ಸಾರಾಂಶ
ಶಿಕ್ಷಕ ಎಂ.ಎಂ.ಸಿದ್ದಲಿಂಗಪ್ಪ ಅವರನ್ನು ಅಮಾನತುಗೊಳಿಸಬೇಕೆಂದು ಒತ್ತಾಯಿಸಿ ಶಾಲೆಯ ಎಸ್‌ಡಿಎಂಸಿ ಸದಸ್ಯರು ಮತ್ತು ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೋಮವಾರ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಸಿರುಗುಪ್ಪ
ನಗರದ ಆದರ್ಶ ಶಾಲೆಯ ಕನ್ನಡ ಶಿಕ್ಷಕನ ಪ್ರೇರಣೆಯಿಂದ ವಿದ್ಯಾರ್ಥಿಗಳ ಹೊಡೆದಾಟ ಪ್ರಕರಣ ನಡೆದಿದ್ದು, ಶಿಕ್ಷಕ ಎಂ.ಎಂ.ಸಿದ್ದಲಿಂಗಪ್ಪ ಅವರನ್ನು ಅಮಾನತುಗೊಳಿಸಬೇಕೆಂದು ಒತ್ತಾಯಿಸಿ ಶಾಲೆಯ ಎಸ್‌ಡಿಎಂಸಿ ಸದಸ್ಯರು ಮತ್ತು ಪೋಷಕರು ಕ್ಷೇತ್ರ ಶಿಕ್ಷಣಾಧಿಕಾರಿಗೆ ಸೋಮವಾರ ಮನವಿ ಸಲ್ಲಿಸಿದರು.ಕನ್ನಡ ಶಿಕ್ಷಕ ಎಂ.ಎಂ. ಸಿದ್ದಲಿಂಗಪ್ಪ ಅವರನ್ನು ತಾಲೂಕಿನ ಕೆ.ಬೆಳಗಲ್ ಸ.ಪ್ರೌ.ಶಾಲೆಗೆ ತಾತ್ಕಾಲಿಕವಾಗಿ ನಿಯೋಜನೆಗೊಳಿಸಿ ಆದೇಶಿಸಲಾಗಿದೆ ಎಂದು ಬಿಇಒ ಗುರಪ್ಪ ತಿಳಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಈ.ಎಸ್. ಮಂಜುನಾಥ್, ಪೋಷಕ ಎಂ.ಬಾಷಾ ಮತ್ತಿತರರಿದ್ದರು.
ಆದರ್ಶ ಶಾಲೆಯ ವಿದ್ಯಾರ್ಥಿಗಳ ತುಂಟಾಟ, ಪೋಷಕರ ಆಕ್ರೋಶ:ನಗರದ ಸಿದ್ದಪ್ಪ ನಗರದಲ್ಲಿರುವ ಆದರ್ಶ ವಿದ್ಯಾಲಯದ ಶಾಲೆಯ ವಿದ್ಯಾರ್ಥಿಗಳು ಆಟದ ಸಮಯದಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಮಾಡಿದ ತುಂಟಾಟ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವುದನ್ನು ಕಂಡು ಪೋಷಕರು ಕೆಂಡವಾಗಿದ್ದಾರೆ.ತರಗತಿಯ ಕೊಠಡಿಯಲ್ಲಿ ಒಬ್ಬ ವಿದ್ಯಾರ್ಥಿಯನ್ನು ಗುರಿಯಾಗಿಸಿಕೊಂಡು ಉಳಿದ ಎಲ್ಲ ವಿದ್ಯಾರ್ಥಿಗಳು ಅವನ ಮೇಲೆ ಆಕ್ರಮಣಕಾರಿ ದಾಳಿ ನಡೆಸುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.ಶಿಸ್ತು ಮತ್ತು ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಳ್ಳುವ ಆದರ್ಶ ಶಾಲೆಯಲ್ಲಿ ವಿದ್ಯಾರ್ಥಿಗಳು ಮನಬಂದಂತೆ ಅಸಭ್ಯವಾಗಿ ವರ್ತಿಸಿರುವುದು ಅಲ್ಲಿನ ಶಿಕ್ಷಕರ ನಿರ್ಲಕ್ಷ್ಯತೆಗೆ ಕೈಗನ್ನಡಿ ಹಿಡಿದಂತಾಗಿದೆ.
ಶಿಕ್ಷಕರ ಜವಾಬ್ದಾರಿ ಮತ್ತು ಅಲ್ಲಿನ ಶಾಲೆಯ ವಾತಾವರಣದ ಬಗ್ಗೆ ಪೋಷಕರಲ್ಲಿ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.