ಡಿಸಿಸಿ ಬ್ಯಾಂಕ್‌ಗೆ ಅಪ್ಪಾಸಾಹೇಬ್‌ ನೂತನ ಅಧ್ಯಕ್ಷ

| Published : Nov 14 2024, 12:45 AM IST / Updated: Nov 14 2024, 12:46 AM IST

ಡಿಸಿಸಿ ಬ್ಯಾಂಕ್‌ಗೆ ಅಪ್ಪಾಸಾಹೇಬ್‌ ನೂತನ ಅಧ್ಯಕ್ಷ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಗಾವಿ ಡಿಸಿಸಿ ಬ್ಯಾಂಕ್‌‌ ಅಧ್ಯಕ್ಷ ಸ್ಥಾನಕ್ಕೆ ನೂತನ ಅಧ್ಯಕ್ಷರಾಗಿ ರಾಯಬಾಗ ಮೂಲದ ಅಪ್ಪಾಸಾಹೇಬ್ ಕುಲಗೋಡೆ ಅವರು ಅವಿರೋಧವಾಗಿ ಆಯ್ಕೆಯಾದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿ ಡಿಸಿಸಿ ಬ್ಯಾಂಕ್‌‌ ಅಧ್ಯಕ್ಷ ಸ್ಥಾನಕ್ಕೆ ನೂತನ ಅಧ್ಯಕ್ಷರಾಗಿ ರಾಯಬಾಗ ಮೂಲದ ಅಪ್ಪಾಸಾಹೇಬ್ ಕುಲಗೋಡೆ ಅವರು ಅವಿರೋಧವಾಗಿ ಆಯ್ಕೆಯಾದರು. ಈ ಮೂಲಕ ತೀವ್ರ ಕುತೂಹಲ ಕೆರಳಿಸಿದ್ದ ಅಧ್ಯಕ್ಷರ ಆಯ್ಕೆಗೆ ಅಚ್ಚರಿ ಹೆಸರು ಕೂಡ ಸೇರ್ಪಡೆಯಾಗಿದ್ದು ಎಲ್ಲರ ಹುಬ್ಬೇರುವಂತಾಗಿದೆ. ಈ ಮೂಲಕ ಮುಂದಿನ ಒಂಬತ್ತು ತಿಂಗಳ ಕಾಲದವರೆಗಿನ ಅಧ್ಯಕ್ಷರಾಗಿ ಅಪ್ಪಾಸಾಹೇಬ್‌ ಅವರೇ ಆಡಳಿತ ನಡೆಸಲಿದ್ದಾರೆ.

ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿರುವ, ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರ ಆಪ್ತ ವಲಯದ ಅಪ್ಪಾಸಾಹೇಬ್‌ ಅವರ ಆಯ್ಕೆ ಅನಿರೀಕ್ಷಿತ ಎಂದೇ ಹೇಳಲಾಗುತ್ತಿದೆ. ಜಾರಕಿಹೊಳಿ ಬ್ರದರ್ಸ್ ನೇತೃತ್ವದಲ್ಲಿ ಬುಧವಾರ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ ನೂತನ ಅಧ್ಯಕ್ಷರ ಆಯ್ಕೆಯನ್ನು ಪ್ರಕಟಿಸಲಾಯಿತು. ಇದಕ್ಕೆ ಎಲ್ಲ ನಿರ್ದೇಶಕರು ಕೂಡ ಸಹಮತ ವ್ಯಕ್ತಪಡಿಸುವ ಮೂಲಕ ಒಮ್ಮತದ ಅಭ್ಯರ್ಥಿ ಹೆಸರು ಸಚಿವ ಸತೀಶ್ ಜಾರಕಿಹೊಳಿ ಘೋಷಣೆ ಮಾಡಿದರು. ಜತೆಗೆ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾಗಿ ಸುಭಾಷ ಡವಳೇಶ್ವರ ಮುಂದುವರಿಯುವುದಾಗಿಯೂ ತಿಳಿಸಿದರು.

ಈ ಮೂಲಕ ಇದುವರೆಗೆ ಬಿಜೆಪಿ ಪ್ರಾಬಲ್ಯವಿದ್ದು ಬಿಡಿಸಿಸಿ ಬ್ಯಾಂಕ್‌ನಲ್ಲಿ ಈಗ ಕಾಂಗ್ರೆಸ್‌ ತನ್ನ ಅಸ್ತಿತ್ವ ಸಾಧಿಸಿದಂತಾಗಿದೆ. ಮಾತ್ರವಲ್ಲ, ಡಿಸಿಸಿ ಬ್ಯಾಂಕ್‌ನಲ್ಲಿ ಪರೋಕ್ಷವಾಗಿ ಜಾರಕಿಹೊಳಿ ಬ್ರದರ್ಸ್‌ ತಮ್ಮ ಹಿಡಿತವನ್ನು ಕೂಡ ಪರೋಕ್ಷವಾಗಿ ಹಿಡಿದಂತಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಕಳೆದ 10 ವರ್ಷಗಳಿಂದ ಕತ್ತಿ ಸಹೋದರರ ಕೈಯಲ್ಲಿದ್ದ ಬಿಡಿಸಿಸಿ ಬ್ಯಾಂಕ್‌ ಈಗ ಜಾರಕಿಹೊಳಿ ಅವರ ಆಪ್ತ ವಲಯಕ್ಕೆ ಹಸ್ತಾಂತರವಾದಂತಾಗಿದೆ.

ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ಆಯ್ಕೆಯಾಗುವ ಸಾಧ್ಯತೆ ಇದೆ ಎಂದೇ ವಿಶ್ಲೇಷಿಸಲಾಗಿತ್ತು. ಇವರ ಜತೆಗೆ ಮಹಾಂತೇಶ ದೊಡ್ಡಗೌಡರ, ಸುಭಾಷ ಢವಳೇಶ್ವರ ಅವರ ಹೆಸರು ಕೂಡ ಚಾಲ್ತಿಯಲ್ಲಿದ್ದವು. ಆದರೆ, ಅಚ್ಚರಿ ಎಂಬಂತೆ ಅಪ್ಪಾಸಾಹೇಬ್‌ ಕುಲಗೋಡೆ ಅವರ ಹೆಸರು ಅಂತಿಮವಾಗಿರುವುದು ಹಲವು ವಿಶ್ಲೇಷಣೆಗೂ ಕಾರಣವಾಗಿದೆ.

ತೀವ್ರ ಕುತೂಹಲ ಮೂಡಿಸಿದ್ದ ಚುನಾವಣೆ:ಬೆಳಗಾವಿ ಜಿಲ್ಲೆಯ ರಾಜ್ಯದಲ್ಲೇ ದೊಡ್ಡದಿದೆ. ಜತೆಗೆ ಇಲ್ಲಿ ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಸ್ಥಾನ ಹಿಡಿಯುವುದು ಕೂಡ ಸಚಿವ ಸ್ಥಾನದಷ್ಟೇ ಪ್ರಾಬಲ್ಯವೂ ಹೌದು. ಈ ಕಾರಣಕ್ಕೆ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಸ್ಥಾನದ ಚುನಾವಣೆ ತೀವ್ರರ ಕುತೂಹಲ ಮೂಡಿಸಿತ್ತು. ಇದುವರೆಗೆ ದಿ.ಉಮೇಶ ಕತ್ತಿ ಮತ್ತು ಮಾಜಿ ಸಂಸದ ರಮೇಶ ಕತ್ತಿ ಅವರ ಹಿಡಿತದಲ್ಲಿದ್ದ ಬಿಡಿಸಿಸಿ ಬ್ಯಾಂಕ್‌ ಈಗ ಸಂಪೂರ್ಣ ಅವರ ಕೈತಪ್ಪಿ ಹೋಗಿತ್ತು. ಈ ಕಾರಣಕ್ಕಾಗಿಯೇ ಅ.4ರಂದು ರಮೇಶ ಕತ್ತಿ ಅವರು ರಾಜೀನಾಮೆ ನೀಡಿದ್ದರು. ಅಧ್ಯಕ್ಷ ಸ್ಥಾನದ ಆಯ್ಕೆಗೂ ಮೊದಲು ಹಲವಾರು ಸುತ್ತಿನ ಮಾತುಕತೆ, ಸಭೆಗಳು ಕೂಡ ನಡೆದವು. ಅಲ್ಲದೆ, ಇದೆ ಮೊದಲ ಬಾರಿಗೆ ಡಿಸಿಸಿ ಬ್ಯಾಂಕ್ ಚುನಾವಣೆ ಅಖಾಡಕ್ಕೆ ಸಚಿವ ಸತೀಶ್ ಜಾರಕಿಹೊಳಿ ಕೂಡ ಪ್ರವೇಶಿಸಿದ್ದಾರೆ. ಬೆಳಗಾವಿಯ ಸಂಕಮ್‌ ಹೋಟೆಲ್‌‌ಗೆ ಆಗಮಿಸಿದ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಸಹೋದರ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ ನಿರ್ದೇಶಕರ ಸಭೆಯಲ್ಲಿ ಒಮ್ಮತದ ಅಭ್ಯರ್ಥಿ ಆಯ್ಕೆ ಬಗ್ಗೆ ಚರ್ಚೆ ನಡೆಸಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಜಾರಕಿಹೊಳಿ ಬ್ರದರ್ಸ್ ನೇತೃತ್ವದಲ್ಲಿ ಬುಧವಾರ ನಡೆದ ಡಿಸಿಸಿ ಬ್ಯಾಂಕ್‌ ನಿರ್ದೇಶಕರ ಸಭೆಗೆ ಅಥಣಿ ಕ್ಷೇತ್ರದ ಶಾಸಕ ಲಕ್ಷ್ಮಣ ಸವದಿ, ಸಚಿವ ಸತೀಶ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ರಮೇಶ ಜಾರಕಿಹೊಳಿ, ಅಣ್ಣಾಸಾಹೇಬ ಜೊಲ್ಲೆ, ಸುಭಾಷ ಢವಳೇಶ್ವರ, ಮಹಾಂತೇಶ ದೊಡ್ಡಗೌಡರ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.ಎಲ್ಲ ರೈತರಿಗೂ ಈ ಮೊದಲಿನಂತೆಯೇ ಸವಲತ್ತುಗಳನ್ನು ಕೊಡುವ ವ್ಯವಸ್ಥೆ ಮಾಡುತ್ತೇವೆ. ಎಲ್ಲರೂ ಪಕ್ಷಾತೀತವಾಗಿ ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ. ಎಲ್ಲ ನಿರ್ದೇಶಕರ ಸಹಕಾರದಿಂದ ಉತ್ತಮ ಕೆಲಸ ಮಾಡುತ್ತೇವೆ. ಎಲ್ಲರೂ ಕೂಡಿಕೊಂಡೇ ಕೆಲಸ ಮಾಡುತ್ತೇವೆ.

- ಅಪ್ಪಾಸಾಹೇಬ ಕುಲಗೋಡೆ, ಡಿಸಿಸಿ ಬ್ಯಾಂಕ್‌ ನೂತನ ಅಧ್ಯಕ್ಷ