ಸಾರಾಂಶ
ಕನ್ನಡಪ್ರಭ ವಾರ್ತೆ ಗೋಣಿಕೊಪ್ಪನಿವೃತ್ತ ಸೈನಿಕರ ಜಾಗ ಮಂಜೂರಾತಿಗೆ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಸಾರ್ವಜನಿಕ ಹಿತರಕ್ಷಣಾ ಸಮಿತಿ ವತಿಯಿಂದ ಪೊನ್ನಂಪೇಟೆ ತಾಲೂಕು ತಹಸೀಲ್ದಾರ್ ಅವರನ್ನು ಒತ್ತಾಯಿಸಲಾಯಿತು.ಪೊನ್ನಂಪೇಟೆ ಆಡಳಿತ ಕಚೇರಿಯಲ್ಲಿ ತಹಸೀಲ್ದಾರ್ ಪ್ರಶಾಂತ್ ಅವರಿಗೆ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎ.ಎಸ್. ಕಟ್ಟಿ ಮಂದಯ್ಯ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಕಳೆದ 10 ವರ್ಷಗಳಿಂದ ನಿವೃತ್ತ ಸೈನಿಕ ಕಾಳಿಮಾಡ ಬಿ. ಕುಶಾಲಪ್ಪ ಅವರು ಬೀರುಗ ಗ್ರಾಮದಲ್ಲಿರುವ 1/1 ಸರ್ವೆ ನಂಬರಿನ 3 ಎಕರೆ 30 ಸೆಂಟ್ ಜಾಗದ ಕಾಫಿ ತೋಟವನ್ನು ಹೆಸರಿಗೆ ನೋಂದಾಯಿಸುವಂತೆ ಅರ್ಜಿ ಸಲ್ಲಿಸಿದರೂ, ಅರ್ಜಿ ವಿಲೇವಾರಿಗೊಂಡಿಲ್ಲ. ಇಲಾಖೆಯ ಸಿಬ್ಬಂದಿ ಈ ವಿಚಾರವಾಗಿ ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದ ಸಮಿತಿ, ಜಾಗವನ್ನು ತಕ್ಷಣ ಮಂಜೂರು ಮಾಡಿಸಿ ನಿವೃತ್ತ ಸೈನಿಕರಿಗೆ ನ್ಯಾಯ ಒದಗಿಸಿಕೊಡಬೇಕೆಂದು ಕಚೇರಿಯಲ್ಲಿರುವ ಕಡತವನ್ನು ವಿಲೇವಾರಿ ಮಾಡಿಕೊಡಬೇಕೆಂದು ಮನವಿ ಸಲ್ಲಿಸಿತು.ಈ ವಿಚಾರಕ್ಕೆ ಸಂಬಂಧಿಸಿದಂತೆ, ವಿರಾಜಪೇಟೆ ತಹಸೀಲ್ದಾರ್ ಕಚೇರಿಯಿಂದ ಸರ್ವೆ ಕಾರ್ಯವು ನಡೆದಿದೆ. ಕಾಫಿ ಬೋರ್ಡಿನವರು ಕೂಡ ತೋಟವನ್ನು ಪರಿಶೀಲನೆ ನಡೆಸಿದಿದ್ದು, ಈ ಹಿಂದೆ ಕರ್ತವ್ಯದಲ್ಲಿದ್ದ ತಹಸೀಲ್ದಾರ್‌ಗಳು ಸಹ ಸ್ಥಳ ಪರಿಶೀಲಿಸಿದ್ದಾರೆ. ಜಾಗದ ಬಾಬ್ತು ಅನ್ನು ಕಟ್ಟಲಾಗಿದೆ. ಆದರೂ, ಅವರ ಹೆಸರಿಗೆ ಜಾಗ ಮಂಜೂರು ಮಾಡದೇ ಇರುವುದು ತಾಲೂಕು ಆಡಳಿತಕ್ಕೆ ಮಾಜಿ ಸೈನಿಕರ ಮೇಲಿರುವ ಗೌರವವನ್ನು ಪ್ರಶ್ನಿಸುವಂತಾಗಿದೆ ಎಂದು ಅಧ್ಯಕ್ಷ ಅಜ್ಜಮಾಡ ಕಟ್ಟಿ ಮಂದಯ್ಯ ವಿಷಾದ ವ್ಯಕ್ತಪಡಿಸಿದರು.
ತಹಸೀಲ್ದಾರ್ ಕಚೇರಿಯಲ್ಲಿರುವ ಸಾಕಷ್ಟು ಸಿಬ್ಬಂದಿ ಹಣದ ಆಮಿಷವನ್ನು ಒಡ್ಡುತ್ತಿದ್ದಾರೆ. ಇದರಿಂದ ಬಡವರ, ನೊಂದವರ ಕಡತಗಳು ಸಕಾಲದಲ್ಲಿ ವಿಲೇವಾರಿಯಾಗುತ್ತಿಲ್ಲ. ತಹಸೀಲ್ದಾರ್ ಪ್ರಮಾಣಿಕರಾಗಿದ್ದರು, ಕಚೇರಿ ಸಿಬ್ಬಂದಿ ಈ ಬಗ್ಗೆ ಕೈ ಶುದ್ಧತೆ ಇಲ್ಲದೇ ಇರುವುದು ತಾಲೂಕು ಆಡಳಿತಕ್ಕೆ ಲಂಚತನದ ಕಪ್ಪು ಚುಕ್ಕಿ ಅಂಟಿಕೊಂಡಿದೆ. ಇದನ್ನು ತೊಡೆದುಹಾಕುವ ಪ್ರಯತ್ನಕ್ಕೆ ಸಿಬ್ಬಂದಿ ಮೇಲೆ ಶಿಸ್ತು ಕ್ರಮ ಜರುಗಿಸಬೇಕೆಂದು ಕಾರ್ಯದರ್ಶಿ ಅರಮಣಮಾಡ ಸತೀಶ್ ದೇವಯ್ಯ ತಹಸೀಲ್ದಾರ್ ಗಮನಕ್ಕೆ ತಂದರು.ಸಮಿತಿ ಮನವಿಯನ್ನು ಸ್ವೀಕರಿಸಿದ ತಹಸೀಲ್ದಾರ್ ಪ್ರಶಾಂತ್, ಒಂದು ವಾರದೊಳಗೆ ಅರ್ಜಿಯ ಸಾಧಕ ಬಾಧಕಗಳ ಬಗ್ಗೆ ಅಂತಿಮ ನಿರ್ಧಾರವನ್ನು ತಿಳಿಸಲಾಗುವುದು ಎಂದು ಭರವಸೆ ನೀಡಿದರು.
ಪೊನ್ನಂಪೇಟೆ ತಾಲೂಕು ಆಡಳಿತ ಕಚೇರಿಯಲ್ಲಿ ಯಾವುದೇ ಕೆಲಸ ಕಾರ್ಯಗಳಿಗೆ ಹಣ ಪಡೆಯುವುದನ್ನು ನಿರ್ದಾಕ್ಷೀಣ್ಯವಾಗಿ ಖಂಡಿಸಲಾಗಿದೆ. ಈ ಬಗ್ಗೆ ಕಚೇರಿಯ ಪ್ರತಿ ಸಿಬ್ಬಂದಿಗೂ ಖಡಕ್ ಸೂಚನೆ ನೀಡಲಾಗಿದೆ. ಹಣ ಪಡೆದು ಕೆಲಸ ಕಾರ್ಯಗಳನ್ನು ಮಾಡುತ್ತೇವೆ ಎಂದು ಆಮಿಷ ಒಡ್ಡುವವರನ್ನು ಮತ್ತು ಹಣ ಪಡೆಯುವವರ ಬಗ್ಗೆ ತಿಳಿಸಿದರೆ ಅವರ ಮೇಲೆ ಶಿಸ್ತು ಕ್ರಮಕೈಗೊಳ್ಳಲು ಹಿಂಜರಿಯುವುದಿಲ್ಲ ಎಂದು ತಹಸೀಲ್ದಾರ್ ಸಮಜಾಯಿಷಿಕೆ ನೀಡಿದರು.ಜನಪರವಾಗಿ ಸ್ಪಂದಿಸಲು ತಾಲೂಕು ಆಡಳಿತ ಕರ್ತವ್ಯ ನಿರ್ವಹಿಸುತ್ತಿದೆ. ಈ ಬಗ್ಗೆ ಯಾವುದೇ ಸಂಶಯ ಬೇಡ. ತಪ್ಪುಗಳು ಕಂಡುಬಂದರೆ ತಹಸೀಲ್ದಾರ್ ಮೇಲೆ ಎಸಿ ಮತ್ತು ಡಿಸಿಗೆ ದೂರು ಸಲ್ಲಿಸಬಹುದು. ಸಿಬ್ಬಂದಿ ಸಾರ್ವಜನಿಕ ವರ್ತನೆಯಲ್ಲಿ ಅಸಭ್ಯತೆ ಕಂಡುಬಂದರೆ ಅವರ ಮೇಲೆಯೂ ಕ್ರಮ ಕೈಗೊಳ್ಳಲು ಮೇಲಾಧಿಕಾರಿಗಳಿಗೆ ಸೂಚಿಸಲಾಗುವುದು ಎಂದು ದಂಡಾಧಿಕಾರಿ ಪ್ರಶಾಂತ್ ಅವರು ಹಿತರಕ್ಷಣಾ ಸಮಿತಿ ಪದಾಧಿಕಾರಿಗಳಿಗೆ ಸ್ಪಷ್ಟತೆ ನೀಡಿದರು.
ಇದೇ ಸಂದರ್ಭ ತಾಲೂಕು ಆಡಳಿತ ಕಚೇರಿ ಸುತ್ತ ಬೆಳೆದು ನಿಂತಿರುವ ಗಿಡಗಂಟಿಗಳನ್ನು ತೆರವುಗೊಳಿಸಿ ಶುಚಿತ್ವದ ಕಡೆಗೂ ಗಮನ ಹರಿಸಬೇಕು ಎಂದು ಹಿತರಕ್ಷಣಾ ಸಮಿತಿ ಪದಾಧಿಕಾರಿಗಳು ಸಲಹೆ ನೀಡಿದರು.ಕಾರ್ಯಾಧಕ್ಷ ಬಿ.ಎಸ್. ಕಾರ್ಯಪ್ಪ, ಕಾರ್ಯದರ್ಶಿ ಕೋಳೆರ ಸನ್ನು ಕಾವೇರಪ್ಪ, ಸಹ ಕಾರ್ಯದರ್ಶಿ ಕೆ.ಕೆ. ಬೆಳ್ಯಪ್ಪ, ಸದಸ್ಯ ಕಾಳಿಮಾಡ ಮುತ್ತಣ್ಣ, ಸಲಹೆಗಾರ ಚೊಟ್ಟೆಯಾಂಡಮಾಡ ವಿಶ್ವನಾಥ್ ಮತ್ತು ಶಿರಸ್ಥೆದಾರರಾದ ಟ್ರಿಷ, ರವಿಕುಮಾರ್, ಕೇಸ್ ವರ್ಕರ್ ಮೋಹನ್ ಇದ್ದರು.