ಸಾರಾಂಶ
ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರು ಅನುದಾನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಸಂಸದ ಗೋವಿಂದ ಕಾರಜೋಳ ಸೋಮವಾರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮನವಿ ಮಾಡಿದರು.
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಮಧ್ಯ ಕರ್ನಾಟಕದ ಬಯಲು ಸೀಮೆ ಪ್ರದೇಶಗಳಿಗೆ ನೀರುಣಿಸುವ ಮಹತ್ವದ ಭದ್ರಾ ಮೇಲ್ಡಂಡೆ ಯೋಜನೆಗೆ ಬಜೆಟ್ ಘೋಷಿತ 5300 ಕೋಟಿ ರು.ಅನುದಾನ ಬಿಡುಗಡೆ ಮಾಡುವಂತೆ ಸಂಸದ ಗೋವಿಂದ ಕಾರಜೋಳ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಲ್ಲಿ ಮನವಿ ಮಾಡಿದ್ದಾರೆ.ನವ ದೆಹಲ್ಲಿಯಲ್ಲಿ ಸೋಮವಾರ ಅಮಿತ್ ಶಾ ಅವರನ್ನು ಭೇಟಿ ಮಾಡಿದ ಕಾರಜೋಳ, ಪ್ರಧಾನಿ ನರೇಂದ್ರ ಮೋದಿ ಅವರು ಭದ್ರಾ ಮೇಲ್ದಂಡೆಗೆ 5300 ಕೋಟಿ ರು. ನೆರವು ನೀಡುವುದಾಗಿ ಚಿತ್ರದುರ್ಗದಲ್ಲಿ ಘೋಷಣೆ ಮಾಡಿದ್ದರು. 2023 ರ ಕೇಂದ್ರ ಬಜೆಟ್ ನಲ್ಲಿಯೂ ಅನುದಾನ ಬಿಡುಗಡೆ ಪ್ರಸ್ತಾಪವಾಗಿದೆ. ಹಾಗಾಗಿ ತುರ್ತು ಅನುದಾನ ಬಿಡುಗಡೆಗೆ ಕ್ರಮ ಕೈಗೊಂಡು ಯೋಜನೆ ಪೂರ್ಣಗೊಳ್ಳಲು ಸಹಕರಿಸುವಂತೆ ಮನವಿ ಮಾಡಿದರು.
ಚಿತ್ರದುರ್ಗ ಜಿಲ್ಲೆಯಲ್ಲಿ ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳ ಶೈಕ್ಷಣಿಕ ಅನುಕೂಲಕ್ಕಾಗಿ ಇನ್ನೊಂದು ಏಕಲವ್ಯ ಮಾದರಿ ವಸತಿ ಶಾಲೆ ಮಂಜೂರು ಮಾಡುವಂತೆ ಇದೇ ಸಂದರ್ಭದಲ್ಲಿ ಮನವಿ ಮಾಡಿದರು. ಗೋವಿಂದ ಕಾರಜೋಳ ಅವರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಅಮಿತ್ ಶಾ, ಅನುದಾನ ಬಿಡುಗಡೆಗೆ ಸಂಬಂಧಿಸಿದವರ ಗಮನ ಸೆಳೆದು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.