ಕರ್ನಾಟಕದಲ್ಲಿರುವ ಮರಾಠಾ ಸಮುದಾಯದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯ ಸ್ಥಿತಿಗತಿಗಳನ್ನು ನಿಖರವಾಗಿ ಅರಿಯುವ ಉದ್ದೇಶದಿಂದ ಸಮುದಾಯದಿಂದ ಪ್ರತ್ಯೇಕ ಮೊಬೈಲ್‌ ಆ್ಯಪ್‌ ಮೂಲಕ ರಾಜ್ಯವ್ಯಾಪಿ ಡಿಜಿಟಲ್‌ ಸಮೀಕ್ಷೆ ಆರಂಭಿಸಲಾಗಿದೆ ಎಂದು ಕ್ಷತ್ರಿಯ ಮರಾಠ ಸಮಾಜದ ಧರ್ಮಗುರು ದಾದಾ ಮಹಾರಾಜ ನಗರಕರ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಬೀದರ್‌

ಕರ್ನಾಟಕದಲ್ಲಿರುವ ಮರಾಠಾ ಸಮುದಾಯದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯ ಸ್ಥಿತಿಗತಿಗಳನ್ನು ನಿಖರವಾಗಿ ಅರಿಯುವ ಉದ್ದೇಶದಿಂದ ಸಮುದಾಯದಿಂದ ಪ್ರತ್ಯೇಕ ಮೊಬೈಲ್‌ ಆ್ಯಪ್‌ ಮೂಲಕ ರಾಜ್ಯವ್ಯಾಪಿ ಡಿಜಿಟಲ್‌ ಸಮೀಕ್ಷೆ ಆರಂಭಿಸಲಾಗಿದೆ ಎಂದು ಕ್ಷತ್ರಿಯ ಮರಾಠ ಸಮಾಜದ ಧರ್ಮಗುರು ದಾದಾ ಮಹಾರಾಜ ನಗರಕರ್‌ ತಿಳಿಸಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮುದಾಯವನ್ನು ಸಂಘಟಿಸುವುದು, ಅಗತ್ಯವಿರುವ ಕುಟುಂಬಗಳನ್ನು ಗುರುತಿಸುವುದು ಹಾಗೂ ಅರ್ಹರಿಗೆ ಸೂಕ್ತ ನೆರವು ಕಲ್ಪಿಸುವ ನಿಟ್ಟಿನಲ್ಲಿ ನಿಖರವಾದ ಅಂಕಿ ಅಂಶಗಳ ಸಂಗ್ರಹ ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದರು.

ಸಮುದಾಯದ ಪ್ರತಿಯೊಬ್ಬರೂ ಮೊಬೈಲ್‌ ಆ್ಯಪ್‌ನಲ್ಲಿ ನೋಂದಣಿ ಮಾಡಿಕೊಂಡು ಅಗತ್ಯ ಮಾಹಿತಿಯನ್ನು ನೀಡಬೇಕು. ಯಾವುದೇ ಕುಟುಂಬವೂ ಸಮೀಕ್ಷೆ ಯಿಂದ ಹೊರಗುಳಿಯದಂತೆ ಸಹಕರಿಸುವ ಮೂಲಕ ಈ ಮಹತ್ವದ ಕಾರ್ಯವನ್ನು ಯಶಸ್ವಿಗೊಳಿಸಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ಮುಖಂಡರು ಮಾತನಾಡಿ ಮನವಿ ಮಾಡಿದರು.

ಕ್ಷತ್ರಿಯ ಮರಾಠಾ ಪರಿಷತ್‌ ಅಧ್ಯಕ್ಷ ದಿಗಂಬರರಾವ್‌ ಮಾನಕಾರಿ ಮಾತನಾಡಿ, ಸಮುದಾಯದ ಜನಸಂಖ್ಯೆಯನ್ನು ಕೆಲವೆಡೆ ಕಡಿಮೆ ಪ್ರಮಾಣದಲ್ಲಿ ತೋರಿಸ ಲಾಗುತ್ತಿದೆ. ಆದ್ದರಿಂದ ರಾಜ್ಯದಲ್ಲಿರುವ ಮರಾಠಾ ಸಮುದಾಯದ ನೈಜ ಜನಸಂಖ್ಯೆ ಹಾಗೂ ಸಾಮಾಜಿಕ ಆರ್ಥಿಕ ಸಾಮರ್ಥ್ಯವನ್ನು ದಾಖಲಿಸುವುದು ಸಮೀಕ್ಷೆ ಯ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.

ವೆಂಕಟರಾವ್‌ ಮೆಂದೆ ಮಾತನಾಡಿ, ಈಗಾಗಲೇ ಬೆಳಗಾವಿಯಲ್ಲಿ ಸಮೀಕ್ಷೆಗೆ ಚಾಲನೆ ನೀಡಲಾಗಿದ್ದು, ಇದೀಗ ಬೀದರ್‌ ಜಿಲ್ಲೆಯಲ್ಲಿಯೂ ಕಾರ್ಯ ಆರಂಭಿಸ ಲಾಗಿದೆ. ತಾಲೂಕು, ಪಂಚಾಯಿತಿ ಹಾಗೂ ಗ್ರಾಮ ಮಟ್ಟದಲ್ಲಿ ಯುವಕರ ತಂಡಗಳು ಹಿರಿಯರ ಮಾರ್ಗದರ್ಶನದಲ್ಲಿ ಮನೆ ಮನೆಗೆ ತೆರಳಿ ಮಾಹಿತಿ ಸಂಗ್ರಹಿ ಸಲಿವೆ. ಎರಡು-ಮೂರು ತಿಂಗಳಲ್ಲಿ ಸಮೀಕ್ಷೆ ಪೂರ್ಣಗೊಳಿಸಿ ಸಮಗ್ರ ಅಂಕಿ ಅಂಶ ಸಿದ್ಧಪಡಿಸುವ ಗುರಿ ಹೊಂದಲಾಗಿದೆ ಎಂದರು.

ಸಮಾಜದ ಹಿರಿಯ ಮುಖಂಡರಾದ ಜನಾರ್ಧನ ಬಿರಾದಾರ, ಕಿಶನರಾವ್‌ ಪಾಟೀಲ್‌ ಇಂಚೂರಕರ್‌, ವಕೀಲರಾದ ನಾರಾಯಣ ಗಣೇಶ, ಸತೀಶ ಮೂಳೆ, ತಾತ್ಯಾರಾವ್‌ ಪಾಟೀಲ್‌, ರಾವಸಾಹೇಬ ಬಿರಾದಾರ, ಆನೀಲ ಕಾಳೆ, ಸಮಾಜದ ಸಂಯೋಜಕರಾದ ಪ್ರದೀಪ ಬಿರಾದಾರ, ಅಮರ ಜಾಧವ, ಗೋರಖ ಶ್ರೀಮಾಳೆ, ವಿದ್ಯಾವಾನ ಪಾಟೀಲ್‌ ಹಾಗೂ ಬಾಲಾಜಿ ವಾಡಿಕರ್‌ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

---

---ಬಾಕ್ಸ್‌----

ಸಾಮಾಜಿಕ ನ್ಯಾಯ, ರಾಜಕೀಯದಲ್ಲಿ

ಪ್ರಾತಿನಿಧ್ಯಕ್ಕೆ ಅವಕಾಶ: ಧರ್ಮಗುರು

ಸಮೀಕ್ಷೆಯಲ್ಲಿ ಪ್ರತಿ ಕುಟುಂಬದ ಸದಸ್ಯರ ಶಿಕ್ಷಣ, ಉದ್ಯೋಗ, ಕೃಷಿ, ಆರೋಗ್ಯ, ಆರ್ಥಿಕ ಸ್ಥಿತಿ ಸೇರಿದಂತೆ ವಿವಿಧ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತದೆ. ಬಡವರು, ನಿರುದ್ಯೋಗಿಗಳು, ಕಾರ್ಮಿಕರು, ಕೃಷಿಕರು, ವಿಧವೆಯರು, ನಿರಾಶ್ರಿತ ಮಹಿಳೆಯರು ಹಾಗೂ ವಿಶೇಷಚೇತನರ ಸ್ಥಿತಿಗತಿಗಳ ಬಗ್ಗೆಯೂ ಮಾಹಿತಿ ಪಡೆಯಲಾಗುವುದು.

ಸರ್ಕಾರದ ವಿವಿಧ ಯೋಜನೆಗಳು ಹಾಗೂ ಸೌಲಭ್ಯಗಳು ಸಮುದಾಯದ ಜನರಿಗೆ ಎಷ್ಟರ ಮಟ್ಟಿಗೆ ತಲುಪಿವೆ ಎಂಬುದನ್ನು ತಿಳಿಯಲು ಬಿಪಿಎಲ್‌, ಎಪಿಎಲ್‌ ಸೇರಿದಂತೆ ಇತರ ವಿವರಗಳನ್ನು ಸಹ ದಾಖಲಿಸಲಾಗುತ್ತದೆ. ಈ ಅಂಕಿ ಅಂಶಗಳು ಭವಿಷ್ಯದಲ್ಲಿ ಸಮುದಾಯದ ಸಾಮಾಜಿಕ ನ್ಯಾಯ, ಮೀಸಲಾತಿ ಹಾಗೂ ರಾಜಕೀಯ ಪ್ರಾತಿನಿಧ್ಯಕ್ಕೆ ಸಂಬಂಧಿಸಿದ ಬೇಡಿಕೆಗಳಿಗೆ ಆಧಾರವಾಗಲಿವೆ ಎಂದು ಕ್ಷತ್ರಿಯ ಮರಾಠ ಸಮಾಜದ ಧರ್ಮಗುರು ದಾದಾ ಮಹಾರಾಜ ನಗರಕರ್‌ ಹೇಳಿದರು.