ಸಾರಾಂಶ
ದೇಶದಲ್ಲಿ ಅತಿಹೆಚ್ಚು ಅಸಂಘಟಿತ, ಸ್ವೀಂ ಮತ್ತು ಅನೌಪಚಾರಿಕ ಕಾರ್ಮಿಕರನ್ನು ಕಾನೂನುಗಳಡಿಯಲ್ಲಿ ತರಬೇಕು
ಅಂಕೋಲಾ: ದುಡಿಯುವ ಜನರ ಸ್ವಾಯತ್ತತೆಗೆ ಭಂಗ ತರುವ ನಾಲ್ಕು ಕರಾಳ ಕಾರ್ಮಿಕ ಸಂಹಿತೆಗಳ ವಾಪಸ್ ಪಡೆಯಲು ಆಗ್ರಹಿಸಿ ಹಾಗೂ ಕೃಷಿ ಉತ್ಪನ್ನಗಳಿಗೆ ಯೋಗ್ಯ ಬೆಂಬಲ ಬೆಲೆ ನೀಡುವಂತೆ ಒತ್ತಾಯಿಸಿ ಅಖಿಲ ಕಾರ್ಮಿಕ ಸಂಘಗಳ ಜಂಟಿ ಸಮಿತಿ (ಜೆಸಿಟಿಯು), ಸಿಐಟಿಯು, ಎಸ್ಕೆಎಂ, ಕರ್ನಾಟಕ ಪ್ರಾಂತ ರೈತ ಸಂಘ ಅಂಕೋಲಾ ತಾಲೂಕು ಘಟಕ ಆಶ್ರಯದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ ಮೂಲಕ ಪ್ರದಾನಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶಾಂತಾರಾಮ ನಾಯಕ ಮಾತನಾಡಿ, ಅಭಿವೃದ್ಧಿಯ ಹೆಸರಿನಲ್ಲಿ ಕಾರ್ಪೊರೇಟ್ ಕಂಪನಿಗಳ ಸೇವಕರನ್ನಾಗಿ ಮಾಡಲು ವೇತನ ಸಂಹಿತೆಯಲ್ಲಿ 4 ಕಾನೂನು, ಕೈಗಾರಿಕಾ ಬಾಂಧವ್ಯ ಸಂಹಿತೆಯಲ್ಲಿ 3 ಕಾನೂನು ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆಯಲ್ಲಿ 13 ಕಾನೂನು ಮತ್ತು ಸಾಮಾಜಿಕ ಭದ್ರತಾ ಸಂಹಿತೆಯಲ್ಲಿ 9 ಕಾನೂನು ಸೇರಿದಂತೆ ಒಟ್ಟು 29 ಕಾನೂನುಗಳನ್ನು 4 ಸಂಹಿತೆಗಳಲ್ಲಿ ರೂಪೀಕರಿಸಲಾಗಿದೆ.ದೇಶದಲ್ಲಿ ಅತಿಹೆಚ್ಚು ಅಸಂಘಟಿತ, ಸ್ವೀಂ ಮತ್ತು ಅನೌಪಚಾರಿಕ ಕಾರ್ಮಿಕರನ್ನು ಕಾನೂನುಗಳಡಿಯಲ್ಲಿ ತರಬೇಕು ಮತ್ತು ₹ 600 ದಿನದ ವೇತನ ನಿಗದಿ ಮಾಡಬೇಕೆಂಬ ಕೇಂದ್ರ ಕಾರ್ಮಿಕ ಸಂಘಟನೆಗಳ ಬೇಡಿಕೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ ಇದು ಘೋರ ಅನ್ಯಾಯವಾಗಿದೆ ಎಂದರು.
ಸಂಘಟನೆಯ ಪ್ರಮುಖರಾದ ಎಚ್.ಬಿ.ನಾಯಕ, ಗೌರೀಶ ನಾಯಕ, ಗೀತಾ ಗೌಡ, ಪೂರ್ಣಿಮಾ ನಾಯ್ಕ, ವೆಂಕಟರಮಣ ಗೌಡ, ಮಾದೇವ ಗೌಡ, ಸಂತೋಷ ನಾಯ್ಕ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.