ಸಾರಾಂಶ
ಹಿರೇಮಠ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಮಂಗಳವಾರ ಎಸ್ಪಿ ಕಚೇರಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹೇಮಂತ ಕುಮಾರ್ ಅವರನ್ನು ಭೇಟಿಯಾಗಿ, ದಾಖಲೆಗಳೊಂದಿಗೆ ಸಂಸ್ಥೆಯ ಪದಾಧಿಕಾರಿಗಳು ಮನವಿ ಸಲ್ಲಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಕೊಪ್ಪಳ
ಕಲಬುರಗಿ ಕೊತ್ತಲಬಸವೇಶ್ವರ ಸಂಸ್ಥೆಯ ಹಣ ದುರುಪಯೋಗ ಮಾಡಿಕೊಂಡಿರುವ ಹಿನ್ನೆಲೆ ಕೊಪ್ಪಳದ ಸಿದ್ದಲಿಂಗಯ್ಯ ಹಿರೇಮಠ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಮಂಗಳವಾರ ಎಸ್ಪಿ ಕಚೇರಿಯಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹೇಮಂತ ಕುಮಾರ್ ಅವರನ್ನು ಭೇಟಿಯಾಗಿ, ದಾಖಲೆಗಳೊಂದಿಗೆ ಸಂಸ್ಥೆಯ ಪದಾಧಿಕಾರಿಗಳು ಮನವಿ ಸಲ್ಲಿಸಿದ್ದಾರೆ.ತಾಲೂಕಿನ ಅಳವಂಡಿ ವಿನೂತನ ಶಿಕ್ಷಣ ಸೇವಾ ಸಂಸ್ಥೆ ಅಧ್ಯಕ್ಷ ಸಿದ್ದಲಿಂಗಯ್ಯ ಹಿರೇಮಠ ಕೊತ್ತಲಬಸವೇಶ್ವರ ನೀಡುವ ಅನುದಾನವನ್ನು ದುರುಪಯೋಗ ಮಾಡಿಕೊಂಡಿದ್ದು, ಅಲ್ಲದೆ ಹಣ ಬಳಕೆಯ ಮಾಹಿತಿ ಸಹ ನೀಡಿಲ್ಲ. ನೋಟಿಸ್‌ಗೂ ಸಹ ಉತ್ತರ ನೀಡಿಲ್ಲವಾದ್ದರಿಂದ ಅವರ ವಿರುದ್ಧ ಕಾನೂನು ಕ್ರಮವಹಿಸುವಂತೆ ಕೋರಲಾಗಿದೆ.
ವಿನೂತನ ಶಿಕ್ಷಣ ಸೇವಾ ಸಂಸ್ಥೆಯು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಜತೆಗೆ ಕಾರ್ಯಕ್ರಮ ಅನುಷ್ಠಾನ ಮಾಡಲು ಒಪ್ಪಂದ ಮಾಡಿಕೊಂಡಿದೆ.ಈವರೆಗೆ ₹೨,೨೧,೯೫,೦೦೦ ಅನುದಾನ ನೀಡಲಾಗಿದ್ದು, ಇದರ ಲೆಕ್ಕಪತ್ರ ಸಹ ನೀಡಿಲ್ಲ. ಬಳಕೆಯಾಗದೆ ಇರುವ ಹಣವನ್ನು ಸಹ ವಾಪಸ್ಸು ನೀಡಿಲ್ಲ. ವಿವಿಧ ತಾಲೂಕುವಾರು ಸಿಬ್ಬಂದಿಗೆ ನೀಡಬೇಕಾಗಿದ್ದ ಪಿ.ಎಫ್ ಮತ್ತು ಹಲವು ತಿಂಗಳ ಗೌರವಧನ ಕೂಡ ನೀಡದೆ ವಂಚನೆ ಮಾಡಿರುವ ಸಿದ್ದಲಿಂಗಯ್ಯ ಹಿರೇಮಠ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದಡಿ ಕಾರ್ಯ ನಿರ್ವಹಿಸಿದ್ದ ನೌಕರರು ಒತ್ತಾಯಿಸಿದ್ದಾರೆ.
ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಮಾಜಿ ನಿರ್ದೇಶಕ ವಿ.ಎಂ. ಭೂಸನೂರುಮಠ, ಜಿಲ್ಲಾ ಮಾಜಿ ಸಂಯೋಜಕ ಶರಣಪ್ಪ ವೈ. ಸಿಂದೋಗಿ, ರವಿಕುಮಾರ, ತಾಲೂಕು ಮಾಜಿ ಸಂಯೋಜಕರಾದ ವೀರೇಶ ಹಾಲಗುಂಡಿ, ವಿಶ್ವನಾಥ, ಪರಶುರಾಮ, ದೊಡ್ಡನಗೌಡ ಸೇರಿದಂತೆ ಇತರರಿದ್ದರು.