ಸಾರಾಂಶ
ಸರ್ಕಾರಿ ನೌಕರರ ಸಂಘದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ವಿವಿಧ ಹಾಸ್ಟೆಲ್ ವಾರ್ಡನ್‌ಗಳು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ, ಸಾಕಷ್ಟು ಸಮಸ್ಯೆಗಳಿದ್ದು, ಕೂಲಂಕುಷವಾಗಿ ಪರಿಶೀಲಿಸಿ ಇತ್ಯರ್ಥ ಮಾಡುವಂತೆ ಮನವಿ ಮಾಡಿದರು.
ಕನ್ನಡಪ್ರಭ ವಾರ್ತೆ ರಾಯಚೂರು
ಜಿಲ್ಲೆಯ 25-30 ಬಿಸಿಎಂ, ಅಲ್ಪಸಂಖ್ಯಾತರ, ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಹಾಸ್ಟೆಲ್ ವಾರ್ಡನ್‌ಗಳ ಸಮಸ್ಯೆ ನಿವಾರಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.ಸರ್ಕಾರಿ ನೌಕರರ ಸಂಘದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ವಿವಿಧ ಹಾಸ್ಟೆಲ್ ವಾರ್ಡನ್‌ಗಳು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ, ಡಿಸಿ ಎಲ್.ಚಂದ್ರಶೇಖರ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಸಾಕಷ್ಟು ಸಮಸ್ಯೆಗಳಿದ್ದು, ಕೂಲಂಕುಷವಾಗಿ ಪರಿಶೀಲಿಸಿ ಇತ್ಯರ್ಥ ಮಾಡುವಂತೆ ಮನವಿ ಮಾಡಿದರು.
ಹಾಸ್ಟೆಲ್‌ಗಳಿಗೆ ಪ್ರತಿ ತಿಂಗಳು ಸಮಯಕ್ಕೆ ಸರಿಯಾಗಿ ಆಹಾರ ಧಾನ್ಯ, ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ದೂರುಗಳು ಅಮಾನತು ಪ್ರಕರಣಗಳ ಕುರಿತು ಪರಿಶೀಲಿಸಿ ವಿಚಾರಣಾ ನೋಟಿಸ್ ನೀಡುವ ಮೂಲಕ ಪ್ರಕರಣಗಳ ಕುರಿತು ಕೂಲಂಕುಷವಾಗಿ ಪರಿಶೀಲಿಸಿ ಕ್ರಮ ಜರುಗಿಸಬೇಕು. ಸಾರ್ವಜನಿಕರು ಕೊಡುವ ದೂರುಗಳ ಆಧಾರದ ಮೇಲೆ ಕ್ರಮ ವಹಿಸದೆ ಸ್ಥಳಕ್ಕೆ ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆದ ಬಳಿಕವೇ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು. ಕುಡಿಯುವ ನೀರು ಮತ್ತು ಶೌಚಾಲಯ ಸ್ವಚ್ಛತೆಗಳ ಬಗ್ಗೆ ಮತ್ತು ಇತರೆ ಬಿಲ್‌ಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸಹಕರಿಸಿ ವಾರ್ಡನ್‌ಗಳಿಗೆ ಕರ್ತವ್ಯ ನಿರ್ವಹಿಸಲು ನೈತಿಕ ಬೆಂಬಲ ನೀಡುವ ಕುರಿತು ಮನವಿ ಮಾಡಿದರು.ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ ಜಿಲ್ಲಾಧಿಕಾರಿ, ಜಿಲ್ಲಾಡಳಿತ ನಿಮ್ಮೊಂದಿಗೆ ಇದೆ. ಉತ್ತಮವಾಗಿ ಕಾರ್ಯ ನಿರ್ವಹಿಸಿ. ನಿಮ್ಮೆಲ್ಲ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳ ಸಭೆ ಕರೆದು ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು. ಸರ್ಕಾರಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಬಿರಾದಾರ ಸೇರಿ ವಿವಿಧ ವಸತಿ ನಿಲಯಗಳ ವಾರ್ಡನ್ ಇದ್ದರು.