ಜನಮುಖಿ ಸಮಾಜ ಕಟ್ಟಲು ಹೋರಾಡಿದ ಅಪ್ಪಣ್ಣ

| Published : Jul 24 2024, 12:22 AM IST

ಸಾರಾಂಶ

ಹಡಪದ ಅಪ್ಪಣ್ಣನವರ ಕಸುಬುದಾರರು, ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಅಸ್ಪೃಷ್ಯರು, ಅಕ್ಷರಜ್ಞಾನವನ್ನು, ವೈಚಾರಿಕ ಮನೋಭಾವವನ್ನು, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು, ಪ್ರತಿಭಟನೆಯ ಕಿಚ್ಚನ್ನು ಪಡೆಯಲು ಸಾಹಿತ್ಯವನ್ನು ಮಾಧ್ಯಮವನ್ನಾಗಿ ಮಾಡಿಕೊಂಡರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಹನ್ನೆರಡನೆ ಶತಮಾನದಲ್ಲಿ ನಡೆದ ವಚನ ಚಳವಳಿಯಲ್ಲಿ ದುಡಿಯುವ ವರ್ಗದವರನ್ನು ಜಾತಿಯ ಹೆಸರಿನಲ್ಲಿ ಶೋಷಣೆಗೆ ಒಳಪಡಿಸಿದ್ದರಿಂದ ಶ್ರಮಜೀವಿಗಳೆಲ್ಲರೂ ಒಂದಾಗಿ ಅಂದಿನ ವ್ಯವಸ್ಥೆಯ ವಿರುದ್ಧ ಹೋರಾಟ ನಡೆಸಿ, ಜನಮುಖಿ ಸಮಾಜವನ್ನು ನಿರ್ಮಿಸಲು ಅಸಂಖ್ಯಾತ ಶರಣರ ನೇತೃತ್ವದಲ್ಲಿ ನಡೆದ ಈ ಚಳವಳಿಯ ಪ್ರಮುಖ ಹರಿಕಾರರಲ್ಲಿ ಹಡಪದ ಅಪ್ಪಣ್ಣನವರು ಒಬ್ಬರು ಎಂದು ಜಿಲ್ಲಾಧಿಕಾರಿ ಡಾ.ಪಿ.ಎನ್ ರವೀಂದ್ರ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ನಡೆದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಹಡಪದ ಅಪ್ಪಣ್ಣನವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ಹಡಪದ ಅಪ್ಪಣ್ಣನವರ ಕಸುಬುದಾರರು, ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಅಸ್ಪೃಷ್ಯರು, ಅಕ್ಷರಜ್ಞಾನವನ್ನು, ವೈಚಾರಿಕ ಮನೋಭಾವವನ್ನು, ಅಭಿವ್ಯಕ್ತಿ ಸ್ವಾತಂತ್ರ್ಯವನ್ನು, ಪ್ರತಿಭಟನೆಯ ಕಿಚ್ಚನ್ನು ಪಡೆಯಲು ಸಾಹಿತ್ಯವನ್ನು ಮಾಧ್ಯಮವನ್ನಾಗಿ ಮಾಡಿಕೊಂಡರು. ಅವರ ವಚನಗಳ ಮತ್ತು ವಿಚಾರಧಾರೆಗಳು ಸಾಮಾಜದ ಸರ್ವತೋಮುಖ ವಿಕಾಸಕ್ಕೆ ಒಂದು ಸಂಜೀವಿನಿಯಾಗಿದೆ ಎಂದು ತಿಳಿಸಿದರು. ಬಸವಣ್ಣನವರು ತಮ್ಮ ಆಪ್ತಕಾರ್ಯದರ್ಶಿಯನ್ನಾಗಿ ಹಡಪದ ಅಪ್ಪಣ್ಣನವರನ್ನೇ ಆಯ್ಕೆ ಮಾಡಿಕೊಂಡಿದ್ದರು. ಅಪ್ಪಣ್ಣ ಎತ್ತರೆತ್ತರಕ್ಕೆ ಬೆಳೆದ ಪರಿ ಅದ್ಬುತ. ಕಷ್ಟ ಸುಖಗಳೆರಡರಲ್ಲೂ ಅಪ್ಪಣ್ಣ ಬಸವಣ್ಣನವರಿಗೆ ಸಮಭಾಗಿಯಾಗಿದ್ದರು ಎಂದರು.

ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ಎನ್ ಭಾಸ್ಕರ್, ಉಪವಿಭಾಗಾಧಿಕಾರಿ ಅಶ್ವಿನ್, ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಈಶ್ವರಪ್ಪ, ಸವಿತಾ ಸಮಾಜದ ಜಿಲ್ಲಾಧ್ಯಕ್ಷ ರಾಘವೇಂದ್ರ, ತಾಲ್ಲೂಕು ಅಧ್ಯಕ್ಷ ನಟರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ. ರವಿಕುಮಾರ್ ಮತ್ತು ಸವಿತಾ ಸಮಾಜದ ಮುಖಂಡರು, ಪದಾಧಿಕಾರಿಗಳು ಇದ್ದರು.