ಸಾರಾಂಶ
ಸಾಗರ: ನ್ಯಾಯವಾದಿ ಕೆ.ವಿ.ಪ್ರವೀಣ್ ಅವರಿಗೆ ಎದುರಿದಾರ ಕಕ್ಷಿದಾರರು ಬೆದರಿಕೆ ಹಾಕಿ ವಕೀಲರ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದನ್ನು ಖಂಡಿಸಿ ಬುಧವಾರ ವಕೀಲರ ಸಂಘದಿಂದ ಡಿವೈಎಸ್‌ಪಿ ಕಚೇರಿಗೆ ಮನವಿ ಸಲ್ಲಿಸಲಾಯಿತು.
ಸಾಗರ: ನ್ಯಾಯವಾದಿ ಕೆ.ವಿ.ಪ್ರವೀಣ್ ಅವರಿಗೆ ಎದುರಿದಾರ ಕಕ್ಷಿದಾರರು ಬೆದರಿಕೆ ಹಾಕಿ ವಕೀಲರ ಕರ್ತವ್ಯಕ್ಕೆ ಅಡ್ಡಿಪಡಿಸಿರುವುದನ್ನು ಖಂಡಿಸಿ ಬುಧವಾರ ವಕೀಲರ ಸಂಘದಿಂದ ಡಿವೈಎಸ್‌ಪಿ ಕಚೇರಿಗೆ ಮನವಿ ಸಲ್ಲಿಸಲಾಯಿತು.
ನ್ಯಾಯವಾದಿ ಕೆ.ವಿ.ಪ್ರವೀಣ್ ತಾಲೂಕಿನ ಕಸಬಾ ಹೋಬಳಿ ಬಿಳಿಸಿರಿ ಗ್ರಾಮದ ಸ.ನಂ. ೮೪ರಲ್ಲಿನ ೦.೨೦ ಗುಂಟೆ ವಿಸ್ತೀರ್ಣಕ್ಕೆ ದಾವೆಯಲ್ಲಿ ಮಧ್ಯಂತರ ಅರ್ಜಿ ಸಲ್ಲಿಸಿ ಹಂಗಾಮಿ ಪ್ರತಿಬಂಧಕಾಜ್ಞೆಯನ್ನು ತಮ್ಮ ಕಕ್ಷಿದಾರರ ಪರ ಕೋರಿದ್ದಾರೆ. ನ್ಯಾಯಾಲಯ ದಿನಾಂಕ ೨೯-೦೪-೨೦೨೫ರಂದು ಏಕತರ್ಪಿ ಹಂಗಾಮಿ ಪ್ರತಿಬಂಧಕಾಜ್ಞೆಯನ್ನು ಮುಂದಿನ ದಿನಾಂಕದವರೆಗೆ ನೀಡಿದೆ. ಈ ಕಾನೂನು ಪ್ರಕ್ರಿಯೆ ನಂತರ ಪ್ರತಿವಾದಿಗಳಿಗೆ ನೋಂದಾಯಿತ ಅಂಚೆ ಮೂಲಕ ನೋಟಿಸ್ ಕಳಿಸಲಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.ಈ ನೋಟಿಸ್‌ನ ಎದುರಿದಾರರಾದ ಬೆಳ್ಳಿಕೊಪ್ಪದ ರಮೇಶ್ ಮತ್ತು ಗಣೇಶ್ ಅವರು ದಿನಾಂಕ ೦೬-೦೫-೨೦೨೫ರಂದು ನ್ಯಾಯವಾದಿ ಕೆ.ವಿ.ಪ್ರವೀಣ್ ಅವರಿಗೆ ಕರೆ ಮಾಡಿ ನೋಟಿಸ್ ನೀಡಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಅವಾಚ್ಯಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆ. ಕೆ.ವಿ.ಪ್ರವೀಣ್ ಅವರಿಗೆ ಬೆದರಿಕೆ ಹಾಕಿದ ಧ್ವನಿಯು ಎದುರಿದಾರರಾದ ಗಣೇಶ್ ಧ್ವನಿ ಎನ್ನುವುದು ತಿಳಿದು ಬಂದಿದೆ. ಕಾನೂನು ಪ್ರಕಾರ ನ್ಯಾಯವಾದಿ ಕೆ.ವಿ.ಪ್ರವೀಣ್ ತಮ್ಮ ಕಕ್ಷಿದಾರರ ಪರ ನ್ಯಾಯಾಲಯದಿಂದ ಆದೇಶ ಮಾಡಿಸಿ, ರಮೇಶ್ ಮತ್ತು ಗಣೇಶ್ ಅವರಿಗೆ ನೋಟಿಸ್ ಜಾರಿ ಮಾಡಿಸಿದ್ದಾರೆ ಎಂದು ತಿಳಿಸಲಾಗಿದೆ.ನೋಟಿಸ್ ತಲುಪಿದ ನಂತರ ಫೋನ್ ಮೂಲಕ ವಕೀಲರಿಗೆ ಬೆದರಿಕೆ ಹಾಕಿ ವಕೀಲ ವೃತ್ತಿಯನ್ನು ನಿರ್ಭಯವಾಗಿ ನಡೆಸಲು ಅಡ್ಡಿ ಉಂಟು ಮಾಡಲಾಗಿದೆ. ಈ ಸಂಬಂಧ ಬೆದರಿಕೆ ಹಾಕಿದವರ ಮೇಲೆ ಆನಂದಪುರ ಠಾಣೆಯಲ್ಲಿ ದೂರು ನೀಡಲಾಗಿದೆ. ತಕ್ಷಣ ಕೆ.ವಿ.ಪ್ರವೀಣ್ ಅವರಿಗೆ ಬೆದರಿಕೆ ಹಾಕಿದವರನ್ನು ಬಂಧಿಸಿ ಸೂಕ್ತ ಕಾನೂನುಕ್ರಮ ಜರುಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. ವಕೀಲರ ಸಂಘದ ಅಧ್ಯಕ್ಷ ಗಿರೀಶ್ ಗೌಡ.ಎಂ.ಬಿ, ಕಾರ್ಯದರ್ಶಿ ಶೇಖರಪ್ಪ, ನ್ಯಾಯವಾದಿಗಳಾದ ಕೆ.ವಿ.ಪ್ರವೀಣ್, ವಿನಯಕುಮಾರ್, ಸತೀಶ್ ಕುಮಾರ್, ಶ್ರೀಧರ್ ಎಚ್.ಆರ್., ನಾಗರಾಜ್ ಈ., ಚಂದ್ರಶೇಖರ್ ಇನ್ನಿತರರು ಹಾಜರಿದ್ದರು.