ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರ
ನ್ಯಾಯಾಲಯದ ಶಿಷ್ಟಾಚಾರಗಳನ್ನು ಎಸಿ ಡಾ.ಮೈತ್ರಿ ಪಾಲಿಸುವಂತಾಗಬೇಕು, ವಕೀಲರಿಗೆ ಗೌರವ ನೀಡಬೇಕು, ಕಚೇರಿಯಲ್ಲಿ ನಡೆಯುವಂತ ಭ್ರಷ್ಟಾಚಾರಗಳಿಗೆ ಕಡಿವಾಣ ಹಾಕಬೇಕು. ಶುಕ್ರವಾರ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷಮೆಯಾಚಿಸಬೇಕು. ಇಲ್ಲವಾದರೆ ವರ್ಗಾವಣೆ ಮಾಡಿಕೊಂಡು ಹೋಗಬೇಕು, ಅಲ್ಲಿವರೆಗೆ ನಾವು ಎಸಿ ನ್ಯಾಯಾಲಯದ ಕಲಾಪಗಳಲ್ಲಿ ಭಾಗವಹಿಸುವುದಿಲ್ಲ ಎಂದು ವಕೀಲರ ಸಂಘದ ಅಧ್ಯಕ್ಷ ಮುನೇಗೌಡ ತಿಳಿಸಿದರು.ನಗರದ ವಕೀಲರ ಸಂಘದ ಸಭಾಂಗಣದಲ್ಲಿ ಮಾತನಾಡಿ, ಸಹಾಯಕ ಕಮಿಷನರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಡಾ.ಮೈತ್ರಿ ತಮ್ಮ ಉದ್ಧಟತನದ ವರ್ತನೆ ಬದಲಾಯಿಸಿಕೊಳ್ಳಬೇಕು, ಉನ್ನತ ದರ್ಜೆಯ ‘ಎ’ ಗ್ರೇಡ್ ಅಧಿಕಾರಿಯಾಗಿದ್ದು, ಆ ಹುದ್ದೆಗೆ ತಕ್ಕಂತೆ ನಡುವಳಿಕೆ ಅಳವಡಿಸಿಕೊಳ್ಳಬೇಕು, ಹಿರಿಯರಿಗೆ ಗೌರವ ಕೊಡುವ ಸಂಸ್ಕಾರ ಕಲಿಯಬೇಕು ಎಂದು ಕಿವಿಮಾತು ಹೇಳಿದರು.
ಎಸಿ ದಬ್ಬಾಳಿಕೆ ಸಂಸ್ಕೃತಿವಕೀಲರ ಮೇಲೆ ದಬ್ಬಾಳಿಕೆಯ ಸಂಸ್ಕೃತಿ ಬಿಡಬೇಕು, ನ್ಯಾಯಾಲಯದ ಕಾರ್ಯ ಕಲಾಪ ನಡೆಯುವಾಗ ನಾವು ಹೇಳಿದಂತೆ ನ್ಯಾಯವಾದಿಗಳು ನಡೆಯಬೇಕು, ನ್ಯಾಯಾಲಯದಿಂದ ಹೊರಗೆ ಇರಬೇಕು, ನಾನು ಕರೆದಾಗ ಬರಬೇಕು. ಒಳಗೆ ಅಸೀನರಾಗಬಾರದು, ಅಕ್ಷರಸ್ಥರಂತೆ ವರ್ತಿಸಬೇಕು ಎಂದೆಲ್ಲ ಎಸಿ ನಿರೀಕ್ಷಿಸುವುದು ತಪ್ಪು ಎಂದರು.
ವಕೀಲರ ಸಂಘದ ಮಾಜಿ ಅಧ್ಯಕ್ಷ ಶ್ರೀಧರ್ ಮಾತನಾಡಿ, ವಿನಃ ಕಾರಣ ವಕೀಲರ ಮೇಲೆ, ಕಕ್ಷಿದಾರರ ಮೇಲೆ ದರ್ಪ ತೋರುವುದು ಬಿಟ್ಟು ಸೌಜನ್ಯದಿಂದ ವರ್ತಿಸಿದರೆ ಅವರಿಗೂ ಸಮಾಜದಲ್ಲಿ ಗೌರವ ಸಿಗುತ್ತದೆ, ಜನಪರ ಸೇವೆಗಳಿಗೆ ನಮ್ಮ ಸಹಕಾರವೂ ಇರುತ್ತದೆ ಎಂದರು.ಎಸಿ ವರ್ತನೆ ಬದಲಾಗಬೇಕು
ವಕೀಲರ ಬಳಿ ಮಾತ್ರವಲ್ಲದೆ ಕಕ್ಷಿದಾರರನ್ನೂ ಹೀನಾಯವಾಗಿ ಕಾಣುತ್ತಾರೆ ಎಂಬ ಹಲವಾರು ದೂರುಗಳು ಬಂದಿವೆ. ಈ ಬಗ್ಗೆ ಕಕ್ಷಿದಾರರು ಸಹ ಶುಕ್ರವಾರ ತಮ್ಮ ಅಕ್ರೋಶ ಹೊರಹಾಕಿದ್ದಾರೆ. ಸಹಾಯಕ ಕಮಿಷನರ್ ಗೌರವ ಕೊಡದಿದ್ದರೂ ಆಗೌರವದಿಂದ ವರ್ತಿಸುವುದನ್ನು ಬದಲಾಯಿಸಿಕೊಳ್ಳಲಿ ಎಂದು ಹೇಳಿದರು.ವಕೀಲರನ್ನು ಹೀಯಾಳಿಸಿರುವುದಕ್ಕೆ ಕ್ಷಮೆ ಯಾಚಿಸಬೇಕು, ಇಲ್ಲವೇ ವರ್ಗಾಯಿಸಿಕೊಂಡು ಹೋಗಲಿ. ಕ್ಷಮೆ ಯಾಚಿಸುವವರೆಗೂ ಯಾವ ವಕೀಲರೂ ಎಸಿ ನ್ಯಾಯಾಲಯದ ಕಲಾಪದಲ್ಲಿ ಭಾಗವಹಿಸದೆ ಬಹಿಷ್ಕರಿಸುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ವಕೀಲರ ಸಂಘದ ಸಿದ್ದಾರ್ಥ ಇದ್ದರು.