದೂರವಾಣಿ ಮೂಲಕ ತಿಳಿಸುತ್ತೇವೆ. ತಮ್ಮೊಂದಿಗೆ ಐವರ ನಿಯೋಗಕ್ಕೆ ಚರ್ಚೆಗೆ ಅವಕಾಶವಿದೆ ಎಂದು ಥಾಮಸ್ ಅವರು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರಿಗೆ ಪ್ರತಿಕ್ರಿಯೆ ನೀಡಿದ್ದಾರೆ.ಪ್ರತ್ಯೇಕ ಪಾಲಿಕೆಯ ಅವಕಾಶ ತಪ್ಪಲು ಬಿಜೆಪಿ ಮುಖಂಡರೇ ಕಾರಣ ಎಂದು ಧಾರವಾಡದಲ್ಲಿ ತೀವ್ರ ರೀತಿಯ ಪ್ರತಿಭಟನೆಗಳು ನಡೆದಿದ್ದು, ಭಾನುವಾರ ರಸ್ತೆ ಬಂದ್, ಬಿಜೆಪಿ ಮುಖಂಡರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತವಾಗಿತ್ತು. ಜತೆಗೆ ಕಾಂಗ್ರೆಸ್ ಮುಖಂಡ ದೀಪಕ ಚಿಂಚೋರೆ ಸುದ್ದಿಗೋಷ್ಠಿಯಲ್ಲಿ, ರಾಜ್ಯಪಾಲರೊಂದಿಗೆ ಚರ್ಚೆ ಅಗತ್ಯವಿಲ್ಲ. ಅದರ ಬದಲು ಪ್ರತ್ಯೇಕ ಪಾಲಿಕೆಯ ಮಸೂದೆಗೆ ಸಹಿ ಹಾಕಿಸಿಕೊಂಡು ಬನ್ನಿ ಎಂದು ಆಗ್ರಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.