ಬ್ರಾಹ್ಮಣ ವಿದ್ಯಾರ್ಥಿನಿಗೆ ಮೊಟ್ಟೆ ತಿನ್ನಿಸಿದ ಶಿಕ್ಷಕನಿಂದ ಕ್ಷಮೆಯಾಚನೆ

| Published : Nov 24 2023, 01:30 AM IST

ಬ್ರಾಹ್ಮಣ ವಿದ್ಯಾರ್ಥಿನಿಗೆ ಮೊಟ್ಟೆ ತಿನ್ನಿಸಿದ ಶಿಕ್ಷಕನಿಂದ ಕ್ಷಮೆಯಾಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಪೋಷಕರು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ದೂರು ನೀಡಿದರು. ಗುರುವಾರ ಇಲಾಖೆಯ ಹಿರಿಯ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ, ವಸ್ತುಸ್ಥಿತಿ ಕುರಿತು ಪೋಷಕರಿಂದ ಮತ್ತು ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು. ಮೇಲ್ನೋಟಕ್ಕೆ ಶಿಕ್ಷಕ ಲೋಪ ಎಸಗಿರುವುದು ಕಂಡುಬಂದಿದ್ದು, ಶಿಕ್ಷಕರು ತಪ್ಪು ಒಪ್ಪಿಕೊಂಡ ಮೇರೆಗೆ ಪೋಷಕವರ್ಗ ದೂರು ಹಿಂಪಡೆಯುವ ಮೂಲಕ ಪ್ರಕರಣ ಸುಖಾಂತ್ಯ ಕಂಡಿದೆ.

ಕನ್ನಡಪ್ರಭ ವಾರ್ತೆ, ರಿಪ್ಪನ್‌ಪೇಟೆ ಇಲ್ಲಿಗೆ ಸಮೀಪದ ಅಮೃತ ಗ್ರಾಮದ ಕೆಪಿಎಸ್ ಪ್ರಾಥಮಿಕ ಶಾಲೆಯಲ್ಲಿ ಬ್ರಾಹ್ಮಣ ವಿದ್ಯಾರ್ಥಿನಿಗೆ ಶಾಲಾ ಶಿಕ್ಷಕರೊಬ್ಬರು ಮೊಟ್ಟೆ ತಿನ್ನುವಂತೆ ಮಂಗಳವಾರ ಒತ್ತಡ ಹಾಕಿದ್ದು, ಇದರಿಂದ ಪೋಷಕರು ಆಕ್ರೋಶಗೊಂಡ ಘಟನೆ ನಡೆದಿದೆ.

ರಾಜ್ಯ ಸರ್ಕಾರ ಶಾಲಾ ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುವ ಮಹಾತ್ವಾಕಾಂಕ್ಷಿ ಯೋಜನೆಯಡಿ ಶಾಲಾ ಶಿಕ್ಷಕರು ಮಕ್ಕಳಿಗೆ ಮೊಟ್ಟೆ ಅಥವಾ ಚಿಕ್ಕಿ ನೀಡುವ ಯೋಜನೆ ಜಾರಿಯಿದೆ. ಅದರಂತೆ ಸಮೀಪದ ಅಮೃತ ಗ್ರಾಮದ ಕೆಪಿಎಸ್ ಪ್ರಾಥಮಿಕ ಶಾಲೆಯಲ್ಲಿ ಬ್ರಾಹ್ಮಣ ವಿದ್ಯಾರ್ಥಿನಿಗೆ ಶಾಲಾ ಶಿಕ್ಷಕರೊಬ್ಬರು ಮೊಟ್ಟೆ ತಿನ್ನಿಸಿದ್ದಾರೆ. ಪೋಷಕರ ಆಕ್ಷೇಪ ಬಳಿಕ ಬುಧವಾರ ಹಿರಿಯ ಅಧಿಕಾರಿಗಳ ಮಧ್ಯ ಪ್ರವೇಶವಾಗಿದ್ದು, ಶಿಕ್ಷಕರು ತಮ್ಮ ತಪ್ಪಿಗಾಗಿ ಕ್ಷಮೆ ಕೋರಿದ್ದಾರೆ.

ವಿದ್ಯಾರ್ಥಿನಿಗೆ ಮೊಟ್ಟೆ ತಿನ್ನಿಸಿದ ವಿಚಾರದ ಕುರಿತು ಪೋಷಕರು ಶಾಲಾ ಅಡಳಿತ ಗಮನಕ್ಕೆ ತಂದಿದ್ದಾರೆ. ಆದರೂ ಶಾಲೆ ಆಡಳಿತ ವರ್ಗ ನಿರ್ಲಕ್ಷ್ಯ ತೋರಿದೆ. ಈ ಹಿನ್ನೆಲೆ ಪೋಷಕ ವರ್ಗ ಆಕ್ರೋಶಗೊಂಡಿದ್ದರು.

ಎರಡನೇ ತರಗತಿಯಲ್ಲಿ ಸುಮಾರು 26 ಮಕ್ಕಳಿರುವ ಕೊಠಡಿಯಲ್ಲಿ 10 ವಿದ್ಯಾರ್ಥಿಗಳು ನಿತ್ಯ ಚಿಕ್ಕಿ ಸೇವನೆ ಮಾಡುತ್ತಿದ್ದರೂ ಆ ಎಲ್ಲ ಮಕ್ಕಳಿಗೂ ಒತ್ತಾಯದಿಂದ ಶಿಕ್ಷಕ ಪುಟ್ಟನಾಯ್ಕ ಮೊಟ್ಟೆ ನೀಡಿದ್ದರು ಎನ್ನಲಾಗಿದೆ.

ಈ ಕುರಿತು ಪೋಷಕರು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ದೂರು ನೀಡಿದರು. ಗುರುವಾರ ಇಲಾಖೆಯ ಹಿರಿಯ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ, ವಸ್ತುಸ್ಥಿತಿ ಕುರಿತು ಪೋಷಕರಿಂದ ಮತ್ತು ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು. ಮೇಲ್ನೋಟಕ್ಕೆ ಶಿಕ್ಷಕ ಲೋಪ ಎಸಗಿರುವುದು ಕಂಡುಬಂದಿದ್ದು, ಶಿಕ್ಷಕರು ತಪ್ಪು ಒಪ್ಪಿಕೊಂಡ ಮೇರೆಗೆ ಪೋಷಕವರ್ಗ ದೂರು ಹಿಂಪಡೆಯುವ ಮೂಲಕ ಪ್ರಕರಣ ಸುಖಾಂತ್ಯ ಕಂಡಿದೆ.