ಕನ್ನಡಪ್ರಭವಾರ್ತೆ, ಸೋಮವಾರಪೇಟೆ

ಜೇನು ಕುರುಬರ ಜೀವನ ಶೈಲಿ ಆಧಾರಿತ ಕನ್ನಡ ಚಲನಚಿತ್ರದ ಚಿತ್ರೀಕರಣಕ್ಕೆ ಮಾಜಿ ಕ್ರೀಡಾ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಚಾಲನೆ ನೀಡಿದರು.ಕೊಡಗಿನ ರೂಪಾಮೋಹನ್ ಸೃಷ್ಟಿ ಸಿನಿಮಾಸ್ ಲಾಂಛನದಲ್ಲಿ ನಿರ್ಮಿಸಿ, ನಿರ್ದೇಶಿಸುತ್ತಿರುವ ಜೇನುಬೇಲಿ ಚಿತ್ರದ ಚಿತ್ರೀಕರಣಕ್ಕೆ ಪಟ್ಟಣದ ಸೋಮೇಶ್ವರ ದೇವಾಲಯದಲ್ಲಿ ಚಾಲನೆನೀಡಿ ಮಾತನಾಡಿದ ಅವರು, ಕನ್ನಡ ಚಿತ್ರರಂಗ ವನ್ನು ಉಳಿಸಿ ಬೆಳೆಸಬೇಕಾದರೆ ಜನರು ಚಿತ್ರಮಂದಿರಗಳಿಗೆ ತೆರಳಿ ನೋಡಬೇಕು. ಕರ್ನಾಟಕದಲ್ಲಿ ಪ್ರತಿಭೆಗಳಿಗೆ ಕೊರತೆಯಿಲ್ಲ ಇಲ್ಲಿ ಸಾಕಷ್ಟು ಚಿತ್ರಗಳು ನಿರ್ಮಾಣವಾಗುತ್ತಿದೆ, ಆಗಬೇಕು ಕೂಡ. ಎಂದರು.ಕೊಡಗು ಜಿಲ್ಲೆಯ ಮೂಲದವರಾದ ರೂಪ ಮೋಹನ್ ಉತ್ತಮ ಕಥೆಯನ್ನು ಆಯ್ಕೆಮಾಡಿಕೊಂಡು ಸಿನಿಮಾ ಮಾಡಲು ಹೊರಟಿರುವುದು ಶ್ಲಾಘನೀಯ ಎಂದು ಈ ಸಂದರ್ಭ ಹೇಳಿದರು.ಚಿತ್ರದ ನಿರ್ಮಾಪಕಿ, ನಿರ್ದೇಶಕಿ ರೂಪಮೋಹನ್ ಮಾತನಾಡಿ ಜೇನು ಕುರುಬರ ಜೀವನಶೈಲಿ ಮತ್ತು ಅವರ ನೋವು ನಲಿವುಗಳ ಕಥೆಯನ್ನು ಕಲಾತ್ಮಕ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆ ಈ ಚಿತ್ರವನ್ನು ಬಹುತೇಕ ಕೊಡಗಿನಲ್ಲಿಯೇ ಚಿತ್ರಿಕರಿಸಲಾಗುವುದು ಎಂದು ತಿಳಿಸಿದರು.ಗಿರಿಜನರ ಬದುಕಿನ ಬಗ್ಗೆ ಬೆಳಕು ಚೆಲ್ಲುವ ಪೂರ್ಣ ಪ್ರಮಾಣದ ಎರಡು ಗಂಟೆಯ ಚಿತ್ರವಾಗಿದ್ದು, ಬಹುತೇಕ ಚಿತ್ರೀಕರಣ ಕೊಡಗಿನಲ್ಲೆ ನಡೆಯಲಿದೆ. ಗಿರಿಜನರ ಹಾಡಿಗಳಲ್ಲಿ ಅವಶ್ಯಕವಿರುವಷ್ಟು ಚಿತ್ರೀಕರಣ ಮಾಡಲಾಗುವುದು. ಚಿತ್ರದಲ್ಲಿ ಮೂರು ಹಾಡುಗಳಿರುತ್ತವೆ. ಒಂದು ಹಾಡಿಗೆ ಗಿರಿಜನರೆ ನುಡಿಸುವ ಸಂಗೀತವನ್ನು ಅಳವಡಿಸಿಕೊಳ್ಳಲಾಗುತ್ತದೆ ಎಂದರು.ಸುಮಾರು 70 ವರ್ಷಗಳಿಂದಲೂ ಗಿರಿಜನರು ಕಾಡಿನ ಸರಹದ್ದಿನಲ್ಲಿ ಬದುಕುತ್ತಿದ್ದಾರೆ. ಅವರ ಬದುಕು, ಆರೋಗ್ಯ, ಶಿಕ್ಷಣ, ಆಹಾರ ಪದ್ಧತಿ, ಅವರ ಸಂಪ್ರಾದಾಯಗಳು, ನೃತ್ಯ, ಆಚರಿಸುವ ಹಬ್ಬ ಹರಿದಿನಗಳು ಇಂತಹ ವಿಷಯಗಳ ಬಗ್ಗೆ ಬೆಳಕು ಚೆಲ್ಲಲಾಗುವುದು ಎಂದು ಹೇಳಿದರು. ಕಥೆ ಮತ್ತು ಚಿತ್ರಕಥೆ ಜೆ.ಎಂ.ಪ್ರಹ್ಲಾದ್, ಸಹಾಯಕ ನಿರ್ದೇಶನ ಶರತ್ ಬಿಳಿನೆಲೆ, ಛಾಯಗ್ರಾಹಣ ಸಂದೀಪ್ ಹೊನ್ನಾಳಿ, ಅದ್ವಿಕ್ ಸಂಗೀತ ನಿರ್ದೇಶನ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.ಚಿತ್ರೀಕರಣ ಮಹೂರ್ತ ಸಂದರ್ಭ ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ಬೇಳೂರು ಕಾಫಿ ಬೆಳೆಗಾರರಾದ ಬಿ.ಜಿ.ಗುರುಮಲ್ಲೇಶ, ಕೆ.ಎಂ.ನಿರಂಜನ್, ಬೇಳೂರು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸುದರ್ಶನ್ ಪ್ರಮುಖರಾದ ಸೋಮೇಶ್ ಹಾಜರಿದ್ದರು.