ಕನ್ನಡಪ್ರಭವಾರ್ತೆ ಬೆಂಗಳೂರು
ಇನ್ನು ಮುಂದೆ ಜಿಬಿಎ ವ್ಯಾಪ್ತಿಯ ಮನೆಗಳಲ್ಲಿನ ಹಳೆಯ ಹಾಗೂ ಬೇಡವಾದ ವಸ್ತುಗಳ ವಿಲೇವಾರಿ ಸಮಸ್ಯೆ ಬಗೆಹರಿಸಲು ಹೊಸ ವ್ಯವಸ್ಥೆ ಕಲ್ಪಿಸಿದ್ದು, ಆ್ಯಪ್ ಮೂಲಕ ಮಾಹಿತಿ ನೀಡಿದರೆ ಸಾಕು ಮನೆ ಬಾಗಿಲಿಗೆ ಬಂದು ಉಚಿತವಾಗಿ ಸಂಗ್ರಹಿಸಿಕೊಂಡು ಹೋಗುವ ಯೋಜನೆ ಜಾರಿಗೆ ತರಲಾಗಿದೆ.ಇದಕ್ಕಾಗಿ ಜಿಬಿಎ ಡಿಕ್ಲಟರ್ (DClutter) ತಂತ್ರಾಂಶ ಬಿಡುಗಡೆ ಮಾಡಿದ್ದು, ಮೊಬೈಲ್‌ನಲ್ಲಿ ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್ಲೋಡ್ ಮಾಡಿಕೊಂಡು ಕೋರಿಕೆ ಸಲ್ಲಿಸಬಹುದು ಎಂದು ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ನಿಯಮಿತದ ಮುಖ್ಯ ಕಾರ್ಯನಿರ್ವಣಾಧಿಕಾರಿ ಕರೀಗೌಡ ತಿಳಿಸಿದರು.
ಆ್ಯಪ್‌ಗೆ ಚಾಲನೆ ನೀಡಿದ ಕರಿಗೌಡ ಅವರು, ಬಿಎಡಬ್ಲ್ಯುಎಂಎಲ್ ವತಿಯಿಂದ ಹಳೆಯ ಪೀಠೋಪಕರಣಗಳು, ಸೋಫಾಗಳು, ಹಾಸಿಗೆ, ಹಳೆಯ ಬಟ್ಟೆಗಳು, ಒಡೆದ ಸ್ಯಾನಿಟರಿ ಸಿಂಕ್ ಸಾಮಗ್ರಿ, ಹಳೆಯ ಕಮೋಡ್‌ಗಳು, ಚಪ್ಪಲಿ ಹಾಗೂ ಇತರೆ ದೊಡ್ಡ ಗಾತ್ರದ ಗೃಹ ಬಳಕೆಯ ತ್ಯಾಜ್ಯಗಳನ್ನು ಸಂಗ್ರಹಿಸುತ್ತಿರಲಿಲ್ಲ. ಇದೀಗ “ಡಿಕ್ಲಟರ್” (DClutter) ಮೊಬೈಲ್ ತಂತ್ರಾಂಶ ಪರಿಚಯಿಸಿದೆ. ನಾಗರಿಕರು ತಮ್ಮ ಮನೆಗಳಲ್ಲಿರುವ ಬೃಹತ್ ತ್ಯಾಜ್ಯ ವಿಲೇವಾರಿಗೆ ಮಾಹಿತಿಯನ್ನು ಆ್ಯಪ್ ಮೂಲಕ ಸಲ್ಲಿಸಬೇಕು. ಆ್ಯಪ್‌ನಲ್ಲಿ ಬರುವ ಕೋರಿಕೆ ಹಾಗೂ ತ್ಯಾಜ್ಯದ ಪ್ರಮಾಣ ಹಾಗೂ ಸ್ವರೂಪವನ್ನು ಅವಲಂಬಿಸಿ ವಾರಕ್ಕೆ ಒಮ್ಮೆ ತ್ಯಾಜ್ಯ ಸಂಗ್ರಹಣೆ ನಡೆಸಲಾಗುತ್ತದೆ. ತ್ಯಾಜ್ಯದಲ್ಲಿ ಮರುಬಳಕೆ ಸಾಧ್ಯವಿರುವ ವಸ್ತುಗಳನ್ನು ಅಧಿಕೃತ ಮರುಬಳಕೆ ಘಟಕಗಳಿಗೆ ಕಳುಹಿಸಲಾಗುವುದು. ಮರುಬಳಸಲಾಗದ ತ್ಯಾಜ್ಯವನ್ನು ವೈಜ್ಞಾನಿಕ ವಿಧಾನದಲ್ಲಿ ಸಂಸ್ಕರಿಸಲು ವೆಸ್ಟ್-ಟು-ಎನರ್ಜಿ ಘಟಕಗಳಿಗೆ ರವಾನಿಸಲಾಗುತ್ತದೆ ಎಂದರು.ಡಿಕ್ಲಟರ್ ಕಾರ್ಯನಿರ್ವಹಿಸುವ ವಿಧಾನ:
ಗೂಗಲ್ ಸ್ಟೋರ್ ಅಥವಾ ಆಪಲ್ ಸ್ಟೋರ್ ನಿಂದ ತಂತ್ರಾಂಶವನ್ನು ಡೌನ್ಲೋಡ್ ಮಾಡಿಕೊಳ್ಳಿ. ಪ್ರಾಥಮಿಕ ವಿವರ ನೋಂದಾಯಿಸಿ, ವಿಲೇವಾರಿ ಮಾಡಬೇಕಾದ ವಸ್ತುಗಳನ್ನು ಆಯ್ಕೆ ಮಾಡಿ, ಪಿಕ್ ಅಪ್ ಸಮಯವನ್ನು ನಿಗದಿಪಡಿಸಿ, ಬಿಎಡಬ್ಲ್ಯುಎಂಎಲ್ ತಂಡ ಮನೆ ಬಾಗಿಲಿಗೆ ಬಂದು ಸಂಗ್ರಹಿಸಲಿದೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ https://play.google.com/store/apps/details?id=com.dclutter.app ಲಿಂಕ್ ಹಾಗೂ ಆ್ಯಪಲ್ ಆಪ್ ಸ್ಟೋರ್‌ನಲ್ಲಿ https://apps.apple.com/us/app/dclutter/id6755908090 ಲಿಂಕ್ ಬಳಸಿ ಡೌನ್ಲೋಡ್ ಮಾಡಬಹುದು.
