ಬೇಡಿಕೆ ಈಡೇರಿಸಲು ರೈಲ್ವೆ ಬಳಕೆದಾರರ ಸಲಹಾ ಸಮಿತಿಯಿಂದ ಮನವಿ

| Published : Sep 16 2025, 01:00 AM IST

ಸಾರಾಂಶ

ಹುಬ್ಬಳ್ಳಿ-ಜೋಧಪುರ ವಿಶೇಷ ರೈಲು ಸಂಚಾರ ಪ್ರಾರಂಭಿಸಿದ್ದರಿಂದ ಕರ್ನಾಟಕ ಹಾಗೂ ರಾಜ್ಯಸ್ತಾನ ರಾಜ್ಯಗಳ ಮಧ್ಯೆ ಪ್ರವಾಸೋದ್ಯಮ, ವ್ಯಾಪಾರ ಹೆಚ್ಚಳದ ಜತೆಗೆ ಕುಟುಂಬ ಸಂಬಂಧಗಳು ಸಹ ಬಲಗೊಂಡಿವೆ. ಈ ರೈಲು ವಾರಕ್ಕೆ ಎರಡು ಬಾರಿ ಸಂಚರಿಸುವಂತೆ ಮನವಿ ಮಾಡಿದರು.

ಹುಬ್ಬಳ್ಳಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವಲಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ ಮಹೇಂದ್ರ ಸಿಂಘಿ ನೇತೃತ್ವದ ನಿಯೋಗವು ಸೋಮವಾರ ಸಚಿವ ವಿ. ಸೋಮಣ್ಣ ಅವರಿಗೆ ನಗರದಲ್ಲಿ ಮನವಿ ಸಲ್ಲಿಸಿದರು.

ಹುಬ್ಬಳ್ಳಿ-ಜೋಧಪುರ ವಿಶೇಷ ರೈಲು ಸಂಚಾರ ಪ್ರಾರಂಭಿಸಿದ್ದರಿಂದ ಕರ್ನಾಟಕ ಹಾಗೂ ರಾಜ್ಯಸ್ತಾನ ರಾಜ್ಯಗಳ ಮಧ್ಯೆ ಪ್ರವಾಸೋದ್ಯಮ, ವ್ಯಾಪಾರ ಹೆಚ್ಚಳದ ಜತೆಗೆ ಕುಟುಂಬ ಸಂಬಂಧಗಳು ಸಹ ಬಲಗೊಂಡಿವೆ. ಈ ರೈಲು ವಾರಕ್ಕೆ ಎರಡು ಬಾರಿ ಸಂಚರಿಸುವಂತೆ ಮನವಿ ಮಾಡಿದರು.

ಹುಬ್ಬಳ್ಳಿ-ದಾದರ ಎಕ್ಸ್ ಪ್ರೆಸ್ ರೈಲಿನ ನವೀಕರಣ ಮತ್ತು ಎಲ್‌ಎಚ್‌ಬಿ ಬೋಗಿಗಳಾಗಿ ಪರಿವರ್ತನೆ ಮಾಡಲು ಮನವಿ ಮಾಡಿದ ನಿಯೋಗವು, ಈ ರೈಲು ಉತ್ತರ ಕರ್ನಾಟಕ-ಮುಂಬೈ ಸಂಪರ್ಕದ ಜೀವನಾಡಿಯಾಗಿದೆ. ಐಸಿಎಫ್ ಹಳೇ ಬೋಗಿಗಳೊಂದಿಗೆ ಸಂಚರಿಸುತ್ತಿದೆ. ಈ ಬೋಗಿಗಳಲ್ಲಿ ಸುರಕ್ಷತೆಯ ಕೊರತೆಯಿದ್ದು, ಆರಾಮ ಹಾಗೂ ಸುಧೀರ್ಘ ಅವಧಿಯ ದೃಷ್ಟಿಯಿಂದ ಎಲ್‌ಎಚ್‌ಬಿ ಬೋಗಿಗಳನ್ನಾಗಿ ಪರಿವರ್ತಿಸಬೇಕು. ಸದ್ಯ ದಾದರವರೆಗೆ ಸಂಚರಿಸುವ ಈ ರೈಲಿನ ಸಂಚಾರವನ್ನು ಮುಂಬೈನ ಸಿಎಸ್‌ಎಂಟಿ ನಿಲ್ದಾಣದ ವರೆಗೆ ವಿಸ್ತರಿಸಬೇಕು ಎಂದು ಕೋರಿದರು.

ಹುಬ್ಬಳ್ಳಿ- ಅಂಕೋಲಾ ಹೊಸ ರೈಲು ಮಾರ್ಗವನ್ನು ತ್ವರಿತಗೊಳಿಸುವುದು, ಗದಗ-ಲಕ್ಷ್ಮೇಶ್ವರ -ಯಳವಗಿ-ಹಾವೇರಿ ಹೊಸ ರೈಲು ಮಾರ್ಗಕ್ಕೆ ಅನುಮೋದನೆ ನೀಡುವುದು, ಹುಬ್ಬಳ್ಳಿ -ಮಂತ್ರಾಲಯ ರೈಲು ಸೌಲಭ್ಯ ಪ್ರಾರಂಭಿಸಬೇಕು. ಹುಬ್ಬಳ್ಳಿ-ಚೆನೈ ಸೆಂಟ್ರಲ್ ಎಕ್ಸ್‌ಪ್ರೆಸ್‌ ರೈಲು ನಿತ್ಯ ಸಂಚರಿಸುವಂತಾಗಬೇಕು. ಹುಬ್ಬಳ್ಳಿ-ಹೈದ್ರಾಬಾದ್ ನೇರ ರೈಲು ಸೇವೆ ಪ್ರಾರಂಭಿಸಬೇಕು. ಹುಬ್ಬಳ್ಳಿ -ಮುಂಬೈ ಹಾಗೂ ಬೆಳಗಾವಿ-ಬೆಂಗಳೂರು ಮಧ್ಯೆ ವಂದೇ ಭಾರತ್ ಸ್ಟೀಪರ್ ರೈಲು ಸಂಚಾರ ಪ್ರಾರಂಭಿಸುವುದು ಸೇರಿದಂತೆ ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಉದ್ಯಮಿ ಡಾ. ವಿ.ಎಸ್.ವಿ. ಪ್ರಸಾದ, ವಲಯ ರೇಲ್ವೆ ಬಳಕೆದಾರರ ಸಲಹಾ ಸಮಿತಿ ಮಾಜಿ ಸದಸ್ಯ ಗೌತಮ ಗುಲೇಚ್ಚ, ಸುಭಾಷ ಡಂಕ ಸೇರಿದಂತೆ ಹಲವರಿದ್ದರು.