ಅರಸು ಮನೆ, ಸಮಾಧಿ ಅಭಿವೃದ್ಧಿಗೆ ಮನವಿ

| Published : May 17 2025, 01:39 AM IST

ಸಾರಾಂಶ

ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರ ಹುಟ್ಟೂರು ಮೈಸೂರು ಜಿಲ್ಲೆ ಕಲ್ಲಹಳ್ಳಿಯ ಅವರ ಮನೆ ಹಾಗೂ ಸಮಾಧಿಯನ್ನು ಸರ್ಕಾರ ಅಭಿವೃದ್ಧಿ ಮಾಡಿ ಸ್ಮಾರಕವಾಗಿ ರೂಪಿಸುವಂತೆ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಮುಖಂಡರು ಶುಕ್ರವಾರ ಸಹಕಾರ ಸಚಿವ ಕೆ.ಎನ್.ರಾಜಣ್ಣನವರಿಗೆ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ, ತುಮಕೂರು

ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರ ಹುಟ್ಟೂರು ಮೈಸೂರು ಜಿಲ್ಲೆ ಕಲ್ಲಹಳ್ಳಿಯ ಅವರ ಮನೆ ಹಾಗೂ ಸಮಾಧಿಯನ್ನು ಸರ್ಕಾರ ಅಭಿವೃದ್ಧಿ ಮಾಡಿ ಸ್ಮಾರಕವಾಗಿ ರೂಪಿಸುವಂತೆ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಮುಖಂಡರು ಶುಕ್ರವಾರ ಸಹಕಾರ ಸಚಿವ ಕೆ.ಎನ್.ರಾಜಣ್ಣನವರಿಗೆ ಮನವಿ ಮಾಡಿದರು.

ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ ಹಲವಾರು ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದರು. ಹಿಂದುಳಿದವರ ಧ್ವನಿಯಾಗಿ, ಶೋಷಿತ ವರ್ಗಗಳ ಆಶಾಕಿರಣವಾಗಿದ್ದ ಅರಸು ಅವರ ಕೊಡುಗೆಯನ್ನು ನಾಡಿನ ಎಲ್ಲರೂ ಸದಾ ಸ್ಮರಿಸಬೇಕು. ಮೈಸೂರು ಜಿಲ್ಲೆಯ ಕಲ್ಲಹಳ್ಳಿಯಲ್ಲಿನ ಅರಸು ಅವರು ಹುಟ್ಟಿದ ಮನೆ ಶಿಥಿಲವಾಗಿದೆ, ಸಮಾಧಿ ಪಾಳುಬಿದ್ದಿದೆ. ಶೇಷ್ಠ ನಾಯಕನ ಗೌರವಾರ್ಥ ಈ ಎರಡೂ ಸ್ಥಳಗಳನ್ನು ರಕ್ಷಣೆ ಮಾಡಿ ಸ್ಮಾರಕಗಳನ್ನಾಗಿ ಅಭಿವೃದ್ಧಿ ಪಡಿಸಬೇಕು ಎಂದು ಒಕ್ಕೂಟದ ಗೌರವಾಧ್ಯಕ್ಷ ಟಿ.ಎನ್.ಮಧುಕರ್, ಅಧ್ಯಕ್ಷ ಧನಿಯಾಕುಮಾರ್ ಹಾಗೂ ಪದಾಧಿಕಾರಿಗಳು ಸಚಿವ ಕೆ.ಎನ್.ರಾಜಣ್ಣನವರಿಗೆ ಮನವಿ ಸಲ್ಲಿಸಿದರು.

ಇದರ ಜೊತೆಗೆ ನಗರದ ದೇವರಾಜ ಅರಸು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಅರಸು ಅವರ ಪುತ್ಥಳಿ ಸ್ಥಾಪನೆ ಮಾಡಬೇಕು ಎಂದು ಕೋರಿದರು.

ಈ ತಿಂಗಳ 19ರಂದು ಮೈಸೂರು ಜಿಲ್ಲೆ ಪ್ರವಾಸ ಹೋಗುವ ಸಂದರ್ಭದಲ್ಲಿ ದೇವರಾಜ ಅರಸು ಅವರ ಮನೆ ಹಾಗೂ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಅಭಿವೃದ್ಧಿಗೆ ಕ್ರಮ ತೆಗೆದುಕೊಳ್ಳುವುದಾಗಿ ಸಚಿವ ಕೆ.ಎನ್.ರಾಜಣ್ಣ ಹೇಳಿದರು.

ಒಕ್ಕೂಟದ ಮುಖಂಡರಾದ ಪಿ.ಮೂರ್ತಿ, ಮಲ್ಲಸಂದ್ರ ಶಿವಣ್ಣ, ಡಿ.ಎಂ.ಸತೀಶ್, ಲಕ್ಷ್ಮಿಕಾಂತರಾಜೇ ಅರಸು, ಹರೀಶ್ ಆಚಾರ್ಯ, ಮಂಜೇಶ್ ಒಲಂಪಿಕ್, ಶಾಂತಕುಮಾರ್, ಗುರುರಾಘವೇಂದ್ರ, ಡಮರುಗೇಶ್ ಮೊದಲಾದವರು ಹಾಜರಿದ್ದರು.