ಬೆಳೆ ಹಾನಿ ಪರಿಹಾರ ನೀಡಲು ರೈತ ಸಂಘದಿಂದ ಮನವಿ

| Published : Oct 29 2024, 12:57 AM IST

ಸಾರಾಂಶ

ಸರ್ಕಾರ ಫಸಲ್ ಬಿಮಾ ಯೋಜನೆಯಡಿ ರೈತರ ಬೆಳೆ ವಿಮೆ ಹಣ ಶೀಘ್ರದಲ್ಲಿ ಬಿಡುಗಡೆ ಮಾಡಿ ರೈತರ ಸಂಕಷ್ಟ ದೂರ ಮಾಡಬೇಕು ಎಂದು ಮನವಿ ಮಾಡಲಾಯಿತು.

ಲಕ್ಷ್ಮೇಶ್ವರ: ತಾಲೂಕಿನಲ್ಲಿ ಅಕ್ಟೋಬರ್ ತಿಂಗಳಲ್ಲಿ ಸುರಿದ ಅತಿಯಾದ ಮಳೆಗೆ ಬೆಳೆಗಳು ಸಂಪೂರ್ಣ ಹಾಳಾಗಿದ್ದರಿಂದ ಸರ್ಕಾರ ಫಸಲ್ ಬಿಮಾ ಯೋಜನೆಯಡಿ ರೈತರಿಗೆ ಮಧ್ಯಂತರ ಪರಿಹಾರವಾಗಿ ಶೇ. 25ರಷ್ಟು ಹಣ ಶೀಘ್ರದಲ್ಲಿ ಬಿಡುಗಡೆ ಮಾಡಬೇಕು ಎಂದು ರಾಜ್ಯ ರೈತ ಸಂಘದ ವತಿಯಿಂದ ತಹಸೀಲ್ದಾರ್ ವಾಸುದೇವ ಸ್ವಾಮಿ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ಈ ವೇಳೆ ತಾಲೂಕು ಅಧ್ಯಕ್ಷ ಚಂದ್ರು ಕಳ್ಳಿಹಾಳ ಮಾತನಾಡಿ, ಲಕ್ಷ್ಮೇಶ್ವರ ತಾಲೂಕಿನಲ್ಲಿ ಕಳೆದ 2-3 ತಿಂಗಳಿಂದ ಸುರಿಯುತ್ತಿರುವ ಅತಿಯಾದ ಮಳೆಗೆ ಮುಂಗಾರು ಹಂಗಾಮಿನ ಬೆಳೆಗಳು ಕೊಳೆತು ಹೋಗಿವೆ. ಗೋವಿನ ಜೋಳ, ಬಿಟಿ ಹತ್ತಿ, ಈರುಳ್ಳಿ, ಮೆಣಸಿನಕಾಯಿ, ಶೇಂಗಾ ಬೆಳೆಗಳು ನಾಶವಾಗಿವೆ. ಇದರಿಂದ ರೈತರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ, ಸರ್ಕಾರ ಫಸಲ್ ಬಿಮಾ ಯೋಜನೆಯಡಿ ರೈತರ ಬೆಳೆ ವಿಮೆ ಹಣ ಶೀಘ್ರದಲ್ಲಿ ಬಿಡುಗಡೆ ಮಾಡಿ ರೈತರ ಸಂಕಷ್ಟ ದೂರ ಮಾಡಬೇಕು. ಅಲ್ಲದೆ ಬೆಳೆ‌ಹಾನಿ ಸಮೀಕ್ಷೆ ನಡೆಸಿ ಮಧ್ಯಂತರ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಇಲಾಖೆಯ ಅಧಿಕಾರಿಗಳ ಸಹಯೋಗದಲ್ಲಿ ಸಭೆ ನಡೆಸಿ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕಾರ್ಯ ಮಾಡಬೇಕು ಎಂದು ಹೇಳಿದರು.

ತಹಸೀಲ್ದಾರ್ ವಾಸುದೇವ ಸ್ವಾಮಿ ಮಾತನಾಡಿ, ಸರ್ಕಾರಕ್ಕೆ ನಿಮ್ಮ ಅಹವಾಲು ಕಳುಹಿಸಿಕೊಡುತ್ತೇವೆ. ಸರ್ಕಾರದ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಈ ವೇಳೆ ಹನುಮಂತ ಹುಚ್ಚಣ್ಣವರ, ರಮೇಶ ದೊಡ್ಡಮನಿ, ಚಂದ್ರು ಶಿರನಹಳ್ಳಿ, ಶಂಬಣ್ಣ ಬಳಿಗಾರ, ಬಸವರಾಜ ಮೂಲಿಮನಿ, ರವಿ ಲಮಾಣಿ, ದೇವಪ್ಪ ರಾಹುಲ್, ದೇವಪ್ಪ ದಾಸಣ್ಣವರ ಇದ್ದರು.