ಬೆಳೆಹಾನಿ ಪರಿಹಾರಕ್ಕೆ ಆಗ್ರಹಿಸಿ ಮನವಿ

| Published : Sep 25 2025, 01:00 AM IST

ಸಾರಾಂಶ

ಕೃಷಿ ಇಲಾಖೆ, ಕಂದಾಯ ಇಲಾಖೆ ಜಂಟಿ ಸಮೀಕ್ಷೆ ನಡೆಸಿ, ಹೆಸರು ಬೆಳೆ ಹಾಗೇ ಕೆಲ ಪ್ರದೇಶದ ಮೆಣಸಿನಕಾಯಿ ಬೆಳೆಹಾನಿಯಾದ ಬಗ್ಗೆ ರೈತರ ಪಟ್ಟಿಯನ್ನು ತಯಾರಿಸಿದ್ದಾರೆ.

ಮುಳಗುಂದ: ಅಕಾಲಿಕ ಮಳೆಯಿಂದ ಮುಂಗಾರು ಬೆಳೆಹಾನಿಯಾಗಿದ್ದು, ಪರಿಹಾರ ಪರಿಹಾರ ಒದಗಿಸುವಂತೆ ಒತ್ತಾಯಿಸಿ ಸ್ಥಳೀಯ ರೈತ ಸಂಘದಿಂದ ಬುಧವಾರ ಪಟ್ಟಣಕ್ಕೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್‌.ಕೆ. ಪಾಟೀಲ ಅವರಿಗೆ ಮನವಿ ಸಲ್ಲಿಸಲಾಯಿತು.

ಪಟ್ಟಣದ ವ್ಯಾಪ್ತಿಯಲ್ಲಿ ಮುಂಗಾರು ವೇಳೆ ಬಿತ್ತನೆ ಮಾಡಿದ ಹೆಸರು, ಗೋವಿನಜೋಳ, ಶೇಂಗಾ, ಮೆಣಸಿನಕಾಯಿ, ಹತ್ತಿ ಬೆಳೆಗಳು ಆಗಸ್ಟ್‌ನಲ್ಲಿ ಸುರಿದ ಅಕಾಲಿಕ ಮಳೆಯಿಂದ ತೇವಾಂಶ ಹೆಚ್ಚಾಗಿ ಎಲ್ಲ ಬೆಳೆಗಳು ಹಾನಿಯಾಗಿವೆ. ಆದರೆ ಕೃಷಿ ಇಲಾಖೆ, ಕಂದಾಯ ಇಲಾಖೆ ಜಂಟಿ ಸಮೀಕ್ಷೆ ನಡೆಸಿ, ಹೆಸರು ಬೆಳೆ ಹಾಗೇ ಕೆಲ ಪ್ರದೇಶದ ಮೆಣಸಿನಕಾಯಿ ಬೆಳೆಹಾನಿಯಾದ ಬಗ್ಗೆ ರೈತರ ಪಟ್ಟಿಯನ್ನು ತಯಾರಿಸಿದ್ದಾರೆ. ಆದರೆ ರೈತರ ಎಲ್ಲ ಬೆಳೆಗಳು ಹಾನಿಯಾಗಿದ್ದು, ಈ ಬಗ್ಗೆ ಮರುಸಮೀಕ್ಷೆ ನಡೆಸಿ, ಬೆಳೆಹಾನಿ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿದ ಸಚಿವರು, ಕೃಷಿ ಇಲಾಖೆ ಅಧಿಕಾರಿಗಳು ಸಮೀಕ್ಷೆ ನಡೆಸಿ ಸಲ್ಲಿಸಿದ ವರದಿಯನ್ನು ಅಂತಿಮ ಎಂದು ಪರಿಗಣಿಸಲಾಗುವುದಿಲ್ಲ. ಸರ್ಕಾರ ಮತ್ತೊಂದು ರೀತಿಯಲ್ಲಿ ಸ್ಯಾಟ್‌ಲೆಟ್‌, ಡ್ರೋನ್‌ ಮೂಲಕ ಪರಿಶೀಲಿಸುತ್ತದೆ. ಬಳಿಕ ಪರಿಹಾರ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಈ ವೇಳೆ ಮುಖಂಡರು, ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ರೈತರು ಇದ್ದರು. ಟಿಸಿ ಸ್ಥಳಾಂತರ ಮಾಡಲು ಗ್ರಾಮಸ್ಥರ ಮನವಿ

ನರಗುಂದ: ಕೊಣ್ಣೂರ ಗ್ರಾಮದ ಮಾರುತಿ ದೇವಸ್ಥಾನದ ಮುಂದಿನ ಟಿಸಿ ಸ್ಥಳಾಂತರ ಮಾಡಬೇಕೆಂದು ಗ್ರಾಮಸ್ಥರು ಹೆಸ್ಕಾಂ ಅಧಿಕಾರಿಗೆ ಮನವಿ ಆಗ್ರಹಿಸಿದರು.ಪಟ್ಟಣದ ಹೆಸ್ಕಾಂ ಕಚೇರಿಯಲ್ಲಿ ನಡೆದ ಗ್ರಾಹಕರ ಸಭೆಯಲ್ಲಿ ಗ್ರಾಮಸ್ಥರು ಹೆಸ್ಕಾಂ ಅಧಿಕಾರಿಗೆ ಟಿಸಿ ಸ್ಥಳಾಂತರ ಮಾಡಬೇಕೆಂದು ಮನವಿ ನೀಡಿ ಆನಂತರ ಗ್ರಾಮಸ್ಥರು ಮಾತನಾಡಿ, ಗ್ರಾಮದಲ್ಲಿ 4ನೇ ವಾರ್ಡ್‌ನ ವಿದ್ಯುತ್‌ ಪೂರೈಕೆ 11 ಕೆವಿ ತಂತಿ ಮತ್ತು ಟಿಸಿಯನ್ನು ಸ್ಥಳಾಂತರ ಮಾಡಬೇಕು. ಸದ್ಯ ಗ್ರಾಮಸ್ಥರು ಮಲ್ಲಿಕಾರ್ಜುನ ದೇವಸ್ಥಾನ ಕಟ್ಟಡವನ್ನು ಕಟ್ಟುತ್ತಿದ್ದಾರೆ. ಆದ್ದರಿಂದ ನಮಗೆ ದೇವಸ್ಥಾನ ಕಟ್ಟಡ ಕಟ್ಟಲು ತೊಂದರೆಯಾಗಿದೆ. ಹೆಸ್ಕಾಂ ಅಧಿಕಾರಿಗಳು ಬೇಗ ವಿದ್ಯುತ್ ತಂತಿ ಮತ್ತು ಟಿಸಿ ಸ್ಥಳಾಂತರ ಮಾಡದಿದ್ದರೆ ಕಟ್ಟಡ ಕಟ್ಟಲು ತೊಂದರೆಯಾಗುತ್ತದೆ ಎಂದರು.

ಹೆಸ್ಕಾಂ ಅಧಿಕಾರಿ ಗ್ರಾಮಸ್ಥರು ಮನವಿ ಸ್ವೀಕರಿಸಿ ಮಾತನಾಡಿ, ಆದಷ್ಟು ಬೇಗ ಸಿಬ್ಬಂದಿಯನ್ನು ಗ್ರಾಮಕ್ಕೆ ಕಳಿಸಿ ವಿದ್ಯುತ್ ತಂತಿ ಮತ್ತು ಟಿಸಿ ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳುತ್ತೇನೆ ಎಂದರು.ಈ ಸಂದಭದಲ್ಲಿ ಕರ್ನಾಟಕ ರಾಜ್ಯ ಸಂಘ ಹಾಗೂ ಹಸಿರುಸೇನೆ ತಾಲೂಕು ಅಧ್ಯಕ್ಷ ಉಮೇಶ ಮರ್ಚಪ್ಪನವರ, ಶಂಕರಗೌಡ ಶಿರಿಯಪ್ಪಗೌಡ್ರ, ಶಿವಪ್ಪ ವಾಲಿ, ಪರಪ್ಪ ಸಹಕಾರ, ಬಸಯ್ಯ ಹಿರೇಮಠ, ವೀರಣ್ಣ ಹುಲಿಕಟ್ಟಿ, ಪ್ರವೀಣ ಯಲಿಗಾರ, ಮಲ್ಲಿಕಾರ್ಜುನ ಟ್ರಸ್ಟ್ ಪದಾಧಿಕಾರಿಗಳು ಇದ್ದರು.