ಸಾರಾಂಶ
ಮರ್ಲಹಳ್ಳಿ ಗ್ರಾಮದಲ್ಲಿ ಸ. ನಂ.85ರಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯದ 50ಕ್ಕೂ ಹೆಚ್ಚಿನ ಕುಟುಂಬಗಳು ಮನೆ ಕಟ್ಟಿಕೊಂಡು ಕಳೆದ ಐದಾರು ದಶಕದಿಂದ ಜೀವನ ನಡೆಸುತ್ತಿದ್ದಾರೆ
ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು
ಐದಾರು ದಶಕದಿಂದ ಬಾಳಿ ಬದುಕಿರುವ ಜಾಗ ತಮ್ಮೆಂದು ದೌರ್ಜನ್ಯ ನಡೆಸುತ್ತಿರುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ತಾಲೂಕಿನ ಮರ್ಲಹಳ್ಳಿ ಗ್ರಾಮದ ದಲಿತ ಕುಟುಂಬಗಳು ತಹಸೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ.ಇಲ್ಲಿನ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಬುಧವಾರ ಮನವಿ ಸಲ್ಲಿಸಿರುವ ಗ್ರಾಮಸ್ಥರು, ಮರ್ಲಹಳ್ಳಿ ಗ್ರಾಮದಲ್ಲಿ ಸ. ನಂ.85ರಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯದ 50ಕ್ಕೂ ಹೆಚ್ಚಿನ ಕುಟುಂಬಗಳು ಮನೆ ಕಟ್ಟಿಕೊಂಡು ಕಳೆದ ಐದಾರು ದಶಕದಿಂದ ಜೀವನ ನಡೆಸುತ್ತಿದ್ದಾರೆ. ಕಾಲ ಕಾಲಕ್ಕೆ ಕಂದಾಯ ಕಟ್ಟಿಕೊಂಡು ಕಾನೂನು ರೀತಿಯಲ್ಲಿ ಜೀವನ ನಡೆಸುತ್ತಿದ್ದಾರೆ. ಈಗಿದ್ದರೂ ಅಲ್ಲಿನ ಕೆಲವರು ಈ ಜಾಗ ನಮ್ಮದೆಂದು ತಕರಾರು ಮಾಡುತ್ತಾ ದೌರ್ಜನ್ಯ ನಡೆಸುತ್ತಿದ್ದಾರೆ. ಜಾಗ ತೆರವುಗೊಳಿಸುವಂತೆ ಒತ್ತಡ ತರುತ್ತಿದ್ದಾರೆ. ಜಾಗ ಖಾಲಿ ಮಾಡದೆ ಹೋದರೆ ಜೆಸಿಬಿ ತರಿಸಿ ಕೆಡುವುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
50 ಕ್ಕೂ ಹೆಚ್ಚಿನ ವರ್ಷಗಳಿಂದ ಬಾಳಿ ಬದುಕುತ್ತಾ ಕಾನೂನು ರೀತಿಯಲ್ಲಿ ದಾಖಲೆಗಳು ಇದ್ದರೂ ಗ್ರಾಮದ ಗಂಗಮ್ಮ ಎಂಬುವರು ನಿತ್ಯ ನಡೆಸುತ್ತಿರುವ ದೌರ್ಜನ್ಯದಿಂದ ಮಹಿಳೆಯರು ಭಯದಲ್ಲಿ ಬದುಕುವಂತಾಗಿದೆ. ಇವರ ಕಿರುಕುಳದಿಂದ ಒತ್ತಡಕ್ಕೆ ಒಳಗಾಗಿ ಅನಾರೋಗ್ಯ ಪೀಡಿತರಾಗಿ ನಿವೃತ್ತ ಪೇದೆಯೊಬ್ಬರು ಸಾವನ್ನಪ್ಪಿದ್ದಾರೆ. ಭೂ ಮಾಪನ ಇಲಾಖೆಯವರು ಅವರ ಕೈಗೊಂಬೆಯಂತೆ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಕೂಡಲೆ ದಲಿತ ಕುಟುಂಬಗಳಿಗೆ ಮಾನಸಿಕವಾಗಿ ದೌರ್ಜನ್ಯ ನಡೆಸುತ್ತಿರುವ ಗ್ರಾಮದ ಗಂಗಮ್ಮ, ಅನಿಲ್ ಕುಮಾರ್ ಹಾಗೂ ಭೂ ಮಾಪನ ಇಲಾಖೆ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ದಲಿತ ಕುಟುಂಬಗಳಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಿದರು.ಈ ವೇಳೆ ಗ್ರಾಮಸ್ಥರಾದ ದಾನ ಸೂರಯ್ಯ, ಪರಮೇಶ್, ನಾಗರಾಜ, ಹನುಮಂತ, ಸುರೇಶ, ತಿಪ್ಪೇಸ್ವಾಮಿ, ರಾಜು, ಸಾಕಣ್ಣ, ದುರುಗೇಶ ಮರಿಸ್ವಾಮಿ, ಅಶೋಕ ಇದ್ದರು.