ಅರಣ್ಯ, ಕಂದಾಯ ಸಚಿವರಿಗೆ ಕೃಷಿ ಜಮೀನಿನಲ್ಲಿನ ಮರಗಳ ಕಟಾವಿಗೆ ಸರಳ ಸೂತ್ರಗಳನ್ನು ಅಳವಡಿಸಲು ಇಲ್ಲಿನ ವಾಸ್ತವ ಸಮಸ್ಯೆಗಳನ್ನು ತಿಳಿಸುವಂತೆ ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ ಪೂಜಾರ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ರೈತರು ಮನವಿ ಸಲ್ಲಿಸಿದರು.
ಹಾನಗಲ್ಲ: ಅರಣ್ಯ, ಕಂದಾಯ ಸಚಿವರಿಗೆ ಕೃಷಿ ಜಮೀನಿನಲ್ಲಿನ ಮರಗಳ ಕಟಾವಿಗೆ ಸರಳ ಸೂತ್ರಗಳನ್ನು ಅಳವಡಿಸಲು ಇಲ್ಲಿನ ವಾಸ್ತವ ಸಮಸ್ಯೆಗಳನ್ನು ತಿಳಿಸುವಂತೆ ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಾನಂದ ಪೂಜಾರ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ರೈತರು ಮನವಿ ಸಲ್ಲಿಸಿದರು. ಶನಿವಾರ ಪಟ್ಟಣದ ಅರಣ್ಯ ಇಲಾಖೆಗೆ ತೆರಳಿ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಾವೇರಿ ಜಿಲ್ಲಾ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ, ಎಂದೋ ರೂಪಿಸಿದ ಕಾನೂನುಗಳು ಇಂದು ಅನ್ವಯವಾಗುವುದಿಲ್ಲ. ಬದಲಾದ ಕಾಲಕ್ಕೆ ರೈತರಿಗೆ ಸಹಕಾರಿಯಾಗುವ ಕಾನೂನುಗಳನ್ನು ರೂಪಿಸಿ ಕೃಷಿ ಜಮೀನಿನಲ್ಲಿನ ಮರಗಳ ಕಟಾವಿಗೆ ಅನುಕೂಲ ಮಾಡಿ ಕೊಡಬೇಕು. ಅನಗತ್ಯವಾಗಿ ರೈತರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಯ ನಡುವೆ ಘರ್ಷಣೆಗೆ ಅವಕಾಶ ನೀಡಬಾರದು. ಅನಿವಾರ್ಯ ಸಂದರ್ಭದಲ್ಲಿ ಕಂದಾಯ ಇಲಾಖೆಯ ಮಾಹಿತಿ ಹಾಗೂ ಪರವಾನಗಿ ಪಡೆಯಲಿ. ಆದರೆ ಅನಗತ್ಯವಾಗಿ ಎಲ್ಲ ಪ್ರಕರಣಗಳಲ್ಲಿ ಕಂದಾಯ ಇಲಾಖೆಯ ಅನುಮತಿಗೆ ಒಳಪಡಿಸಿ ರೈತರನ್ನು ಗೋಳು ಹಾಕಿಕೊಳ್ಳುತ್ತಿರುವ ಕಾನೂನು ಬದಲಾಯಿಸಬೇಕು. ಮಹಾರಾಷ್ಟ್ರ ರಾಜ್ಯದಲ್ಲಿ ಒಂದೇ ವಾರದಲ್ಲಿ ಮರಗಳ ಕಟಾವಿಗೆ ಪರವಾನಗಿ ದೊರೆಯುತ್ತಿದೆ. ಅಲ್ಲಿ ಕಂದಾಯ ಇಲಾಖೆಯ ಪರವಾನಗಿ ಅಗತ್ಯವಿಲ್ಲ. ಹಾಗೆಯೇ ರಾಜ್ಯದಲ್ಲಿಯೂ ಆಗಬೇಕು ಎಂದರು. ಹಾನಗಲ್ಲ ತಾಲೂಕಿನಲ್ಲಿರುವ ಕೃಷಿ ಜಮೀನಿನಲ್ಲಿ ರೈತರ ಗಿಡಗಳ ಕಟಾವಿಗೆ ಇರುವ ಕಾನೂನು ರೈತರನ್ನು ಕಂಗೆಡಿಸಿದೆ. ಅನುಮತಿ ಪಡೆಯಲಾಗದೇ ಕೃಷಿ ಭೂಮಿಯೂ ಹಾಳಾಗುತ್ತಿದೆ. ಸರ್ಕಾರ ಶೀಘ್ರ ಈ ನಿಯಮ ಬದಲಾಯಿಸಿ ರೈತರಿಗೆ ಅನುಕೂಲ ಮಾಡಿ ಕೊಡಬೇಕು. ಅನಗತ್ಯ ಹೋರಾಟದ ಹಾದಿ ಹಿಡಿಯುವ ಮೊದಲು ಈ ನಿಯಮ ಬದಲಾಗಿ ಸರಳೀಕರಣಗೊಳ್ಳಲಿ ಎಂದರು.ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಸೋಮಶೇಖರ ಕೋತಂಬರಿ, ರೈತ ಸಂಘದ ತಾಲೂಕು ಅಧ್ಯಕ್ಷ ಮರಿಗೌಡ ಪಾಟೀಲ, ರೈತ ಮುಖಂಡರಾದ ರುದ್ರಪ್ಪ ಹಣ್ಣಿ, ಶ್ರೀಕಾಂತ ದುಂಡಣ್ಣನವರ, ಷಣ್ಮುಖಪ್ಪ ಅಂದಲಗಿ, ಅಬ್ದುಲ್‌ಖಾದರ ಮುಲ್ಲಾ ಮೊದಲಾದವರು ಈ ಸಂದರ್ಭದಲ್ಲಿದ್ದರು.