ಹಸಿ ಅಡಕೆ ಶೇಖರಣೆ ಸಂಶೋಧನೆಗೆ ಮನವಿ: ಬಸವರಾಜಪ್ಪ

| Published : Jul 04 2025, 12:32 AM IST / Updated: Jul 04 2025, 12:33 AM IST

ಹಸಿ ಅಡಕೆ ಶೇಖರಣೆ ಸಂಶೋಧನೆಗೆ ಮನವಿ: ಬಸವರಾಜಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಕೊಯ್ಲಿಗೆ ಬಂದ ಹಸಿ ಅಡಕೆ ಕೆಡದಂತೆ ವೈಜ್ಞಾನಿಕವಾಗಿ ಶೇಖರಣೆ ಮಾಡುವ ಬಗ್ಗೆ ಸಂಶೋಧನೆ ನಡೆಸುವಂತೆ ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯದ ಕುಲಪತಿ ಡಾ.ಆರ್.ಸಿ.ಜಗದೀಶ್ ಅವರಿಗೆ ಕೃಷಿಕರ ತಂಡದಿಂದ ಮನವಿ ಸಲ್ಲಿಸಲಾಗಿದೆ ಎಂದು ಜಿಲ್ಲಾ ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಪಿ.ಕೆ.ಬಸವರಾಜಪ್ಪ ತಿಳಿಸಿದ್ದಾರೆ.

ನರಸಿಂಹರಾಜಪುರ: ಕೊಯ್ಲಿಗೆ ಬಂದ ಹಸಿ ಅಡಕೆ ಕೆಡದಂತೆ ವೈಜ್ಞಾನಿಕವಾಗಿ ಶೇಖರಣೆ ಮಾಡುವ ಬಗ್ಗೆ ಸಂಶೋಧನೆ ನಡೆಸುವಂತೆ ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯದ ಕುಲಪತಿ ಡಾ.ಆರ್.ಸಿ.ಜಗದೀಶ್ ಅವರಿಗೆ ಕೃಷಿಕರ ತಂಡದಿಂದ ಮನವಿ ಸಲ್ಲಿಸಲಾಗಿದೆ ಎಂದು ಜಿಲ್ಲಾ ಕೃಷಿಕ ಸಮಾಜದ ಪ್ರಧಾನ ಕಾರ್ಯದರ್ಶಿ ಪಿ.ಕೆ.ಬಸವರಾಜಪ್ಪ ತಿಳಿಸಿದ್ದಾರೆ.

ನಮ್ಮ ಮನವಿಗೆ ಸ್ಪಂದಿಸಿ ಕುಲಪತಿ ಡಾ.ಆರ್.ಸಿ.ಜಗದೀಶ್ ನಮ್ಮ ತಂಡದೊಂದಿಗೆ ಮಾತನಾಡಿ, ಪ್ರಸ್ತುತ ಅಡಕೆ ಬೆಳೆಗಾರರು ಅಡಕೆ ಸಂಸ್ಕರಣೆಯಲ್ಲಿ ಅನುಭವಿಸುತ್ತಿರುವ ತೊಂದರೆ, ಅಕಾಲಿಕ ಮಳೆ, ಕೃಷಿ ಕಾರ್ಮಿಕರ ಕೊರತೆಯಿಂದ ನಷ್ಟ ಅನುಭವಿಸುತ್ತಿದ್ದಾರೆ. ಹಸಿ ಅಡಕೆ ಶೇಖರಣೆ ಮಾಡುವುದರಿಂದ ಎಷ್ಟು ದಿನ ಹಾಳಾಗದಂತೆ ಅಡಕೆ ಇಡುವ ಬಗ್ಗೆ ಸಂಶೋಧನೆ ಮಾಡಲು ಅಡಕೆ ಬೆಳೆಗಾರರೇ ಬಯಸುತ್ತಿರುವುದು ಹಾಗೂ ರೈತರು ಮುಂದಾಲೋಚನೆ ಮಾಡುತ್ತಿರುವುದು ನಮ್ಮ ಕೃಷಿ ಸಂಶೋಧನಾ ಕೇಂದ್ರಕ್ಕೂ ಹೆಮ್ಮೆಯಾಗಿದೆ. ನಮ್ಮ ವಿಶ್ವ ವಿದ್ಯಾಲಯದ ಆಶಯವೂ ಇದೇ ಆಗಿದೆ.

ರೈತರು ಆರ್ಥಿಕವಾಗಿ ಸಬಲರಾಗಬೇಕು ಹಾಗೂ ಸ್ವಾವಲಂಭಿಗಳಾಗಿ ಬದುಕಬೇಕು. ಹಸಿ ಅಡಕೆಯನ್ನು ವೈಜ್ಞಾನಿಕವಾಗಿ ಶೇಖರಿಸಿಟ್ಟರೆ ಇದರ ನೈಜತೆ ಎಷ್ಟು ದಿನ ಉಳಿಯಬಲ್ಲದು ಎಂಬುದರ ಬಗ್ಗೆ ಇಂದಿನಿಂದಲೇ ಸಂಶೋಧನೆ ನಡೆಸಲು ಅಡಕೆ ಸಂಶೋಧನಾ ತಂಡದ ಮುಖ್ಯಸ್ಥ ಡಾ.ನಾಗರಾಜಪ್ಪ ಅವರಿಗೆ ಸೂಚಿಸುತ್ತೇನೆ ಎಂದು ಅವರು ಭರವಸೆ ನೀಡಿದರು ಎಂದು ಪಿ.ಕೆ.ಬಸವರಾಜಪ್ಪ ವಿವರಿಸಿದ್ದಾರೆ.

ಮನವಿ ಸಲ್ಲಿಸುವ ವೇಳೆ ನರಸಿಂಹರಾಜಪುರ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಪಿ.ಕೆ.ಬಸವರಾಜಪ್ಪ, ಶೃಂಗೇರಿ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಕೆ.ಎನ್.ಗೋಪಾಲಹೆಗ್ಡೆ, ಬಿ.ಕೆ.ಜಾನಕೀರಾಂ, ವಿಜ್ಞಾನಿ ಡಾ.ನಾಗರಾಜಪ್ಪ ಅಡಿವಪ್ಪರ್, ಎಂ.ಜಿ.ರೋಹಿತ್ ಇದ್ದರು ಎಂದು ಅವರು ತಿಳಿಸಿದ್ದಾರೆ.