ಚಿಕ್ಕಮಗಳೂರು ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನೀಡುತ್ತಿರುವ ವಿವಿಧ ಸೌಲಭ್ಯಗಳನ್ನು ಪಡೆಯಲು ಸಮುದಾಯದವರು ಮುಂದಾಗದೆ ಇರುವುದು ವಿಷಾಧಕರ ಎಂದು ನಿರ್ದೇಶಕ ಮಾಲತೇಶ್ ತಿಳಿಸಿದರು.

ವಿವಿಧ ಸೌಲಭ್ಯಗಳ ಕುರಿತು ಮಾಹಿತಿ ನೀಡಿದ ಮಾಲತೇಶ್

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನೀಡುತ್ತಿರುವ ವಿವಿಧ ಸೌಲಭ್ಯಗಳನ್ನು ಪಡೆಯಲು ಸಮುದಾಯದವರು ಮುಂದಾಗದೆ ಇರುವುದು ವಿಷಾಧಕರ ಎಂದು ನಿರ್ದೇಶಕ ಮಾಲತೇಶ್ ತಿಳಿಸಿದರು.ನಗರದ ಬ್ರಹ್ಮಸಮುದ್ರ ಶ್ರೀ ರಂಗಣ್ಣನವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ವಿವಿಧ ಸೌಲಭ್ಯ ಗಳ ಕುರಿತು ಮಾಹಿತಿ ನೀಡಿ 24-25 ಹಾಗೂ 25-26ನೇ ಸಾಲಿನಲ್ಲಿ ಸರ್ಕಾರ ಬಿಡುಗಡೆ ಮಾಡಿದ್ದ ₹10 ಕೋಟಿ ಅನುದಾನದಲ್ಲಿ ₹3.5 ಕೋಟಿ ಮಾತ್ರ ಬಳಕೆ ಆಗಿದ್ದು ಉಳಿದ ಹಣ ಸರ್ಕಾರಕ್ಕೆ ವಾಪಾಸಾಗಿದೆ ಎಂದು ತಿಳಿಸಿದರು.ಮಂಡಳಿ ವಿವಿಧ ಸೌಲಭ್ಯ ನೀಡಲು ಮುಂದಾದರು ಅದನ್ನು ಪಡೆದುಕೊಳ್ಳಲು ಸಮುದಾಯದವರು ಬರುತ್ತಿಲ್ಲ. ಹಾಗಾಗಿ ವಿವಿಧೆಡೆ ಸಭೆಗಳನ್ನು ಮಾಡುವ ಸೌಲಭ್ಯಗಳ ಮಾಹಿತಿ ನೀಡಲು ಮುಂದಾಗಿರುವುದಾಗಿ ತಿಳಿಸಿ, ಸಭೆ ನಡೆಸುವುದರಿಂದ ಸೌಲಭ್ಯಗಳ ನೀಡಿಕೆಯಲ್ಲಿ ಆಗುತ್ತಿರುವ ಅನಾನುಕೂಲತೆ ನಿವಾರಿಸುತ್ತಿರುವುದರಿಂದ ಬೆರಳೆಣಿಕೆಯಷ್ಟಿದ್ದ ಅರ್ಜಿಗಳ ಸಂಖ್ಯೆ ಇಂದು ಸಾವಿರಕ್ಕೂ ಮೀರಿ ಬರುತ್ತಿದೆ ಎಂದರು.ಕೇವಲ 11 ಸಭೆಗಳನ್ನು ಇಲ್ಲಿಯವರಗೆ ಮಾಡಿದ್ದು, ಅದರಿಂದ 1333 ಅರ್ಜಿ ಬಂದಿದ್ದು ಇದಕ್ಕೆ ₹16 ಕೋಟಿ ಬೇಕಾಗಿದ್ದು ಮಂಡಳಿ ಯಲ್ಲಿರುವ ೮ಕೋಟಿ ಮೊದಲು ವಿತರಿಸಿದ ನಂತರ ಉಳಿದ ₹8 ಕೋಟಿ ಬಿಡುಗಡೆ ಮಾಡುವುದಾಗಿ ಸರ್ಕಾರ ಭರವಸೆ ನೀಡಿದೆ ಎಂದರು.ಇದರಲ್ಲಿ ಪ್ರಮುಖ ವಾಗಿ ನೀಡುತ್ತಿರುವ ನೇರ ಸಾಲ ಯೋಜನೆಯಲ್ಲಿ ₹ 2ಲಕ್ಷ ವಿತರಿಸುತ್ತಿದ್ದು ಇದರಲ್ಲಿ ಶೇ.33 ಮಹಿಳೆಯರಿಗೆ, ಶೇ 2 ಅಂಗವಿಕಲರಿಗೆ ಸೇರಿದಂತೆ ಉಳಿಕೆಯನ್ನು ಇತರರಿಗೆ ನೀಡಲಾಗುತ್ತಿದೆ. ₹2 ಲಕ್ಷದಲ್ಲಿ 40 ಸಾವಿರ ಸಬ್ಸೀಡಿ ನೀಡಿ ಕೇವಲ ಶೇ.೪ ಬಡ್ಡಿ ವಿಧಿಸಲಾಗುತ್ತಿದೆ ಎಂದರು. ಎಕೆಬಿಎಂಎಸ್ ನ ಜಿಲ್ಲಾ ಪ್ರತಿನಿಧಿ ಡಾ.ಜಿ.ಎಸ್.ಮಹಾಬಲ ಪ್ರಾಸ್ತಾವಿಕವಾಗಿ ಮಾತನಾಡಿ, ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದವರು ಸೌಲಭ್ಯ ಪಡೆಯಲು ಮುಂದಾಗಬೇಕೆಂದರು. ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಮಂಜುನಾಥ ಜೋಷಿ ಮಾತನಾಡಿ ಇಡಬ್ಲ್ಯುಎಸ್ ಸರ್ಟಿಫಿಕೇಟ್ ಪಡೆದುಕೊಳ್ಳಲು ಆಗುತ್ತಿರುವ ಅನಾನುಕೂಲ ನಿವಾರಿಸಿಕೊಡಬೇಕೆಂದು ಮನವಿ ಮಾಡಿದರು.ಕೊಪ್ಪ ಬ್ರಾಹ್ಮಣ ಮಹಾ ಸಭಾದ ಕೃಷ್ಣಮೂರ್ತಿ ಮಾತನಾಡಿದರು. ರಂಗನಾಥನ್ ಸ್ವಾಗತಿಸಿದರು. ಸುಮಾ ಪ್ರಸಾದ್ ನಿರೂಪಿಸಿದರು. ಮಹಾಸಭಾದ ಎಲ್ಲಾ ನಿರ್ದೇಶಕರು ಉಪಸ್ಥಿತರಿದ್ದರು. ಚೈತ್ರ ಪ್ರವೀಣ್ ವಂದಿಸಿದರು.